ಕಾವೇರಿ ತವರುಮನೆಯ ಸೋಮವಾರಪೇಟೆ ಆನೆಕೆರೆಯಲ್ಲೇ ನೀರಿಲ್ಲ!

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ 9: ಕೊಡಗಿನಲ್ಲಿ ಕಾವೇರಿ ಹುಟ್ಟಿ ಹರಿದರೂ ಇಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿರುವ ರೈತರ ಸಂಖ್ಯೆ ಕಡಿಮೆಯೇ. ಇದಕ್ಕೆ ಕಾರಣವೂ ಇದೆ. ಪ್ರತಿ ಊರಿನಲ್ಲಿಯೂ ರೈತರಿಗೆ ಬೇಕಾದ ಜಲ ಮೂಲಗಳಿವೆ. ಚಿಕ್ಕಪುಟ್ಟ ನದಿ ತೊರೆಗಳನ್ನು ಬಳಸಿಕೊಂಡು ಇಲ್ಲಿನ ರೈತರು ಭತ್ತದ ಕೃಷಿ ಮಾಡುತ್ತಾರೆ.

ಆದರೆ, ಇತ್ತೀಚೆಗೆ ವಾಡಿಕೆ ಮಳೆ ಬೀಳದ ಕಾರಣ ನದಿ ಮೂಲಗಳು ಸದ್ದಿಲ್ಲದೆ ಬತ್ತುತ್ತಿವೆ. ಮತ್ತೊಂದೆಡೆ ನೀರಿನ ಆಸರೆಯಾಗಿದ್ದ ಕೆರೆಗಳು ನಿರ್ಲಕ್ಷ್ಯಕ್ಕೊಳಗಾಗುತ್ತಿವೆ. ಅದರ ಪರಿಣಾಮ ಕಾವೇರಿ ತವರಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಕೊಡಗಿನಲ್ಲಿ ಹಿಂದೆಂದೂ ಬತ್ತದ ಜಲಮೂಲಗಳು ಇತ್ತೀಚೆಗೆ ಬತ್ತುತ್ತಿವೆ. ತುಂಬಿ ತುಳುಕುತ್ತಿದ್ದ ನೀರು ತಳ ಸೇರುತ್ತಿದೆ.

No water in Somavarapet anekere

ಪೂಜ್ಯ ಭಾವನೆಯಿತ್ತು: ಇದಕ್ಕೆ ಸೋಮವಾರಪೇಟೆ ಪಟ್ಟಣದಲ್ಲಿರುವ ಆನೆಕೆರೆ ಸಾಕ್ಷಿಯಾಗಿದೆ. ಹಿಂದಿನ ಕಾಲದಲ್ಲಿ ನೀರಿನಿಂದ ತುಂಬಿ ಸಾರ್ವಜನಿಕರಿಗೆ ಅನುಕೂಲವಾಗಿದ್ದ ಕೆರೆ ಇವತ್ತು ಬತ್ತಿ ಹೋಗುತ್ತಿದೆ. ಹಿಂದೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ಮೂರ್ತಿಯನ್ನು ಇದೇ ಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು. ಜನರಿಗೂ ಈ ಕೆರೆ ಬಗ್ಗೆ ಪೂಜ್ಯ ಭಾವನೆಯಿತ್ತು. ಜತೆಗೆ ಕೆರೆ ತುಂಬಿ ಹರಿದರೆ ಸುಭಿಕ್ಷ ಎಂದು ಜನ ನಂಬಿದ್ದರು.

ಸುಮಾರು ಎರಡು ಶತಮಾನಗಳ ಹಿಂದೆ ದಟ್ಟವಾದ ಕಾಡಿನ ಮಧ್ಯೆಯಿದ್ದ ಈ ಕೆರೆಗೆ ಆನೆಗಳು ಹಿಂಡು ಹಿಂಡಾಗಿ ನೀರು ಕುಡಿಯಲು ಬರುತ್ತಿದ್ದುದರಿಂದ ಇದನ್ನು ಆನೆ ಕೆರೆ ಎಂದೇ ಕರೆಯುತ್ತಾ ಬರಲಾಗಿದೆ. 1910ರಲ್ಲಿ ಬ್ರಿಟಿಷರ ಆಡಳಿತದಲ್ಲಿ ಕೆಲಸ ಮಾಡಿದ್ದ ಆಲೇಕಟ್ಟೆ ಹನುಮ ಮೇಸ್ತ್ರಿ ಅವರು ತಮ್ಮ ನಿವೃತ್ತಿಯ ನಂತರ ದೊರೆತ ಹಣದ ಒಂದು ಭಾಗವನ್ನು ವಿನಿಯೋಗಿಸಿ ಕೆರೆಯ ಸುತ್ತ ಆವರಣ ಗೋಡೆ, ಮೆಟ್ಟಿಲುಗಳ ನಿರ್ಮಾಣ ಮಾಡಿದ್ದರು. ನಂತರದ ದಿನಗಳಲ್ಲಿ ಇದು ಉತ್ತಮವಾಗಿಯೇ ಇತ್ತಾದರೂ ಕ್ರಮೇಣ ನಿರ್ಲಕ್ಷ್ಯ ಮಾಡಲಾಯಿತು.

