Kodagu Tourism: ಕೊಡಗಿನತ್ತ ಪ್ರವಾಸಿಗರು ಮುಗಿಬೀಳುವುದು ಏಕೆ ಗೊತ್ತಾ?
ಮಡಿಕೇರಿ, ಏಪ್ರಿಲ್ 15: ಈ ಬಾರಿ ಕೊಡಗಿನಲ್ಲಿ ಸಕಾಲದಲ್ಲಿ ಮಳೆ ಸುರಿದಿರುವ ಕಾರಣ ಇಡೀ ಜಿಲ್ಲೆ ತಂಪಾಗಿದೆ. ಒಣಗಿದ ಗಿಡಮರಗಳಿಗೆ ಮರು ಜೀವ ಬಂದಂತಾಗಿದ್ದು, ಹಸಿರಿನಿಂದ ಕಂಗೊಳಿಸಲಾರಂಭಿಸಿದೆ. ಹೀಗಾಗಿ ಪ್ರವಾಸಿಗರ ಚಿತ್ತ ಇತ್ತ ಹರಿಯುತ್ತಿದ್ದು, ಇಲ್ಲಿನ ಪ್ರವಾಸಿ ತಾಣಗಳತ್ತ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ಆಗೊಮ್ಮೆ, ಈಗೊಮ್ಮೆ ಸುರಿಯುವ ಮಳೆ, ಮೋಡ ಕವಿದ ವಾತಾವರಣವು ಮುಂಗಾರು ಮಳೆಯ ಆಗಮನಕ್ಕೆ ಮುನ್ನುಡಿ ಬರೆದಂತೆ ಗೋಚರಿಸುತ್ತಿದೆ. ಈ ರೀತಿಯ ವಾತಾವರಣ ಸ್ಥಳೀಯರಿಗೆ ಮಾಮೂಲಿಯಾಗಿದ್ದರೂ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಜಾ ನೀಡುತ್ತಿದೆ.
ಈಗ ಪರೀಕ್ಷೆ ಮುಗಿದಿದೆ ಹೀಗಾಗಿ ಮಕ್ಕಳೊಂದಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಒಂದಷ್ಟು ದಿನ ಇದ್ದು ಹೋಗುವ ಪ್ರಯತ್ನ ಮಾಡುತ್ತಾರೆ. ಈ ಬಾರಿಯ ವಾತಾವರಣ ಪ್ರವಾಸಿಗರಿಗೆ ಮುದ ನೀಡುತ್ತಿರುವುದರಿಂದ ಖುಷಿ, ಖುಷಿಯಾಗಿ ಪ್ರವಾಸಿಗರು ಬರುತ್ತಿದ್ದಾರೆ. ಇನ್ನು ಉತ್ತಮ ಮಳೆಯಾಗಿರುವ ಕಾರಣದಿಂದಾಗಿ ಕಾಫಿ ಬೆಳೆಗಾರರಿಗೆ ಸಂತಸ ತಂದಿದೆ. ಕಾಫಿ ತೋಟದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕಾಫಿ ಗಿಡಗಳ ಕಪಾತ್ ಕಾರ್ಯ ನಡೆಯುತ್ತಿದೆ. ಇದರ ಜತೆಗೆ ಮರಕಪಾತ್ ಕೆಲಸವೂ ಆರಂಭವಾಗುತ್ತಿದೆ.

