ಕೊಡಗಿನಲ್ಲಿ ವಿಶ್ವಶಾಂತಿಗಾಗಿ ಲೇಖನಿ ಅಭಿಯಾನ: ಏನಿದರ ವಿಶೇಷ..?
ಮಡಿಕೇರಿ, ಸೆಪ್ಟೆಂಬರ್ 02: ಜಗತ್ತು ಅಶಾಂತಿಯಿಂದ ಬಳಲುತ್ತಿದೆ. ಬುದ್ಧನ ಶಾಂತಿಯ ಮಂತ್ರ ಜಪಿಸಬೇಕಾದವರು ಅಶಾಂತಿಯನ್ನು ಉಗುಳುತ್ತಿದ್ದಾರೆ. ಹೀಗಿರಬೇಕಾದರೆ ಮುಂದಿನ ಪ್ರಜೆಗಳಾಗಬೇಕಾದ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಅದರ ಜತೆಗೆ ಪಠ್ಯಚಟುವಟಿಕೆಯಿಂದ ಹೊರತಾಗಿ ಓದು, ಬರವಣಿಗೆಯಿಂದ ವಿಮುಖರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಓದು ಮತ್ತು ಬರಹದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಅವರನ್ನು ವಿಶ್ವಶಾಂತಿಗೆ ಕೊಡುಗೆಯಾಗಿಸುವ ಅಭಿಯಾನವೊಂದು ಕೊಡಗಿನಲ್ಲಿ ಆರಂಭವಾಗಿದೆ.
ಇದರ ಹೆಸರು ವಿಶ್ವಶಾಂತಿಗಾಗಿ ಲೇಖನಿ ಅಭಿಯಾನ.. ಮಕ್ಕಳು ವೃದ್ಧರಾದಿಯಾಗಿ ಮೊಬೈಲ್ ಗೆ ದಾಸರಾಗುತ್ತಿರುವ ಈ ಕಾಲದಲ್ಲಿ ಎಲ್ಲರನ್ನು ಮೊಬೈಲ್ ನಿಂದ ಎಳೆದು ತಂದು ಓದಿನಲ್ಲಿ, ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸುಲಭವಲ್ಲ. ಆದರೆ ಅದನ್ನು ಲೇಖನಿ ಅಭಿಯಾನದ ಮೂಲಕ ಕೆ.ಟಿ.ವಾತ್ಸಲ್ಯ ಅವರು ಮಾಡುತ್ತಾ ಬರುತ್ತಿರುವುದು ವಿಶೇಷವಾಗಿದೆ.

ಇಷ್ಟಕ್ಕೂ ಕೊಡಗಿನಲ್ಲಿ ನಡೆಯುತ್ತಿರುವ ಈ ಲೇಖನಿ ಅಭಿಯಾನ ಮಾದರಿ ಕಾರ್ಯಕ್ರಮವಾಗಿದ್ದು, ಇದರ ರೂವಾರಿ ಬರಹಗಾರ್ತಿ, ಕವಿಯತ್ರಿ ಆಗಿರುವ ಗೋಣಿಕೊಪ್ಪ ಬಳಿಯ ಅರುವತ್ತೊಕ್ಲು ನಿವಾಸಿ ಕೆ.ಟಿ.ವಾತ್ಸಲ್ಯ ಆಗಿದ್ದಾರೆ. ಶಿಕ್ಷಕ ದಿ. ತಂಗವೇಲು ಮತ್ತು ದಿ.ಗೌರಮ್ಯ ದಂಪತಿಯ ಪ್ರಥಮ ಪುತ್ರಿಯಾಗಿರುವ ಇವರು ಶಾಲಾ ದಿನಗಳಿಂದಲೇ ಬರವಣಿಗೆಯತ್ತ ಆಸಕ್ತಿ ಹೊಂದಿದವರು. ಇದಕ್ಕೆ ಅವರ ತಂದೆ ತಂಗವೇಲು ಅವರೇ ಕಾರಣರಾಗಿದ್ದರು. ಸ್ನಾತಕೋತ್ತರ ಪದವಿ ಬಳಿಕ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವಾತ್ಸಲ್ಯರವರು ಏನಾದರೊಂದು ಸಮಾಜಮುಖಿ ಕಾರ್ಯವನ್ನು ಮಾಡುವ ಚಿಂತನೆ ಮಾಡಿದ್ದು ಅದರ ಫಲವೇ ಲೇಖನಿ ಅಭಿಯಾನ.