No water in Somavarapet anekere

ಮುಚ್ಚಿಹೋದ ತೂಬು: ಬಳಿಕ ಇದಕ್ಕೆ ಕಾಯಕಲ್ಪ ನೀಡುವ ಸಲುವಾಗಿ 2004ರಲ್ಲಿ ಗುತ್ತಿಗೆದಾರರೊಬ್ಬರು 1.5 ಲಕ್ಷ . ವೆಚ್ಚದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿಗೆ ಮುಂದಾಗಿದ್ದರು. ಆದರೆ ಗುತ್ತಿಗೆದಾರ ಕೂಲಿಗಾಗಿ ಕಾಳು ಯೋಜನೆಯಡಿ ಕೆಲಸಗಾರರನ್ನು ಬಳಸಿ, ಕೆರೆಯ ಹೂಳನ್ನು ತೆಗೆಯದೆ ಯೋಜನೆಯ ನಿಯಮವನ್ನು ಗಾಳಿಗೆ ತೂರಿ ಜೆಸಿಬಿ ಯಂತ್ರವನ್ನು ಬಳಸಿದ್ದರಿಂದ ಕೆರೆಯ ಜಲಮೂಲಗಳ ತೂಬುಗಳು ಮುಚ್ಚಿಹೋಗಿವೆ.

ನಂತರದ ದಿನಗಳಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಕೆರೆಗೆ ಕಾಯಕಲ್ಪ ನೀಡಲು 20 ಲಕ್ಷ ರು. ವಿನಿಯೋಗಿಸಲಾಗಿತ್ತು. ಆದರೆ ನಿಗಮದ ನಿರ್ಲಕ್ಷ್ಯದಿಂದಾಗಿ ಈ ಯೋಜನೆ ನೀರು ಪಾಲಾಯಿತು. ಕಳೆದೊಂದು ದಶಕದಿಂದ ಆನೆಕೆರೆ ಪಾಳುಕೆರೆಯಾಗಿ ಸುತ್ತಮುತ್ತಲಿನವರಿಗೆ ಕಸ ಸುರಿಯುವ, ಪುಂಡಪೋಕರಿಗಳಿಗೆ ಮದ್ಯ ಸೇವಿಸಿ ಬಾಟಲಿಯನ್ನು ಎಸೆಯುವ ತಾಣವಾಗಿ ಮಾರ್ಪಾಡುಗೊಂಡಿತು. ಹೀಗಾಗಿ ಮಳೆಗಾಲದಲ್ಲಿ ನೀರು ಕಾಣಿಸಿಕೊಂಡರೂ ನಂತರ ಬತ್ತಿಹೋಗುತ್ತದೆ.

No water in Somavarapet anekere

ಆನೆಕೆರೆಯ ದುಃಸ್ಥಿತಿ ಬಗ್ಗೆ ಜನ ಧ್ವನಿ ಎತ್ತಿದ ಬಳಿಕ ಇದೀಗ ಸ್ಥಳೀಯ ಪಟ್ಟಣ ಪಂಚಾಯಿತಿ ಕೆರೆಗೆ ಕಾಯಕಲ್ಪ ನೀಡಿ, ರಕ್ಷಿಸುವ ಭರವಸೆ ನೀಡಿದ್ದಾರೆ. ಇದು ಭರವಸೆಯಾಗಿಯೇ ಉಳಿಯದೆ ಕಾರ್ಯರೂಪಕ್ಕೆ ಬಂದರೆ ಬಹುಶಃ ಮುಂದಿನ ದಿನಗಳಲ್ಲಿ ಆನೆಕೆರೆಯಲ್ಲಿ ನೀರು ಕಾಣಿಸಬಹುದು. ಇಲ್ಲದಿದ್ದರೆ ಬತ್ತಿಹೋಗಿ ಇತಿಹಾಸದ ಪುಟ ಸೇರುವುದರಲ್ಲಿ ಸಂಶಯವಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
No water in Somavarapet anekere, Madikeri. Cauvery water source in the district, but still water problem facing in Kodagu. Recently rain fall is less this year. Now it is concern for people.
Please Wait while comments are loading...