ಕೊಡಗು ಜಿಲ್ಲೆಯಲ್ಲಿ 64 ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರಕ್ಕೆ ಒಪ್ಪಿಗೆ
ಮಡಿಕೇರಿ, ಸೆಪ್ಟೆಂಬರ್ 21: ಕೊಡಗು ಜಿಲ್ಲೆಯಲ್ಲಿ ಹೊಸ-ಹೊಸ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಜಿಲ್ಲಾಡಳಿತ ಹೊಸದಾದ 64 ಮಾರ್ಗವನ್ನು ಗುರುತಿಸಿದೆ. ಖಾಸಗಿ ಸಾರಿಗೆ ಸಂಸ್ಥೆಯವರಿಗೆ ಈ ಕುರಿತು ಮಾಹಿತಿ ನೀಡಲು ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೇ ಬಸ್ ಮಾರ್ಗದ ಕುರಿತು ಆಕ್ಷೇಪೆಣೆಗಳಿದ್ದರೆ ಸಲ್ಲಿಸಬೇಕು ಎಂದು ಖಾಸಗಿ ಸಂಸ್ಥೆಯವರಿಗೆ ನಿರ್ದೇಶನ ನೀಡಲಾಗಿದೆ.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಯನ್ನು ನಡೆಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜಾಚಾರ್, ಖಾಸಗಿ ಬಸ್ ಮಾಲೀಕರು, ಇತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕೊಡಗು ಜಿಲ್ಲೆಯ 64 ಮಾರ್ಗಗಳಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಪರವಾನಗಿ ನೀಡುವ ಸಂಬಂಧ ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ಮಾಹಿತಿ ಒದಗಿಸುವಂತೆ" ಖಾಸಗಿ ಬಸ್ ಮಾಲೀಕರ ಸಂಸ್ಥೆಯವರಿಗೆ ಸೂಚಿಸಿದರು.
ಜನರ ಬೇಡಿಕೆಯಂತೆ ಬಸ್: ಜಿಲ್ಲಾಧಿಕಾರಿಗಳು ಮಾತನಾಡಿ, "ಸಾರ್ವಜನಿಕರ ಬೇಡಿಕೆ ಸಂಬಂಧ ಈಗಾಗಲೇ ಕೆಎಸ್‍ಆರ್‌ಟಿಸಿ ಬಸ್ ಸಂಚಾರ ಬಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಸರ್ವೇ ಮಾಡಲಾಗಿದ್ದು, ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಖಾಸಗಿ ಬಸ್ ಸಂಸ್ಥೆಯವರು ಅಕ್ಟೋಬರ್ ಕೊನೆ ವಾರದಲ್ಲಿ ನಡೆಯುವ ಸಭೆಗೂ ಮುಂಚಿತವಾಗಿ ಮಾಹಿತಿ ಒದಗಿಸಬೇಕು" ಎಂದರು.
"ಖಾಸಗಿ ಬಸ್‍ಗಳ ಓಡಾಟಕ್ಕೆ ಯಾವ ರೀತಿ ತೊಂದರೆಯಾಗುತ್ತದೆ ಎಂಬ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು. ಸಾರಿಗೆ ಸಂಪರ್ಕ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸ್ಪಂದಿಸುವುದು ಅತೀ ಮುಖ್ಯವಾಗಿದೆ. ಎಲ್ಲರೂ ಸಹಕಾರ ಮನೋಭಾವದಿಂದ ನಡೆದುಕೊಳ್ಳಬೇಕು" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬಸ್ ಸಂಚಾರ ಸಂಬಂಧ ಪ್ರತಿಯೊಬ್ಬರೂ ಸರ್ಕಾರದ ನಿಯಮ ಪಾಲಿಸಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳು ಹೀಗೆ ಪ್ರತಿಯೊಬ್ಬರಿಗೂ ಅನುಕೂಲವಾಗಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಖಾಸಗಿ ಬಸ್ ಸಂಸ್ಥೆಗಳ ಪರವಾಗಿ ಮಾತನಾಡಿದ ವಕೀಲರು ಬಸ್‍ಗಳ ವೇಳಾಪಟ್ಟಿಯಂತೆ ಯಾವುದೇ ಬಸ್‌ಗಳು ಅರ್ಧಗಂಟೆಗೊಮ್ಮೆ ಸಂಚರಿಸುವಂತಾಗಬೇಕು ಎಂದು ಕೋರಿದರು.
ಸಭೆಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಮಾತನಾಡಿ, "ಕೋವಿಡ್ ನಂತರ ಖಾಸಗಿ ಬಸ್‍ಗಳು ನಷ್ಟದಲ್ಲಿ ಸಂಚರಿಸುತಿವೆ. ಆದ್ದರಿಂದ ಖಾಸಗಿ ಬಸ್‍ಗಳ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು. ಜಿಲ್ಲೆಯಲ್ಲಿ ಹಿಂದಿನಿಂದಲೂ ಸಾರ್ವಜನಿಕರಿಗಾಗಿ ಖಾಸಗಿ ಬಸ್‍ಗಳು ಸಂಚರಿಸುತ್ತಿವೆ. ಜಿಲ್ಲೆಯ ಕುಗ್ರಾಮಗಳಲ್ಲೂ ಸಹ ಖಾಸಗಿ ಬಸ್‍ಗಳು ಓಡಾಡುತ್ತಿವೆ" ಎಂದರು.
ಕೆಎಸ್‍ಆರ್‌ಟಿಸಿ ವಿಭಾಗ ಡಿಟಿಒ ಜೈಶಾಂತ ಮಾತನಾಡಿ, "ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಕೊಡಗು ಜಿಲ್ಲೆಯಲ್ಲಿ 64 ಮಾರ್ಗಗಳಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಪರವಾನಗಿ ನೀಡುವಂತಾಗಬೇಕು" ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೊಡಗು ಜಿಲ್ಲೆಯಾದ್ಯಂತ ಕೆಎಸ್‍ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕರಿಂದ ಸಾಕಷ್ಟು ಬೇಡಿಕೆ/ ಮನವಿ ಸಲ್ಲಿಕೆಯಾಗುತ್ತಿದೆ. ಆದ್ದರಿಂದ ಬಸ್ ಸಂಚಾರಕ್ಕೆ ಪರವಾನಗಿ ನೀಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸೆಪ್ಟೆಂಬರ್ 11ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು. ಕೊಡಗು ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಪ್ರತ್ಯೇಕ ವಿಭಾಗೀಯ ಘಟಕ ಆರಂಭವಾಗಬೇಕಿದೆ. ಆ ನಿಟ್ಟಿನಲ್ಲಿ ಸಚಿವರು ಪ್ರತ್ಯೇಕ ವಿಭಾಗೀಯ ಕಚೇರಿ ಆರಂಭಕ್ಕೆ ಅವಕಾಶ ಮಾಡಬೇಕು. ಪ್ರತ್ಯೇಕ ವಿಭಾಗೀಯ ಘಟಕ ಆರಂಭಿಸುವುದರ ಜೊತೆಗೆ ಬಸ್‍ಗಳಿಗೆ ಕೆಎ-12 ನೋಂದಣಿ ಆಗಬೇಕು ಜನಪ್ರತಿನಿಧಿಗಳು ಸಚಿವರ ಬಳಿ ಮನವಿ ಮಾಡಿದ್ದರು. ಸಚಿವರು ಮಡಿಕೇರಿ ನಗರದಲ್ಲಿ ಕೆಎಸ್‍ಆರ್‌ಟಿಸಿ ವಿಭಾಗೀಯ ಘಟಕ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
ಈಗಾಗಲೇ ಜಿಲ್ಲೆಯಲ್ಲಿ ಎರಡು ಬಸ್ ಘಟಕಗಳು ಇರುವುದರಿಂದ ಹತ್ತಿರದ ರಾಮನಾಥ ಪುರ ಇತರೆ ಡಿಪೋ ಸೇರಿಕೊಂಡು ಮಡಿಕೇರಿಯಲ್ಲಿ ವಿಭಾಗೀಯ ಘಟಕ ಆರಂಭಿಸಬೇಕು. ಜೊತೆಗೆ ಹೊಸ ಮಾರ್ಗಗಳ ಬಸ್ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಶಾಸಕರಾದ ಡಾ. ಮಂತರ್ ಗೌಡ ಸಚಿವರಿಗೆ ಮನವಿ ಮಾಡಿದ್ದರು.












Click it and Unblock the Notifications