ಲೇಖನಿ ಅಭಿಯಾನ ನಡೆಸಲು ಚಿಂತನೆ
ಈಗಾಗಲೇ ಜಗತ್ತು ಶಾಂತಿ ಕಳೆದುಕೊಂಡಿದೆ ಯುದ್ಧಗಳು, ಭಯೋತ್ಪಾದನೆ, ಘರ್ಷಣೆ, ದೌರ್ಜನ್ಯ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅಶಾಂತಿ ತಾಂಡವವಾಡುತ್ತಿದೆ. ಹೀಗಿರುವಾಗ ವಿಶ್ವಶಾಂತಿಯನ್ನು ಕಾಪಾಡಬೇಕಾದರೆ, ನಮ್ಮಲ್ಲಿಂದಲೇ ಅಂದರೆ ಗ್ರಾಮಗಳಿಂದ, ಪಟ್ಟಣದ ಬೀದಿಗಳಿಂದ ಆರಂಭವಾಗಬೇಕಾಗಿದೆ. ಅದು ಸಾಧ್ಯವಾಗಬೇಕಾದರೆ ಮುಂದಿನ ಪ್ರಜೆಗಳಾಗಲಿರುವ ಇಂದಿನ ಮಕ್ಕಳಲ್ಲಿ ಶಾಂತಿಯ ಅರಿವು ಮೂಡಿಸಬೇಕಾಗಿದೆ. ಖಡ್ಗಕ್ಕಿಂತ ಲೇಖನಿ ಹರಿತ ಎಂಬುದು ಜನಜನಿತ.

ಹೀಗಾಗಿಯೇ ಲೇಖನಿ ಮೂಲಕವೇ ಹೊಸದೊಂದು ಕಾರ್ಯಕ್ಕೆ ಶಪಥ ಮಾಡಿದರು. ಅದು ಕೊರೊನಾ ಕಾಡುತ್ತಿದ್ದ 2021ನೇ ಇಸವಿ ಜನರೆಲ್ಲರೂ ಸಂಕಷ್ಟದಲ್ಲಿದ್ದರು. ಹೊರಗೆ ಬರಲು ಭಯಪಡುತ್ತಿದ್ದರು. ತಮ್ಮದೇ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡು ಹೊಸದೊಂದು ಬದುಕಿಗೆ ತೆರೆದುಕೊಳ್ಳುತ್ತಿದ್ದರು. ಇಂತಹ ವೇಳೆಯಲ್ಲಿಯೇ ವಾತ್ಸಲ್ಯರವರು ಹತ್ತು ಹಲವು ಗುರಿಯನ್ನು ಹೊಂದಿದ ಲೇಖನಿ ಅಭಿಯಾನವನ್ನು ಕೊಡಗಿನಲ್ಲಿ ಶುರುಮಾಡಿದ್ದರು.
ಕೊರೊನಾ ಸಮಯದಲ್ಲಿ ಅಭಿಯಾನ ಶುರು
2021ರ ಏಪ್ರಿಲ್ 21ರಂದು ತಮ್ಮ ತಾಯಿ ಗೌರಮ್ಯ ಅವರ ಉದ್ಘಾಟನೆಯೊಂದಿಗೆ ಲೇಖನಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯಾದ್ಯಂತ ಸಂಘ ಸಂಸ್ಥೆ ಮತ್ತು ಶಾಲೆಗಳಿಗೆ ತೆರಳಿ ಲೇಖನಿ ಅಭಿಯಾನದ ಉದ್ದೇಶಗಳನ್ನು ತಿಳಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಓದು ಬರಹವನ್ನು ಉತ್ತೇಜಿಸುವುದು, ಸಾಮಾನ್ಯ ಜ್ಞಾನವನ್ನು ವೃದ್ಧಿಸುವುದು ಬಹುಮುಖ್ಯವಾಗಿತ್ತು. ಅದರ ಜತೆಗೆ ಒಂದೊಳ್ಳೆಯ ಸದುದ್ದೇಶಗಳನ್ನಿಟ್ಟುಕೊಂಡು ಮುನ್ನಡೆಯುವುದು ಗುರಿಯಾಗಿತ್ತು.

