ಕೊಡಗು: ಇನ್ನೂ ಎರಡು, ಮೂರು ದಿನ ಹೆಚ್ಚಿನ ಮಳೆ
ಮಡಿಕೇರಿ, ಜುಲೈ 20: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತಲಕಾವೇರಿ, ಭಾಗಮಂಡಲ, ಸಂಪಾಜೆ, ಮಡಿಕೇರಿ, ನಾಪೋಕ್ಲು ಸೇರಿದಂತೆ ಜಿಲ್ಲೆಯ ಎಲ್ಲೆಡೆ ಬಿರುಸಿನ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆ 1,348.51 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 637.16 ಮಿ. ಮೀ. ಮಳೆಯಾಗಿತ್ತು.
ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದರು, "ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನ-ಜಾನುವಾರು ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಮುಂದಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ವ್ಯಾಪಕ ಮಳೆಯಾಗುತ್ತಿದ್ದು, ಇನ್ನೂ ಎರಡು ಮೂರು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವಂತೆ" ಸೂಚಿಸಿದರು.

"ಸಾರ್ವಜನಿಕರನ್ನು ರಕ್ಷಣೆ ಮಾಡುವುದು ಅತಿಮುಖ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯ 103 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿಯನ್ನು ರಚಿಸಿ ಪ್ರವಾಹ, ಬರೆಕುಸಿತ ಮತ್ತಿತರ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಪ್ರಾಕೃತಿಕ ವಿಕೋಪ ಸಂಬಂಧ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಎಲ್ಲಾ ಹಂತದ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು" ಎಂದರು.
ಕಾಳಜಿ ಕೇಂದ್ರ ತೆರೆಯಬೇಕು: ಜಿಲ್ಲಾಧಿಕಾರಿಗಳು, "ಪ್ರವಾಹ ಪೀಡಿತ ಪ್ರದೇಶದವರನ್ನು ಸ್ಥಳಾಂತರಿಸಲು ಕಾಳಜಿ ಕೇಂದ್ರ ತೆರೆಯಬೇಕು. ಕಾಳಜಿ ಕೇಂದ್ರದಲ್ಲಿ ವಿದ್ಯುತ್, ಶೌಚಾಲಯ, ಇತರ ಮೂಲ ಸೌಲಭ್ಯಗಳು ಇರುವಂತೆ ಗಮನಹರಿಸಬೇಕು ತಹಶೀಲ್ದಾರ್, ತಾಲೂಕು ಪಂಚಾಯಿತಿ ಇಒಗಳು, ಇತರರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು" ಎಂದು ಹೇಳಿದರು.
"ಕಾಳಜಿ ಕೇಂದ್ರದಲ್ಲಿ ಆರೋಗ್ಯ ಸೇವೆ ಕಲ್ಪಿಸಬೇಕು. ಆಂಬ್ಯುಲೆನ್ಸ್ ಸೇವೆ ಸಿದ್ಧವಾಗಿರಬೇಕು. ಸಂತ್ರಸ್ತರಿಗೆ ತಕ್ಷಣವೇ ಸ್ಪಂದಿಸುವ ಕಾರ್ಯ ಆಗಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಇವೆ? ಎಂದು ವರದಿ ನೀಡುವಂತೆ" ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಯಿತು.
ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸಬೇಕು. ಜಿಲ್ಲಾಡಳಿತದಿಂದ ಕಾಲಕಾಲಕ್ಕೆ ಹೊರಡಿಸುವ ಆದೇಶವನ್ನು ತಪ್ಪದೇ ಪಾಲಿಸಬೇಕು. ಸುಳ್ಯ ಕಡೆಯಿಂದ ಬರುವ ವಾಹನಗಳಿಗೆ ಮಾಹಿತಿ ಫಲಕ ಅಳವಡಿಸಬೇಕು ಎಂದು ಹೆದ್ದಾರಿ ವಿಭಾಗದ ಎಂಜಿನಿಯರ್‌ಗೆ ಸಭೆಯಲ್ಲಿ ನಿರ್ದೇಶನ ಕೊಟ್ಟರು.
ಬರೆಕುಸಿತ, ರಸ್ತೆಗೆ ಮಣ್ಣು ಬೀಳುವುದು, ಮರ ಬೀಳುವುದು, ವಿದ್ಯುತ್ ಕಂಬ ಬೀಳುವುದು ಇಂತವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕೂಡಲೇ ತೆರವುಗೊಳಿಸಲು ಮುಂದಾಗಬೇಕು. ಶಾಲಾ-ಕಾಲೇಜು ರಜೆ ಇದೆ ಎಂದು ಸಿಬ್ಬಂದಿಗಳು ಗೈರು ಆಗಬಾರದು. ಸಿಬ್ಬಂದಿಗಳು ಶಾಲಾ-ಕಾಲೇಜಿಗೆ ಹಾಜರಾಗಬೇಕು. ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಸೂಚನೆ ನೀಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, "ಹೆದ್ದಾರಿಯಲ್ಲಿ ಸಾರಿಗೆ ಸಂಪರ್ಕಕ್ಕೆ ಯಾವುದೇ ರೀತಿ ತೊಂದರೆ ಆಗದಂತೆ ಗಮನಹರಿಸಲಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಅಗತ್ಯ ಮುನ್ನೆಚ್ಚರ ವಹಿಸಲಾಗಿದೆ" ಎಂದರು.
ಜಿಲ್ಲಾ ಪಂಚಾಯತಿ ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, "ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತ ಜೊತೆ ಸದಾ ಕೈಜೋಡಿಸಲಿದೆ" ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಮಾತನಾಡಿ, "ಪ್ರವಾಹ ಪೀಡಿತ ಸಂತ್ರಸ್ತರ ಆರೋಗ್ಯ ಕಾಳಜಿ ಬಗ್ಗೆ ಗಮನಹರಿಸಲಾಗಿದೆ. ಹಾಗೆಯೇ ಸರ್ಕಾರದ ನಿರ್ದೇಶನದಂತೆ ಡೆಂಗ್ಯೂ ನಿಯಂತ್ರಣಕ್ಕೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ" ಎಂದು ಹೇಳಿದರು.
ಈ ಸಭೆಯ ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜೊತೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪಾಲ್ಗೊಂಡು ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಪ್ರವಾಹ ಪೀಡಿತ ಸಂತ್ರಸ್ತರ ಸ್ಥಳಾಂತರ, ಕಾಳಜಿ ಕೇಂದ್ರ ಸ್ಥಾಪನೆ ಮತ್ತಿತರ ಬಗ್ಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ವಿವರಣೆ ಕೊಟ್ಟರು.












Click it and Unblock the Notifications