ಕೊಡಗಿನಲ್ಲಿ ಕೈಕೊಟ್ಟ ಮುಂಗಾರು, ಆತಂಕದಲ್ಲಿ ಕೃಷಿಕರು

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಆಗಸ್ಟ್ 05 : ಕೊಡಗಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದು ರೈತಾಪಿ ವರ್ಗದಲ್ಲಿ ಆತಂಕ ಸೃಷ್ಟಿಸಿದೆ.

ಈಗಾಗಲೇ ಭತ್ತದ ನಾಟಿ ಕೆಲಸ ಆರಂಭವಾಗಿದ್ದು ಕೆಲವೆಡೆ ಕೃಷಿ ಚಟುವಟಿಕೆ ನಡೆಯುತ್ತಿದ್ದರೆ, ಮತ್ತೆ ಕೆಲವರಿಗೆ ನೀರಿನ ತೊಂದರೆ ಕಂಡು ಬಂದಿರುವುದರಿಂದ ಕೃಷಿಯತ್ತ ನಿರಾಸಕ್ತಿ ತಾಳಿದ್ದಾರೆ. ಕಳೆದ ವರ್ಷ ಸಮರ್ಪಕವಾಗಿ ಮಳೆಯಾಗದ ಕಾರಣ ಹೆಚ್ಚಿನ ರೈತರು ಭತ್ತದ ಕೃಷಿಯನ್ನೇ ಮಾಡಿರಲಿಲ್ಲ. ಈ ಬಾರಿಯೂ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತಾ ಎಂಬ ಭಯ ಕಾಡತೊಡಗಿದೆ.

ಜಿಲ್ಲೆಯಲ್ಲಿ ಹೆಚ್ಚಿನವರು ಮಳೆಯ ನೀರನ್ನೇ ನಂಬಿ ಭತ್ತ ಬೆಳೆಯುತ್ತಿದ್ದಾರೆ. ಮಳೆ ಹೆಚ್ಚು ಸುರಿದು ಭೂಮಿ ಅಡಿಯಿಂದ ಹೊರ ಬರುವ ಅಂತರ್ಜಲ ತೊರೆಯಾಗಿ, ಹೊಳೆಯಾಗಿ ಹರಿಯುತ್ತದೆ. ಅದನ್ನೇ ಬಳಸಿಕೊಂಡು ಭತ್ತ ಬೆಳೆಯುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಈ ಬಾರಿ ಉತ್ತಮ ಮಳೆಯಾಗದ ಕಾರಣ ತೊರೆಗಳಲ್ಲಿ ನೀರು ಕಡಿಮೆಯಾಗಿದೆ. ಅದನ್ನು ನಂಬಿ ಭತ್ತದ ಕೃಷಿ ಸಾಧ್ಯವಿಲ್ಲದಾಗಿದೆ. ನಾಟಿಕಾರ್ಯ ಮಾಡಿದರೂ ಬೆಳೆಗೆ ಕೊನೆಯವರೆಗೆ ನೀರು ಸಿಗುತ್ತಾ ಎಂಬ ಸಂಶಯ ಕೃಷಿಕರದ್ದಾಗಿದೆ. [ಕೊಡಗಿನಲ್ಲಿ ತಗ್ಗಿದ ಮಳೆ, ಮೂಡಿಸಿದೆ ಚಿಂತೆಯ ಗೆರೆ]

Monsoon weak in Madikeri, farmers are in worry

ಕೈಹೊತ್ತು ಕುಳಿತಿರುವ ಕೃಷಿಕ : ಜುಲೈ ಮೊದಲ ವಾರದಲ್ಲಿ ಮಳೆ ಅಬ್ಬರಿಸಿತ್ತಾದರೂ ನಂತರ ಕ್ಷೀಣಗೊಂಡಿದೆ. ಇಷ್ಟರಲ್ಲೇ ಭಾರೀ ಮಳೆ ಸುರಿಯಬೇಕಿತ್ತು. ಆದರೆ ಆ ಯಾವ ಲಕ್ಷಣಗಳೂ ಸದ್ಯಕ್ಕೆ ಕಂಡು ಬರುತ್ತಿಲ್ಲ. ತುಂಬಿ ಹರಿದಿದ್ದ ಹೊಳೆ, ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಹೀಗಾದರೆ ಹೇಗಪ್ಪಾ? ಎಂದು ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಕೆಆರ್‌ಎಸ್ ಭರ್ತಿಯಾಗಿರಲಿಲ್ಲ. ಈ ಬಾರಿ ಕಳೆದ ವರ್ಷಕ್ಕಿಂತಲೂ ಕಡಿಮೆ ಮಳೆ ಸುರಿದಿರುವುದು ಇದುವರೆಗಿನ ಮಳೆಯ ಪ್ರಮಾಣವನ್ನು ಗಮನಿಸಿದರೆ ತಿಳಿದು ಬರುವ ಸತ್ಯ. ಕೆಆರ್‌ಎಸ್‌ನ ಇಂದಿನ ಮಟ್ಟ 97.19 ಅಡಿ (ಗರಿಷ್ಠ 124.80). ಕನಿಷ್ಠ ಮೂರ‍್ನಾಲ್ಕು ಬಾರಿಯಾದರೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವಷ್ಟರ ಮಟ್ಟಿಗೆ ಮಳೆ ಸುರಿಯಬೇಕಿತ್ತು. ಆದರೆ ಈ ವರ್ಷ ಒಮ್ಮೆ ಮಾತ್ರ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಹೊರತು ಪಡಿಸಿದರೆ ಅಂಥ ಭಾರೀ ಮಳೆ ಸುರಿದಿಲ್ಲ. [ಕೊಡಗಿನ ನಾಟಿ ಓಟ, ಅಲ್ಲಿನ ಮಕ್ಕಳ ಪಾಲಿನ ಓಲಂಪಿಕ್ಸ್]

