Kodagu:ಕೊಡಗಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತಬೇಟೆ
ಮಡಿಕೇರಿ, ಏಪ್ರಿಲ್ 14: ಕಳೆದ ಎರಡು ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿರುವ ಕೊಡಗಿನಲ್ಲಿ ರಣಕಹಳೆ ಮೊಳಗಿಸುವ ಮೂಲಕ ಮತದಾರರನ್ನು ಕಾಂಗ್ರೆಸ್ ನತ್ತ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ಮಡಿಕೇರಿಯ ಗಾಂಧಿಮೈದಾನದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ ನಡೆಸುವ ಮೂಲಕ ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಮತಬೇಟೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಬಗ್ಗೆ ಯಾರಿಗೆ ಗೌರವ ಇದೆಯೋ? ಯಾರಿಗೆ ಸಂವಿಧಾನದ ಆಶಯ ಈಡೇರಿಸುವ ಇಚ್ಚೆಯಿದೆಯೋ ಅಂಥವರ ಕೈಯಲ್ಲಿ ದೇಶದ ಅಧಿಕಾರ ಇರಬೇಕು. ಅದು ಬಿಟ್ಟು ಸಂವಿಧಾನದ ಧ್ಯೇಯೋದ್ದೇಶಗಳನ್ನು ತಿರುಚುವಂಥವರು ಅಧಿಕಾರದಲ್ಲಿದ್ದರೆ ಸಂವಿಧಾನ ಕಳಪೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಸಂವಿಧಾನದ ಬಗ್ಗೆ ಬಿಜೆಪಿಗಾಗಲೀ, ಆರ್ ಎಸ್ ಎಸ್ ಗಾಗಲೀ ಗೌರವ, ನಂಬಿಕೆ ಇದೆಯೇ ಎಂಬುದನ್ನು ಜನರು ವಿಶ್ಲೇಷಣೆ ಮಾಡಬೇಕು. ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನ ನಮ್ಮ ಸಂಸ್ಕೖತಿಗೆ ಅನುಗುಣವಾಗಿಲ್ಲ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ. ಹೀಗಾಗಿಯೇ ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಯ ಹಿಡನ್ ಅಜೆಂಡಾವಾಗಿದೆ ಎಂದು ಹೇಳಿದರು.
ಸಂವಿಧಾನ ಬದಲಾವಣೆ ಮಾಡಲೆಂದೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಅನಂತಕುಮಾರ್ ಹೆಗಡೆ ಹೇಳಿದ್ದರು ಆದರೆ ಸಂವಿಧಾನದ ಬಗ್ಗೆ ಮಾತನಾಡಿದ ಹೆಗಡೆ ವಿರುದ್ದ ಬಿಜೆಪಿ ನಾಯಕರು ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆಂದರೆ, ಹೆಗಡೆ ಅಭಿಪ್ರಾಯವನ್ನು ಬಿಜೆಪಿ ಅನಮೋದಿಸಿತ್ತು. ಹಿಡನ್ ಅಜೆಂಡಾ ಜಾರಿಗೆ ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ನಾವೆಲ್ಲಾ ಸುರಕ್ಷಿತವಾಗಿರಬೇಕೆಂದರೆ ಭಾರತದ ಸಂವಿಧಾನ ಉಳಿಯಬೇಕು. ಇವತ್ತು ಪ್ರಜಾತಂತ್ರ ಅಪಾಯದಲ್ಲಿದೆ. ಜನತಂತ್ರದ ವ್ಯವಸ್ಥೆಯಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಬಿಜೆಪಿ ಬಳಿ ಅಧಿಕಾರ ಇದ್ದರೆ ಪ್ರಜಾತಂತ್ರ ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು.
ಬಿಜೆಪಿ ಯಾವುದೇ ಭರವಸೆ ಈಡೇರಿಸಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ, ಬೆಲೆ ಏರಿಕೆ ಕಡಿಮೆ ಮಾಡಲಿಲ್ಲ. ಇವರಿಂದ ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಪೆಟ್ರೋಲ್, ಡಿಸೇಲ್, ಗ್ಯಾಸ್ ಎಲ್ಲದರ ಬೆಲೆಯೂ ಏರಿಕೆಯಾಯಿತು, ಎಲ್ಲಾ ಬೆಲೆಗಳೂ ಬಿಜೆಪಿ ಅಧಿಕಾರದಲ್ಲಿ ಹೆಚ್ಚಾಗಿದೆ ಹಾಗಾದರೆ ಅಚ್ಚೇ ದಿನ್ ಯಾರಿಗೆ ಬಂತು? ಎಂದು ಪ್ರಶ್ನಿಸಿದರು.
