ಕರ್ನಾಟಕದ ಈ ಜಿಲ್ಲೆಯಲ್ಲಿ 4 ಮಕ್ಕಳನ್ನ ಹೆತ್ತರೆ ನೀವಾಗಬಹುದು ಲಕ್ಷಾಧಿಪತಿ!
ಮೊದಲಾದ್ರೆ ಮನೆ ತುಂಬಾ ಮಕ್ಕಳಿದ್ರೂ ಜೀವನ ಹೇಗೋ ಸಾಗ್ತಿತ್ತು. ಈಗಿರೋ ದುಬಾರಿ ದುನಿಯಾದಲ್ಲಿ ಒಂದು ಮಗುವನ್ನು ಹೆತ್ತು ಹೊತ್ತು ಸಾಕುವುದೇ ದೊಡ್ಡ ಸವಾಲಾಗಿದೆ. ಅಂತದ್ರಲ್ಲಿ ನಾಲ್ಕು ಮಕ್ಕಳು ಮಾಡಿಕೊಳ್ಳಿ ಅಂದ್ರೆ ಎಲ್ಲರೂ ತಲೆ ತಿರುಗಿ ಬೀಳೋದು ಗ್ಯಾರಂಟಿ. ಆದರೆ, ನಾಲ್ಕು ಮಕ್ಕಳನ್ನು ಮಾಡಿಕೊಂಡಿದ್ದೇ ಆದಲ್ಲಿ ನೀವು ಲಕ್ಷಾಧಿಪತಿ ಆಗಬಹುದು ಅನ್ನೋ ಆಫರ್ ಈಗ ಕರ್ನಾಟಕದಲ್ಲೇ ಸದ್ದು ಮಾಡುತ್ತಿದೆ.
ಹೌದು..ಇಷ್ಟಕ್ಕೂ ಈ ಆಫರ್ ಬಂದಿರೋದು ವೀರರ ನಾಡು ಎಂದೇ ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ. ಕೊಡಗಿನಲ್ಲಿ ಇತ್ತೀಚೆಗೆ ಜನಸಂಖ್ಯೆ ತಗ್ಗಿರುವ ಕಾರಣ ಈ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ ಕೊಡವ ಸಮಾಜ. ಕೊಡವ ಜನಸಂಖ್ಯೆ ಹೆಚ್ಚಿಸುವ ಉದ್ದೇಶದೊಂದಿಗೆ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂತೆ ಕೊಡವ ಪೋಷಕರಿಗೆ ಮನವರಿಕೆ ಮಾಡಿಕೊಡುತ್ತಿದೆ.

ಅಲ್ಲದೇ ಹೆಚ್ಚು ಮಕ್ಕಳ ಹೆರುವ ದಂಪತಿಗೆ 25,000 ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೆ ನಗದು ಬಹುಮಾನ ನೀಡುವುದಾಗಿಯೂ ಕೊಡವ ಸಮಾಜ ಆಫರ್ ಮುಂದಿಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಕೊಡವರ ಸಂಖ್ಯೆ ಕ್ಷೀಣಿಸುತ್ತಿದೆ. ಇನ್ನೂ ಕೆಲವರು ಉದ್ಯೋಗಗಳಿಗೆಂದು ಊರು ತೊರೆದು ಬೇರೆ ಕಡೆಗಳಲ್ಲಿ ಸೆಟಲ್ ಆಗುತ್ತಿದ್ದಾರೆ ಎಂದು ಇಲ್ಲಿನ ಕೊಡವರು ಕಳವಳ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕೆಲವರು ಒಂದು ಮಗು ಸಾಕು ಎಂದೂ ನಿರ್ಧರಿಸಿರುವ ಪ್ರವೃತ್ತಿ ಹೆಚ್ಚಾಗಿದ್ದು, ಇದು ಹೀಗೆಯೇ ಸಾಗಿದರೆ ಮುಂದೆ ಕೊಡವರ ಜನಸಂಖ್ಯೆ ತಗ್ಗಬಹುದು ಎಂಬ ಆತಂಕ ಎದುರಾಗಿದೆ. ಹಾಗಾಗಿ ಹೆಚ್ಚು ಮಕ್ಕಳು ಮಾಡಿಕೊಳ್ಳುವಂತೆ ಪ್ರೇರೇಪಿಸಲು ಈ ಆಫರ್ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ.

ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಕೊಡವ ಸಮಾಜವು ಈ ಆಫರ್ ಘೋಷಿಸಿದೆ ಎನ್ನಲಾಗಿದೆ. ಮೂರು ಮಕ್ಕಳನ್ನು ಹೆರುವ ಪೋಷಕರಿಗೆ 50 ಸಾವಿರ ರೂಪಾಯಿ ಹಾಗೂ ನಾಲ್ಕು ಮಕ್ಕಳಿಗೆ ಜನ್ಮ ಕೊಟ್ಟರೆ 1 ಲಕ್ಷ ರೂಪಾಯಿ. ಬಹುಮಾನ ನೀಡುವುದಾಗಿ ಅನೌನ್ಸ್ ಮಾಡಿದೆ. ಆದರೆ ಈ ಹಣವನ್ನ ಮಗುವಿನ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಠೇವಣಿ ಇಡಲಿದ್ದು, ಮಗು 18 ವರ್ಷ ಪೂರೈಸಿದ ಬಳಿಕ ಹಣ ಕೈಸೇರಲಿದೆ ಎಂದೂ ಷರತ್ತು ವಿಧಿಸಿದೆಯಂತೆ.
ಈ ಕೊಡವ ಸಮಾಜವು ಈಗಾಗಲೇ ಮೂರು ಹಾಗೂ ನಾಲ್ಕು ಮಕ್ಕಳನ್ನು ಹೆತ್ತಿರುವ ಪೋಷಕರಿಗೆ ಹಣ ನೀಡಿ, ಸನ್ಮಾನವೂ ಮಾಡಿದೆಯಂತೆ. ಇನ್ನೂ ಕೆಲವು ಕೊಡವ ಸಮುದಾಯದ ಕುಟುಂಬಗಳಿಗೆ ವೈಯಕ್ತಿಕವಾಗಿ ಹಣಕಾಸು ನೆರವು ಕೂಡ ನೀಡಿದೆ. ಕೊಡವ ಸಮಾಜದ ಭವಿಷ್ಯಕ್ಕಾಗಿ ಈ ಕಾರ್ಯಕ್ಕೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.
ಕೊಡವ ಸಮಾಜಗಳ ಈ ನಿರ್ಧಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ನಮಗೆಲ್ಲರಿಗೂ ಗೊತ್ತಿರುವಂತೆ ಕೊಡವ ಸಮುದಾಯ ಅತ್ಯಂತ ಸಣ್ಣದ್ದು. ನಮ್ಮ ಜನಸಂಖ್ಯೆ ಕೂಡ ಬಹಳ ಕಡಿಮೆಯೇ ಇದೆ. ದೇಶದಲ್ಲೇ ವಿಶಿಷ್ಟ ಆಚಾರಗಳನ್ನು ಪಾಲಿಸುತ್ತಿರುವ ಕೊಡವ ಸಮಾಜವನ್ನು ರಕ್ಷಣೆ ಮಾಡುವುದು ಒಳ್ಳೆಯದೇ ಎಂದು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.












Click it and Unblock the Notifications