Monsoon weak in Madikeri, farmers are in worry

ಕಳೆದ ವರ್ಷಕ್ಕಿಂತ ಕಡಿಮೆ ಮಳೆ : ಜಿಲ್ಲೆಯಲ್ಲಿ ಸುರಿದ ಮಳೆಯ ಬಗ್ಗೆ ಗಮನಿಸಿದರೆ ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಸುಮಾರು 350 ಮಿ.ಮೀ ಕಡಿಮೆಯಿದೆ. ಕಳೆದ ವರ್ಷ ಇದೇ ವೇಳೆಗೆ ಸುಮಾರು 1572.34 ಮೀಮೀ ಮಳೆ ಸುರಿದಿತ್ತು.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯುವ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಇದರಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ತಗ್ಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಮಳೆಯ ರಭಸ ನೋಡಿದ ಜನ ಇನ್ನೇನು ಈ ಬಾರಿ ಕೆಆರ್‌ಎಸ್ ಭರ್ತಿಯಾಗಬಹುದೆಂದು ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಆದರೆ ಅದು ಸಾಧ್ಯವಾಗುತ್ತದೆ ಎಂಬ ನಂಬಿಕೆ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಹುಸಿಯಾಗುತ್ತಿದೆ. [ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?]

Monsoon weak in Madikeri, farmers are in worry

ಕಳೆದ ವರ್ಷ ಒಂದು ದಿನಕ್ಕೆ ಕನಿಷ್ಠ ಏನಿಲ್ಲ ಎಂದರೂ ದಿನಕ್ಕೆ 50 ಮಿ.ಮೀ. ಮಳೆ ಸುರಿಯುತ್ತಿತ್ತು. ಆದರೆ ಈ ವರ್ಷ ಕೇವಲ 10 ಮಿ.ಮೀ ತಲುಪುತ್ತಿಲ್ಲ. ಮುಂಗಾರು ಮಳೆಯ ಅವಧಿ ಕೂಡ ಕಡಿಮೆಯಾಗುತ್ತಾ ಬರುತ್ತಿದೆ. ಇರುವ ದಿನಗಳಲ್ಲಿ ಮಳೆ ಸುರಿಯುತ್ತದೆಯಾ? ಅದರಿಂದ ಜಲಾಶಯ ತುಂಬುವಷ್ಟು ನೀರನ್ನು ನಿರೀಕ್ಷೆ ಮಾಡಲು ಸಾಧ್ಯನಾ? ಎಂಬ ಲೆಕ್ಕಾಚಾರಗಳನ್ನು ರೈತರು ಮಾಡುತ್ತಿದ್ದಾರೆ.

ಜಿಲ್ಲೆಯ ಮೂರು ತಾಲೂಕಿನ ಮಳೆಯ ಪ್ರಮಾಣವನ್ನು ಗಮನಿಸಿದರೆ ಜನವರಿಯಿಂದ ಇಲ್ಲಿಯವರೆಗೆ ಮಡಿಕೇರಿ ತಾಲೂಕಿನಲ್ಲಿ 1806.37 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2343.95 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ 940.75 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ವೇಳೆ 1296.42 ಮಿ.ಮೀ. ಮಳೆಯಾಗಿತ್ತು. [ತುಂಬಿ ಹರಿವ ಲಕ್ಷ್ಮಣತೀರ್ಥವನ್ನು ನೋಡುವುದೇ ಆನಂದ]

Monsoon weak in Madikeri, farmers are in worry

ಸೋಮವಾರಪೇಟೆ ತಾಲೂಕಿನಲ್ಲಿ 971.58 ಮಿ.ಮೀ. ಕಳೆದ ವರ್ಷ 1076.58 ಮಿ.ಮೀ. ಮಳೆ ಸುರಿದಿತ್ತು. ಇದೆಲ್ಲವನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿದರೆ ಮಾತ್ರ ಜನ ನೆಮ್ಮದಿಯುಸಿರು ಬಿಡಲು ಸಾಧ್ಯ. ಇಲ್ಲದಿದ್ದರೆ ನೀರಿನ ಸಮಸ್ಯೆ ಕಾಡುವುದಂತು ಖಚಿತ.

ಕಾವೇರಿ ಕಣಿವೆಯಲ್ಲಿ ಪ್ರಪ್ರಥಮವಾಗಿ ತುಂಬುವ ಜಲಾಶಯ ಕಬಿನಿ ಈ ಬಾರಿ ತುಂಬಿಲ್ಲ. ಇರುವ ಜಲಾಶಯಗಳ ಪೈಕಿ ಹಾರಂಗಿ ಜಲಾಶಯ ಮಾತ್ರ ತುಂಬಿದೆ. ಗರಿಷ್ಠ ಮಟ್ಟ 2,859 ಅಡಿ ಹೊಂದಿರುವ ಜಲಾಶಯದಲ್ಲಿ 2857.82 ಅಡಿಯಷ್ಟು ನೀರಿದೆ. ಒಳ ಹರಿವು 3070 ಕ್ಯೂಸೆಕ್ ಇದ್ದು ನದಿಗೆ 908 ನಾಲೆಗೆ 1292 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Deficit of rain during the monsoon has become a big worry for farmers in Madikeri district. Though last year there was drought situation, this year it has not rained that much too. Agriculture has taken the back seat. KRS reservoir has not filled. Even Harangi in Coorg is yet to be filled.
Please Wait while comments are loading...