ಪರವಾನಗಿ, ದಾಖಲೆ ಇಲ್ಲದ ಹೋಂ ಸ್ಟೇ ಮೇಲೆ ಅಧಿಕಾರಿಗಳ ದಾಳಿ
ಮಡಿಕೇರಿ, ಡಿಸೆಂಬರ್ 16: ನಗರಸಭೆಯ ಅನುಮತಿ ಇಲ್ಲದೆ ರಾಜಾರೋಷವಾಗಿ ಕಾನ್ವೆಂಟ್ ಜಂಕ್ಷನ್ ಬಳಿ ಹೋಂ ಸ್ಟೇ ನಡೆಸುತ್ತಿದ್ದ ಮನೆ ಮೇಲೆ ನಗರ ಪೊಲೀಸರು ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮನೆಯಲ್ಲಿ ಹಲವು ದಿನದಿಂದ ಸಿನಿಮಾ ಶೂಟಿಂಗ್ ತಂಡವೊಂದು ವಾಸವಿದ್ದರೂ ಯಾವುದೇ ದಾಖಲೆ ಇರಿಸಿಲ್ಲ. ಸಿಸಿ ಟಿವಿ ಇಲ್ಲ, ಪೊಲೀಸ್ ಅನುಮತಿ ಇಲ್ಲ, ಪ್ರವಾಸೋದ್ಯಮ ಪರವಾನಗಿಯೂ ಇಲ್ಲ. ಇದೇ ಪ್ರದೇಶದಲ್ಲಿ ಹಲವು ಹೋಂ ಸ್ಟೇಗಳು ಅನಧಿಕೃತವಾಗಿ ನಡೆಯುತ್ತಿದ್ದು, ಮಡಿಕೇರಿಯ ಸುತ್ತಮುತ್ತ ಯಾವುದೇ ಎಗ್ಗಿಲ್ಲದೆ ಪ್ರವಾಸಿಗರನ್ನು ಇರಿಸಿಕೊಳ್ಳಲಾಗುತ್ತಿದೆ.
ಸಾರ್ವಜನಿಕರ ದೂರಿನ ಆಧಾರದಲ್ಲಿ ನಗರ ಠಾಣಾಧಿಕಾರಿಯ ನೇತೃತ್ವದಲ್ಲಿ ಹೋಂ ಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ದಾಳಿ ನಡೆಸಿ, ಯಾವುದೇ ದಾಖಲೆಗಳಿಲ್ಲದೆ ಅತಿಥಿಗಳನ್ನು ಇರಿಸಿಕೊಂಡಿದ್ದುದನ್ನು ಗಮನಿಸಿದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ದಾಳಿ ಸಂದರ್ಭ ಯಾವುದೇ ದಾಖಲೆಯಿಲ್ಲದೆ ಮೂರನೇ ವ್ಯಕ್ತಿ ವ್ಯವಹಾರ ಮಾಡುತ್ತಿದ್ದುದು ಗಮನಕ್ಕೆ ಬಂದಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಪೂರ್ಣ ದಾಖಲೆ ತಯಾರಾಗುವವರೆಗೆ ವ್ಯವಹಾರ ಮಾಡದಂತೆ ಸೂಚಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ, "ಅನಧಿಕೃತ ಹೋಂ ಸ್ಟೇಗಳ ವಿರುದ್ಧ ದಾಳಿ ಮುಂದುವರೆಸುತ್ತೇವೆ. ಕೂಡಲೇ ಎಲ್ಲರೂ ದಾಖಲೆಗಳನ್ನು ಪ್ರದರ್ಶಿಸಬೇಕು, ನೋಂದಣಿ ಇಲ್ಲದಿದ್ದರೆ ಮುಚ್ಚಬೇಕು" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.












Click it and Unblock the Notifications