ಬಿಜೆಪಿ ಅಧಿಕಾರದಲ್ಲಿ ರಾಜ್ಯದ ಜನ ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಬೇಕೆಂದು ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಭರವಸೆಯಂತೆ ಜಾರಿಗೆ ತಂದಿರುವುದಾಗಿ ಹೇಳಿದರಲ್ಲದೆ, ಕಾಂಗ್ರೆಸ್ ಕೇವಲ ಭರವಸೆ ನೀಡಲಿಲ್ಲ ಅದನ್ನು ಕೇವಲ ಎಂಟು ತಿಂಗಳಲ್ಲೇ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಕೊಡಗಿನ ಜನರು ರಾಜಕೀಯವಾಗಿ ಪ್ರಭುದ್ದರು ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನಿಸುವ ಶಕ್ತಿ ಕೊಡಗಿನ ಜನತೆಗಿದೆ. ಯಾರಿಗೆ ಮತ ಹಾಕುತ್ತೀರಿ? ಪೊಳ್ಳು ಭರವಸೆ ನೀಡಿದವರಿಗೆ ಮತ ಹಾಕುತ್ತೀರಾ? ಜನರಿಗೆ ಬೇಕಾದ ಅಗತ್ಯ ಈಡೇರಿಸಿದವರಿಗೆ ಮತ ಹಾಕುತ್ತೀರಾ? ತೀರ್ಮಾನಿಸಿ ಎಂದು ಹೇಳಿದರು.
ರಾಜ್ಯದಿಂದ 25 ಸಂಸದರು ಗೆಲವು ಸಾಧಿಸಿದ್ದರು ಆದರೆ ಕರ್ನಾಟಕಕ್ಕೆ ಅನ್ಯಾಯವಾದಾಗ ಯಾವ ಸಂಸದರು ಬಾಯಿ ಬಿಟ್ಟರು? ಬಾಯಿ ಬಿಡದ ಸಂಸದರನ್ನು ಮತ್ತೆ ಕಳುಹಿಸಬೇಕಾ? ಎಂದು ಕೇಳಿದರಲ್ಲದೆ, ಸೋಲುವ ಭಯದಿಂದ ಪ್ರತಾಪ್ ಸಿಂಹರನ್ನು ಈ ಕ್ಷೇತ್ರದಿಂದ ಬದಲಾಯಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಳೆ ಇಲ್ಲದೆ, ಬೆಳೆ ಇಲ್ಲದೇ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಕೇಂದ್ರ ಸರ್ಕಾರ ನ್ಯಾಯಯುತವಾಗಿ ರಾಜ್ಯಕ್ಕೆ ಬರಬೇಕಾದ ಅನುದಾನ ನೀಡಿಲ್ಲ. ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕದಲ್ಲಿ 36 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಜಾರಿಗೊಳಿಸಲಾಗಿದೆ. ಮುಂದಿನ ಬಜೆಟ್ ನಲ್ಲಿ 59 ಸಾವಿರ ಕೋಟಿ ರೂ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗೆ ಮೀಸಲಿರಿಸಿದ್ದೇವೆ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ 25 ವಷ೯ಗಳ ನಂತರ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ ಕಾಯ೯ಕರ್ತರಿಗೆ, ಮತದಾರರಿಗೆ ಧನ್ಯವಾದ ಸಲ್ಲಿಸಿದರಲ್ಲದೆ, ಹಿಂದಿನ ವರ್ಷಗಳಲ್ಲಿ ಯಾವುದೇ ಪ್ರಗತಿ ಕೊಡಗಿನಲ್ಲಿ ಕಂಡುಬಂದಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಗತಿ ಯುಗ ಕೊಡಗಿನಲ್ಲಿ ಕಂಡುಬಂದಿದೆ. ಇದಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಡಾ.ಮಂಥರ್ ಗೌಡ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ, ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.












Click it and Unblock the Notifications