ಇದರ ಜೊತೆಗೆ ಕೆಲವೊಂದು ಘೋಷ ವಾಕ್ಯಗಳನ್ನು ಅಳವಡಿಸಿಕೊಳ್ಳಳಾಯಿತು. ಅದು ಏನೆಂದರೆ ಖಡ್ಗಕ್ಕಿಂತ ಹರಿತವಾದದ್ದು ಲೇಖನಿ, ವಿಶ್ವ ಶಾಂತಿ, ಪರಿಸರ ಸಂರಕ್ಷಣೆ ಕುರಿತು ಜಾಗೃತಿ, ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಪ್ರತಿಯೊಂದು ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯಬೇಕು, ಶಿಕ್ಷಣ ಪ್ರತಿಯೊಬ್ಬ ಹೆಣ್ಣು ಮಕ್ಕಳ ಹಕ್ಕು, ಲೇಖನಿ ಹಿಡಿದರೆ ಡಾಕ್ಟರ್ ಆಗಬಹುದು, ಶಿಕ್ಷಕರಾಗಬಹುದು, ವಿಜ್ಞಾನಿಯಾಗಬಹುದು, ರೈತರಾಗಬಹುದು, ಸಾಹಿತಿಯಾಗಬಹುದು. ಲೇಖನಿ ಹಿಡಿಯಿರಿ ವಿಶ್ವಮಾನವರಾಗಿ, ಲೇಖನಿ ಹಿಡಿಯಿರಿ ವಿಶ್ವಮಾನವರಾಗಿ, ಲೇಖನಿ ಮೂಲಕ ಮಾನವೀಯ ಸಂದೇಶ.
ಅಭಿಯಾನದಲ್ಲಿದೆ ಹತ್ತಾರು ಉದ್ದೇಶಗಳು
ಲೇಖನಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಶಾಂತಿ ಮಾರ್ಗದ ಕಡೆಗೆ ನಡೆಸುತ್ತದೆ, ಯುದ್ಧ ಬೇಡ ಶಾಂತಿ ಬೇಕು, ಲೇಖನಿ ಹಿಡಿಯಿರಿ ಮೌಢ್ಯ ಮುಕ್ತ ಸಮಾಜ ನಿರ್ಮಾಣ ಮಾಡೋಣ, ಸಮಾಜದಲ್ಲಿ ಅಕ್ಷರ ಕ್ರಾಂತಿ, ಯುವಜನರಲ್ಲಿ, ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಮೂಡಿಸುವುದು, ಲೇಖನಿ ಹಿಡಿಯುವ ಕೈಗಳು ಅಣ್ವಸ್ತ್ರ ಹಿಯುವುದೇಕೆ?, ಲೇಖನಿ ಅಭಿಯಾನ ದಿಂದ ಮುಂದೆ ಸಮಾಜದಲ್ಲಿ ಭಯೋತ್ಪದನೆಯನ್ನು ತೊಡೆದು ಹಾಕಬಹುದು, ಗನ್ ಬಿಡಿ ಲೇಖನಿ ಹಿಡಿಯಿರಿ ಮುಂತಾದ ಘೋಷಣೆಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮವನ್ನು ನಡೆಸುತ್ತಿರುವುದು ವಿಶೇಷವಾಗಿದೆ.
