Cauvery River: ಕೊಡಗಿನಲ್ಲಿ ಪುನರ್ವಸು ಅಬ್ಬರಕ್ಕೆ ಉಕ್ಕಿ ಹರಿಯುತ್ತಿರುವ ಕಾವೇರಿ
ಮಡಿಕೇರಿ, ಜುಲೈ 18: ಕೊಡಗಿನಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರೆದ ಪರಿಣಾಮ ಕಾವೇರಿ ಭೋರ್ಗರೆದು ಹರಿಯುತ್ತಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾವೇರಿಯ ಉಗಮಸ್ಥಾನ ತಲಕಾವೇರಿ ಸೇರಿದಂತೆ ಬ್ರಹ್ಮಗಿರಿ ಬೆಟ್ಟ ಶ್ರೇಣಿಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಕಾವೇರಿ ನದಿಯ ಉಪನದಿಗಳಾದ ಕನ್ನಿಕೆ, ಸುಜ್ಯೋತಿ ನದಿ ಸಂಗಮ ಕ್ಷೇತ್ರವಾದ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದ್ದು, ನೀರಿನ ಮಟ್ಟ ಇನ್ನಷ್ಟು ಹೆಚ್ಚುತ್ತಿದೆ.

ಇನ್ನು ಈ ಪ್ರದೇಶದಲ್ಲಿ ನೂತನ ಸೇತುವೆ ನಿರ್ಮಾಣದ ಮಾಡಿದ ಪರಿಣಾಮ ಮಡಿಕೇರಿಯೊಂದಿಗೆ ಸಂಪರ್ಕ ಕಳೆದುಕೊಳ್ಳುವುದು ತಪ್ಪಿದೆಯಾದರೂ ಭಾಗಮಂಡಲ ನಾಪೋಕ್ಲು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ ಯಾಗಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರೊಂದಿಗೆ ಕಾವೇರಿ ಹರಿದು ಹೋಗುವ ಪ್ರದೇಶಗಳ ಪೈಕಿ ಹಲವು ಕಡೆಗಳಲ್ಲಿ ನೀರು ತೋಟ ಮತ್ತು ರಸ್ತೆಗೆ ನುಗ್ಗಿರುವ ಕಾರಣ ಸಂಪರ್ಕ ಕಡಿತಗೊಂಡಿದೆ.
ಮೂರ್ನಾಡು ಹೊದ್ದೂರು ಬಳಿಯ ಬಲಮುರಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರ್ನಾಡು ಸಮೀಪದ ಬೇತ್ರಿ ಸೇತುವೆ ಮೇಲೆ ನೀರು ಹರಿಯಲು ಕೆಲವೇ ಕೆಲವು ಅಡಿಯಷ್ಟೇ ಬಾಕಿಯಿದೆ.
ಬೇತ್ರಿ ಬಳಿ ಸೇತುವೆ ಮೇಲೆ ನೀರು ಹರಿದರೆ ಸುತ್ತಮುತ್ತಲಿನ ಗದ್ದೆ, ತೋಟ ಹಾಗೂ ಮನೆಗಳು ನೀರಿನಲ್ಲಿ ಮುಳುಗಡೆಯಾಗುವ ಸಾಧ್ಯತೆಯಿದೆ. ಇಷ್ಟೇ ಅಲ್ಲದೆ ಮುಂದೆ ಕೊಂಡಂಗೇರಿ, ಸಿದ್ದಾಪುರ ಬಳಿಯ ನೆಲ್ಯಹುದಿಕೇರಿ, ಕರಡಿಗೋಡು ಸೇರಿದಂತೆ ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಈ ಪ್ರದೇಶದಲ್ಲಿರುವವರಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಕೆಲವು ಕುಟುಂಬಗಳನ್ನು ತೆರವುಗೊಳಿಸಲಾಗಿದೆ. ಈ ಹಿಂದೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದಾಗ ಹಲವು ಮನೆಗಳು ಮುಳುಗಡೆಯಾಗಿದ್ದವು.
ಪುನರ್ವಸು ಮಳೆಯ ಕೊನೆಯ ಆಟ
ಕಳೆದ ವರ್ಷ ಹೆಚ್ಚು ಮಳೆ ಸುರಿಯದ ಕಾರಣದಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಆದರೆ ಈ ವರ್ಷ ಅದರಲ್ಲೂ ಪುನರ್ವಸು ಮಳೆ ಕಳೆದ ಕೆಲವು ದಿನಗಳಿಂದ ಎಡೆಬಿಡದ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಟ್ಟಗುಡ್ಡ, ಕೊಲ್ಲಿ ಪ್ರದೇಶಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಪ್ರವಾಹ ಕಡಿಮೆಯಾದಂತೆ ಕಾಣುತ್ತಿಲ್ಲ.

ಸದ್ಯ ನಾಪೋಕ್ಲು -ಮೂರ್ನಾಡು ಸಂಪರ್ಕ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ನಾಪೋಕ್ಲು -ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆಯಲ್ಲಿ ನದಿ ನೀರು ನುಗ್ಗಿದ್ದು ಎಲ್ಲೆಡೆ ಜಲಾವೃತವಾಗಿದೆ. ಪ್ರವಾಹ ಪರಿಣಾಮ ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ದುಬಾರೆಯಲ್ಲಿ ಕಾವೇರಿ ಭೋರ್ಗರೆಯುತ್ತಿದ್ದು, ವಾಹನ ನಿಲ್ದಾಣಕ್ಕೆ ನೀರು ನುಗ್ಗಿದೆ.
ಪುನರ್ವಸು ಮಳೆ ಗುರುವಾರಕ್ಕೆ(ಜು.18) ಕೊನೆಗೊಳ್ಳುತ್ತಿದ್ದು, ಶುಕ್ರವಾರ(ಜು.19)ದಿಂದ ಪುಷ್ಯ ಮಳೆ ಅಬ್ಬರಿಸಲಿದೆ. ಇನ್ನು ಮುಂದೆ ಬರುವ ಮಳೆಗಳು ಧಾರಾಕಾರವಾಗಿ ಸುರಿಯುವ ಮಳೆಯಾಗಿರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಎಡೆಬಿಡದೆ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ಕೊಟ್ಟರೆ ಪ್ರವಾಹ ಪರಿಸ್ಥಿತಿ ತಹಬದಿಗೆ ಬರಲಿದೆ. ಒಂದು ವೇಳೆ ಮಳೆ ಮತ್ತೆ ಎಡೆಬಿಡದೆ ಸುರಿಯಲಾರಂಭಿಸಿದರೆ ಪ್ರವಾಹದ ಜೊತೆಗೆ ಭೂಕುಸಿತದಂತಹ ಅನಾಹುತ ಸಂಭವಿಸುವ ಭಯ ಜನರನ್ನು ಕಾಡಲಾರಂಭಿಸಿದೆ.
ಕಳೆದ ವರ್ಷಕ್ಕಿಂತ ದುಪ್ಪಟ್ಟು ಮಳೆ
ಈ ಹಿಂದೆ ಮೂರು ವರ್ಷಗಳ ಕಾಲ ಇದೇ ರೀತಿಯಲ್ಲಿ ಮಳೆ ಸುರಿದು ಅನಾಹುತ ಸೃಷ್ಟಿಯಾಗಿತ್ತು. ಹೀಗಾಗಿ ಈ ಬಾರಿಯೂ ಅಂತಹ ಅನಾಹುತ ಸಂಭವಿಸಿಬಿಟ್ಟರೆ ಎಂಬ ಭಯ ಪ್ರತಿಯೊಬ್ಬರನ್ನು ಕಾಡಲಾರಂಭಿಸಿದೆ. ಒಮ್ಮೆಗೆ ಕುಂಭದ್ರೋಣ ಮಳೆ ಸುರಿಯುವುದರಿಂದ ಯಾವಾಗ ಏನಾಗಿ ಬಿಡುತ್ತದೆಯೋ ಎಂಬ ಆತಂಕದಲ್ಲಿ ಜನ ದಿನಗಳನ್ನು ಕಳೆಯುವಂತಾಗಿದೆ. ಈಗಾಗಲೇ ಮನೆಗಳು ಕುಸಿದ ಸುದ್ದಿಗಳು ಬರುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೆ ಹಲವು ರೀತಿಯ ಅನಾಹುತಗಳು ಸಂಭವಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣವು ಕಳೆದ ವರ್ಷಕ್ಕಿಂತ ದುಪ್ಪಟ್ಟು ಆಗಿರುವುದು ಗೋಚರಿಸಿದೆ. ಜನವರಿಯಿಂದ ಇಲ್ಲಿಯವರೆಗೆ 1242.80ಮಿ,ಮೀ ಮಳೆ ಸುರಿದಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 607.48ಮಿ.ಮೀ ಮಳೆ ಸುರಿದಿತ್ತು. ಜತೆಗೆ ಕಳೆದ ವರ್ಷ ಈ ಅವಧಿಯಲ್ಲಿ ಮಳೆಯೂ ಬಿರುಸು ಪಡೆದುಕೊಂಡಿರಲಿಲ್ಲ. ಆದರೆ ಮುಂಗಾರು ಈ ಬಾರಿ ಆಶಾದಾಯಕವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಡಿಕೇರಿ ಸುತ್ತಮುತ್ತ ಭಾರೀ ಮಳೆ