ಕಳೆದ ವರ್ಷ ಈ ವೇಳೆಗೆ ಸರಿಯಾಗಿ ಮಳೆಯೇ ಸುರಿದಿರಲಿಲ್ಲ. ಪರಿಣಾಮ ಇಡೀ ಜಿಲ್ಲೆ ಬಿಸಿಲಿಗೆ ಬೆಂದು ಹೋದಂತಾಗಿತ್ತು. ತಂಪಾಗಿದ್ದ ಜಿಲ್ಲೆ ಬಿಸಿಯಾಗಿತ್ತು. ಕಾಫಿ ಗಿಡಗಳು ಬಿಸಿಲಿಗೆ ಒಣಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ದೇವರ ದಯೆಯಿಂದ ಈ ವರ್ಷ ಸಕಾಲದಲ್ಲಿ ಮಳೆ ಸುರಿದಿದೆ. ಕಾಫಿ ಬೆಳೆಗಾರರಿಗೆ ಮಾರ್ಚ್ ವೇಳೆಗೆ ಮಳೆ ಸುರಿದರೆ ಉತ್ತಮ ಕಾಫಿ ಫಸಲು ದೊರೆಯುತ್ತದೆ. ಈ ಬಾರಿ ಎಲ್ಲವೂ ಅಂದುಕೊಂಡಂತೆ ಆಗುತ್ತಿದೆ ಹೀಗಾಗಿಯೇ ಬೆಳೆಗಾರರ ಮೊಗದಲ್ಲಿ ನೆಮ್ಮದಿ ಮನೆ ಮಾಡಿದೆ.
ಕೊಡಗಿನ ಸುಂದರ ನೋಟ ಬೇರೆಲ್ಲೂ ಸಿಗುವುದಿಲ್ಲ
ಇನ್ನೊಂದೆಡೆ ಕಾಫಿ, ಕರಿಮೆಣಸು ಕೊಯ್ಲು ಎಲ್ಲವೂ ಮುಗಿದಿರುವುದರಿಂದ ಬೇಸಿಗೆಯ ದಿನಗಳೆಲ್ಲವೂ ತಮ್ಮ ದೈನಂದಿನ ಕೆಲಸವನ್ನು ಬದಿಗಿಟ್ಟು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ದಿನವಾಗಿದೆ. ಈಗ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಕ್ರೀಡಾಕೂಟಗಳದ್ದೇ ಕಾರುಬಾರು ಎನ್ನುವಂತಾಗಿದೆ. ಒಂದೆಡೆ ಕೊಡವ ಕುಟುಂಬಗಳ ನಡುವಿನ ಹಾಕಿ ನಡೆಯುತ್ತಿದ್ದರೆ, ಮತ್ತೊಂದೆಡೆ ಕೊಡವ ಕ್ರಿಕೆಟ್ ನಡೆಯುತ್ತದೆ. ಇದರಾಚೆಗೆ ವಾಲಿಬಾಲ್ ಸೇರಿದಂತೆ ಹಲವು ಕ್ರೀಡಾಕೂಟಗಳು ಅಲ್ಲಲ್ಲಿ ನಡೆಯುತ್ತಿದ್ದು ಎಲ್ಲರೂ ವಿವಿಧ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಾಣಿಸುತ್ತಿದೆ.

ಬಹುತೇಕ ಕ್ರೀಡಾಕೂಟಗಳು ಜಾತಿ, ಸಮುದಾಯಗಳೇ ಆಯೋಜಿಸಿ ತಮ್ಮ ಸಮುದಾಯದವರನ್ನು ಒಂದೆಡೆ ಸೇರಿಸುವ, ಕ್ರೀಡಾ ಮನೋಭಾವ ಹೆಚ್ಚಿಸುವ ಮತ್ತು ತಮ್ಮ ಸಮುದಾಯವನ್ನು ಒಂದೆಡೆ ಕಲೆಹಾಕುವ ಕೆಲಸವು ನಡೆಯುತ್ತಿದೆ. ಹೀಗಾಗಿ ಕ್ರೀಡಾಕೂಟಗಳು ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಾ ಸಾಗುತ್ತಿವೆ. ಎಲ್ಲ ಸಮುದಾಯಗಳು ಕ್ರೀಡೆ ಕಡೆಗೆ ಒಲವು ತೋರುತ್ತಿವೆ. ಸಂಸಾರ ಸಮೇತ ಮೈದಾನಕ್ಕೆ ಆಗಮಿಸಿ ಪ್ರೋತ್ಸಾಹ ನೀಡುತ್ತಿರುವುದು ಕೊಡಗಿನ ವಿಶೇಷತೆಯಾಗಿದೆ. ಬಹುಶಃ ಈ ರೀತಿಯ ವಾತಾವರಣವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.
ಹೋಂಸ್ಟೇಗಳಲ್ಲಿ ಕಾಲ ಕಳೆಯುವ ಪ್ರವಾಸಿಗರು
ಇನ್ನು ಕೊಡಗು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಕೃಷಿಯನ್ನೇ ನಂಬಿದ್ದ ಜನರು ಹೊಸ ವಹಿವಾಟು, ವ್ಯಾಪಾರಗಳನ್ನು ಆರಂಭಿಸುತ್ತಿದ್ದಾರೆ. ಇನ್ನು ಬೆಳೆಗಾರರು ಕಾಫಿ ತೋಟದ ಜತೆಗೆ ಹೋಂಸ್ಟೇ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕುಗ್ರಾಮಗಳಲ್ಲಿಯೂ ಹೋಂಸ್ಟೇಗಳು ಆರಂಭವಾಗಿದ್ದು, ಉದ್ಯೋಗಾವಕಾಶಕ್ಕೆ ದಾರಿ ಮಾಡಿಕೊಡುತ್ತಿದೆ. ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯತ್ತ ಮುಖ ಮಾಡುತ್ತಿದ್ದಾರೆ. ನಗರದಲ್ಲಿ ಸದಾ ಒತ್ತಡದಲ್ಲಿ ತೊಡಗಿರುವವರು ತಮ್ಮೆಲ್ಲ ಜಂಜಾಟವನ್ನು ಮರೆತು ನೆಮ್ಮದಿಯಾಗಿ ಕಾಲ ಕಳೆಯಲು ಇಲ್ಲಿನ ಹೋಂಸ್ಟೇಗಳಿಗೆ ಬರುತ್ತಿದ್ದಾರೆ.
ಬೆಟ್ಟಗುಡ್ಡ, ಕಾಫಿ ತೋಟಗಳ ಹಸಿರಿನ ನಡುವೆ ಖುಷಿಯಾಗಿ, ನೆಮ್ಮದಿಯಾಗಿ ಕಳೆಯುವುದು ಮಾನಸಿಕ ನೆಮ್ಮದಿಯನ್ನು ನೀಡುತ್ತಿದೆ. ಹೀಗಾಗಿಯೇ ಪ್ರವಾಸಿಗರು ಇಲ್ಲಿಗೆ ಬರುವುದು ಮಾಮೂಲಿಯಾಗಿದೆ. ಮೊದಲೆಲ್ಲ ಕೇವಲ ಪಟ್ಟಣಗಳು ಮತ್ತು ಅದರ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಮಾತ್ರ ಪ್ರವಾಸಿಗರು ಕಾಣಿಸುತ್ತಿದ್ದರು. ಈಗ ಹಾಗಿಲ್ಲ ಜಿಲ್ಲೆಯ ಎಲ್ಲೆಂದರಲ್ಲಿ ಪ್ರವಾಸಿಗರು ಕಾಣಿಸುತ್ತಿದ್ದಾರೆ. ಅದರಲ್ಲೂ ಬೆಟ್ಟಗುಡ್ಡ, ಕಾಡಿನ ನಡುವಿನ ಹೋಂಸ್ಟೇಗಳನ್ನೇ ಪ್ರವಾಸಿಗರು ಹುಡುಕಿಕೊಂಡು ಬರುತ್ತಿರುವುದು ಇಲ್ಲಿನ ವಾತಾವರಣ ಖುಷಿ ಕೊಡುತ್ತಿದೆ ಎಂಬ ಕಾರಣಕ್ಕಾಗಿ ಎಂಬುದನ್ನು ತಳ್ಳಿ ಹಾಕಲಾಗದು.












Click it and Unblock the Notifications