ಇಂದು ಯುವ ಜನತೆ ಮಾರ್ಗದರ್ಶನ ಕೊರತೆಯಿಂದ ನಲುಗುತ್ತಿದ್ದು, ಒಂದು ಸಮಾಜ ಒಂದು ರಾಜ್ಯ ಒಂದು ರಾಷ್ಟ್ರಶಾಂತಿಯುತವಾಗಿದ್ದರೆ ಮಾತ್ರ ಜನ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂಬುದನ್ನು ಪ್ರಚುರ ಪಡಿಸುವ ಕಾರ್ಯವನ್ನು ಲೇಖನಿ ಅಭಿಯಾನದ ಮೂಲಕ ಮಾಡುತ್ತಾ ಬಂದಿದ್ದು, ಇದುವರೆಗೆ ಸುಮಾರು ಮೂವತ್ತೈದಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿರುವುದು ಇವರ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಲೇಖನಿಯ ಮಹತ್ವದ ಕುರಿತಂತೆ ವಾತ್ಸಲ್ಯ ಅವರ ತಂದೆ ತಂಗವೇಲು ಅವರು ತಿಳಿಸಿದ್ದರಂತೆ. ಅದನ್ನು ವಿದ್ಯಾರ್ಥಿಗಳ ದೆಸೆಯಲ್ಲಿಯೇ ಅರಹುವ ಕೆಲಸವನ್ನು ಇವತ್ತು ವಾತ್ಸಲ್ಯ ಮಾಡುತ್ತಿದ್ದಾರೆ.

ಶಾಲೆಗಳಲ್ಲಿ ಹಲವು ರೀತಿಯ ಕಾರ್ಯಕ್ರಮಗಳು
ಇನ್ನು 2021ರಲ್ಲಿ ಆರಂಭಿಸಿದ ಅಭಿಯಾನ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು ಇದುವರೆಗೆ ಜಿಲ್ಲೆಯ ಶಾಲೆ ಮತ್ತು ಸಂಘಸಂಸ್ಥೆಗಳಲ್ಲಿ ನಡೆಸಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡಿರುವ ಕಾರಣ ಕಾರ್ಯಕ್ರಮವನ್ನು ಸರಕಾರಿ ಪ್ರೌಢಶಾಲೆ ಹಾಕತ್ತೂರು,ಸರಕಾರಿ ಪ್ರೌಢಶಾಲೆ ಪಿರಿಯಾಪಟ್ಟಣ, ವಿಜಯಲಕ್ಷ್ಮಿ ಪ್ರೌಢಶಾಲೆ ಬಾಳಲೆ, ಜೆಸಿ ಆಂಗ್ಲ ಮಾಧ್ಯಮ ಶಾಲೆ ಕಾಕೂರು, ಪ್ರಾಥಮಿಕ ಶಾಲೆ ಕಳತ್ಮಾಡ್, ಸರಕಾರಿ ಪ್ರೌಢಶಾಲೆ ಗೋಣಿಕೊಪ್ಪಲು, ಲ್ಯಾಂಪ್ಸ್ ಅಕಾಡೆಮಿ ತಿತಿಮತಿ, ಅರ್ವತೋಕ್ಲು ಗೋಣಿಕೊಪ್ಪದ ಕಲರವ ಮಕ್ಕಳ ಸಂಘ, ಪೊನ್ನoಪೇಟೆಯ ಪ್ರಾಥಮಿಕ ಶಾಲೆ, ಶ್ರೀ ಶಕ್ತಿ ಸ್ವಸಹಾಯ ಸಂಘ ಹೀಗೆ ಹಲವಾರು ಕಡೆ ಸುಮಾರು ಮೂವತ್ತೈದಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿದ್ದಾರೆ.