ಜಿಲ್ಲೆಯಲ್ಲಿ ಒಂದು ದಿನದಲ್ಲಿ ಸುರಿದ ಮಳೆಯ ಪ್ರಮಾಣವನ್ನು ನೋಡಿದರೆ ಸರಾಸರಿ 74.62 ಮಿ.ಮೀ. ಆಗಿದೆ. ಕಳೆದ ವರ್ಷ ಇದೇ ದಿನ ಕೇವಲ 12.60 ಮಿ.ಮೀ.ನಷ್ಟೇ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಒಂದೇ ದಿನದಲ್ಲಿ 100.13 ಮಿ.ಮೀ. ಮಳೆ ಸುರಿದಿದ್ದು, ಇದುವರೆಗಿನ ಮಳೆ ಪ್ರಮಾಣ 2044.19 ಮಿ.ಮೀ.ಗೆ ತಲುಪಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಒಂದೇ ದಿನ 64.40 ಮಿ.ಮೀ. ಮಳೆಸುರಿದಿದ್ದು, ಇಲ್ಲಿಯವರೆಗೆ 1397.55 ಮಿ.ಮೀ. ಆಗಿದೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ 75.62 ಮಿ.ಮೀ. ಮಳೆಯಾಗಿದ್ದು, ಇಲ್ಲಿಯವರೆಗೆ 1364.70 ಮಿ.ಮೀ. ಮಳೆ ಸುರಿದಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 99.25 ಮಿ.ಮೀ. ಹಾಗೆಯೇ ಇಲ್ಲಿಯವರೆಗೆ 1364.86 ಮಿ.ಮೀ. ಮಳೆಯಾಗಿದೆ. ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ 33.70 ಮಿ.ಮೀ. ಮಳೆಯಾಗಿದ್ದು ಇಲ್ಲಿ ತನಕ 938.3 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸೋಮವಾರಪೇಟೆಯ ಶಾಂತಳಿಯಲ್ಲಿ 174, ಭಾಗಮಂಡಲ 125, ಶ್ರೀಮಂಗಲ 97 ಮಿ.ಮೀ, ಮಳೆ ಸುರಿದಿದ್ದರೆ ಅತಿ ಕಡಿಮೆ 22.20ಮಿ,ಮೀ ಮಳೆ ಕುಶಾಲನಗರದಲ್ಲಿ ದಾಖಲಾಗಿದೆ.
ಹಾರಂಗಿಗೆ ಒಳಹರಿವು ಹೆಚ್ಚಾಗುವ ಸಾಧ್ಯತೆ
ಜಿಲ್ಲೆಯಲ್ಲಿರುವ ಪುಟ್ಟ ಜಲಾಶಯ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹರಿದು ಹೋಗುತ್ತಿದ್ದರೆ, ಗರಿಷ್ಠ 2,859 ಅಡಿಗಳ ಹಾರಂಗಿ ಜಲಾಶಯಕ್ಕೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಭದ್ರತೆ ದೃಷ್ಟಿಯಿಂದ 10,700 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಸದ್ಯ ಜಲಾಶಯದಲ್ಲಿ 2852.82 ಅಡಿಗಳಷ್ಟು ನೀರಿದೆ. ಮಡಿಕೇರಿ ನಗರ ಸೇರಿದಂತೆ ಸುತ್ತಮುತ್ತ ಹಾಗೂ ಸೋಮವಾರಪೇಟೆ ತಾಲೂಕಿನ ಕೆಲವೆಡೆ ಧಾರಾಕಾರ ಮಳೆಯಾದರೆ ಇನ್ನಷ್ಟು ನೀರು ಹಾರಂಗಿ ಜಲಾಶಯಕ್ಕೆ ಹರಿದು ಬರಲಿದ್ದು, ಹೊರಹರಿವಿನ ಪ್ರಮಾಣ ಇನ್ನಷ್ಟು ಜಾಸ್ತಿಯಾದರೆ ಅಚ್ಚರಿ ಪಡುವಂತಿಲ್ಲ.












Click it and Unblock the Notifications