ಮಡಿಕೇರಿಗೆ ಭಾಷಣ ಮಾಡಲು ಬಂದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ
ಮಡಿಕೇರಿ, ಅಕ್ಟೋಬರ್.17: ಈ ಬಾರಿ ತಲಕಾವೇರಿಯಲ್ಲಿ ತುಲಾಸಂಕ್ರಮಣದಂದು ಉದ್ಭವಿಸುವ ಪವಿತ್ರ ತೀರ್ಥೋದ್ಭವಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಾಕ್ಷಿಯಾಗಲಿದ್ದಾರೆ.
ಈಗಾಗಲೇ ಕುಶಾಲನಗರ ಮೂಲಕ ಆಗಮಿಸಿದ ಮುಖ್ಯಮಂತ್ರಿಗಳನ್ನು ಹೆಬ್ಬಾಗಿಲು ಕುಶಾಲನಗರದಲ್ಲಿ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಮಡಿಕೇರಿಯ ಗಾಂಧಿಮೈದಾನದಲ್ಲಿ ಪ್ರಕೃತಿ ವಿಕೋಪದ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿ ಮಾತನಾಡಿದ ಅವರು ಸಂತ್ರಸ್ತರ ಸಮಸ್ಯೆಗಳನ್ನು ಕೇಳಿ ಅದಕ್ಕೆ ಪರಿಹಾರ ನೀಡಲು ಬಂದಿದ್ದೇನೆಯೇ ಹೊರತು ನಾನಿಲ್ಲಿ ಭಾಷಣ ಮಾಡಲು ಬಂದಿಲ್ಲ.

ಅಧಿಕಾರಿಗಳು ನೀಡುವ ಮಾಹಿತಿ ಮೇರೆಗೆ ಕಾರ್ಯನಿರ್ವಹಿಸುತ್ತೇನೆ. ಸುಮ್ಮನೆ ಮಾತನಾಡಿ ಹೋಗೋದಿಲ್ಲ. ಈಗಾಗಲೇ ಇಲ್ಲಿನ ಸಮಸ್ಯೆಗಳನ್ನು ಕೇಳಿದ್ದೇನೆ ಹಾಗೂ ಮಾಧ್ಯಮಗಳಲ್ಲಿಯೂ ನೋಡಿ ತಿಳಿದಿದ್ದೇನೆ. ಆದ್ದರಿಂದ ಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯ ಜನ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ. ಜಿಲ್ಲೆಗೆ ಪ್ರವಾಸಿಗರು ಬರುವುದು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕುಂಠಿತವಾಗಿದ್ದು, ಜನ ಸಮಸ್ಯೆ ಎದುರಿಸುವಂತಾಗಿದೆ. ಸಂತ್ರಸ್ತರ ಆಸ್ತಿ ಮನೆಗಳು ನಾಶವಾಗಿವೆ. ಶಾಲಾ ಮಕ್ಕಳಿಗೂ ಕಷ್ಟವಾಗಿದೆ. ಎಲ್ಲ ಸಮಸ್ಯೆಗಳಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡುತ್ತೇನೆ ಎಂದು ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಸ್.ಎ.ಬೋಜೇಗೌಡ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಸೇರಿದಂತೆ ಹಲವರು ಇದ್ದರು.
ಸಂವಾದ ಕಾರ್ಯಕ್ರಮದ ಬಳಿಕ ಜಿಲ್ಲೆಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.












Click it and Unblock the Notifications