ಪ್ರತಿ ಕಾರ್ಯಕ್ರಮಗಳಲ್ಲೂ ಲೇಖನಿಯ ಮಹತ್ವವನ್ನು ತಿಳಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಸಾಹಿತ್ಯ, ಕವಿಗೋಷ್ಠಿ, ಪ್ರಬಂಧ, ಭಾಷಣ, ಚುಟುಕು ಸೇರಿದಂತೆ ಲೇಖನಿಗೆ ಸಂಬಂಧ ಪಟ್ಟ ಸಾಹಿತ್ಯಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇವರ ಲೇಖನಿ ಅಭಿಯಾನ ಯಶಸ್ವಿಗೆ ಹಲವು ಸಂಘ ಸಂಸ್ಥೆಗಳು, ಶಾಲಾ ಕಾಲೇಜಿನ ಶಿಕ್ಷಕರು ಮುಖ್ಯೋಪಾಧ್ಯಾಯರು ಬೆಂಬಲ ನೀಡಿರುವುದು ಗಮನಾರ್ಹವಾಗಿದೆ. ಇನ್ನು ಪೇಪರ್ ನಿಂದ ಲೇಖನಿಗಳನ್ನು ತಯಾರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು ಮತ್ತು ವಿದ್ಯಾರ್ಥಿಗಳಿಗೆ ನೀಡುವುದನ್ನು ಮಾಡುತ್ತಾ ಬಂದಿದ್ದಾರೆ. ಇದುವರೆಗೆ ಸುಮಾರು ಮೂರು ಸಾವಿರ ಲೇಖನಿಗಳನ್ನು ತಯಾರಿಸಿ ವಿತರಿಸಿದ್ದಾರೆ.
ಪರಿಸರ ಸ್ನೇಹಿ ಲೇಖನಿಗಳ ತಯಾರಿ
ಪತ್ರಿಕೆಯಿಂದ ಒಂದು ಲೇಖನಿ ತಯಾರಿಸಲು ಮೂರು ನಿಮಿಷ ಸಾಕಂತೆ. ಜತೆಗೆ ಒಂದು ಪತ್ರಿಕೆಯಿಂದ ಸುಮಾರು ಮೂವತ್ತು ಲೇಖನಿಗಳನ್ನು ತಯಾರಿಸಬಹುದಂತೆ. ಇನ್ನು ಈ ಪತ್ರಿಕೆಯಿಂದ ತಯಾರು ಮಾಡುವ ಲೇಖನಿಯ ಮತ್ತೊಂದು ವಿಶೇಷತೆ ಏನೆಂದರೆ ಇದು ಪರಿಸರ ಸ್ನೇಹಿಯಾಗಿದ್ದು ಮಣ್ಣಿನಲ್ಲಿ ಸುಲಭವಾಗಿ ಕರಗುತ್ತದೆ. ಒಂದು ತುದಿಯಲ್ಲಿ ಬರೆಯಲು ಉಪಯೋಗಿಸಿದರೆ ಮತ್ತೊಂದು ತುದಿಯಲ್ಲಿ ಸಸ್ಯಗಳ ಬೀಜಗಳನ್ನು ಹಾಕಲಾಗುತ್ತದೆ. ಇದನ್ನು ಎಸೆದ ಬಳಿಕವೂ ಇದರಲ್ಲಿರುವ ಬೀಜಗಳಿಂದ ಗಿಡಗಳು ಹುಟ್ಟಿ ಪರಿಸರಕ್ಕೆ ಒಳಿತಾಗಲಿ ಎಂಬುದು ಉದ್ದೇಶವಾಗಿದೆ.
ಒಂದೊಳ್ಳೆಯ ಸದುದ್ದೇಶದ ಸಮಾಜಮುಖಿ ಕಾರ್ಯಕ್ಕೆ ಇವರಿಗೆ ಬೆಂಬಲವಾಗಿ ಜರ್ಮನಿಯಲ್ಲಿ ಉದ್ಯೋಗದಲ್ಲಿರುವ ಸಹೋದರ ಸಂತೋಷ್ ಕುಮಾರ್ ಸಹೋದರಿ ಕೌಶಲ್ಯ ಸೇರಿದಂತೆ ಹಲವರ ಸಹಕಾರವಿದೆಯಂತೆ. ಹೀಗಾಗಿಯೇ ಅಭಿಯಾನವನ್ನು ಇಲ್ಲಿ ತನಕ ಯಶಸ್ವಿಯಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದ್ದು, ಮುಂದೆಯೂ ಇದು ಮುಂದುವರೆಯಲು ಎಲ್ಲರ ಸಹಕಾರ ಬೇಕೆನ್ನುತ್ತಾರೆ ಲೇಖನಿ ಅಭಿಯಾನದ ಸಂಚಾಲಕಿ ಕೆ.ಟಿ.ವಾತ್ಸಲ್ಯ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications