ಕೊಡಗಿನಲ್ಲಿ ಕಕ್ಕಡ ಮಾಸ ಆರಂಭ: ಏನಿದರ ವಿಶೇಷತೆ..?
ಮಡಿಕೇರಿ, ಜುಲೈ 18: ಕೊಡಗಿನಲ್ಲಿ ಮುಂಗಾರು ಆರಂಭದಿಂದಲೂ ಮಂದಗತಿಯಲ್ಲಿ ಸುರಿಯುತ್ತಿದ್ದ ಮಳೆ ಇದೀಗ ಬಿರುಸು ಪಡೆದುಕೊಂಡಿದೆ. ಪುನರ್ವಸು ಮಳೆ ಮುಗಿದು ಪುಷ್ಯ ಮಳೆ ಆರಂಭವಾಗಲು ಒಂದೇ ದಿನ ಬಾಕಿ ಇರುವುದರಿಂದ ಕೊನೆಯ ಗಳಿಗೆಯಲ್ಲಿ ಧಾರಾಕಾರವಾಗಿ ಸುರಿಯಲಾರಂಭಿಸಿದೆ. ಪರಿಣಾಮ ಕೊಡಗಿನಲ್ಲಿ ನದಿತೊರೆಗಳೆಲ್ಲವೂ ತುಂಬಿ ಹರಿಯುತ್ತಿದೆ. ಇನ್ನು ಕಾವೇರಿ ಮತ್ತು ಲಕ್ಷ್ಮಣತೀರ್ಥ ನದಿ ಪ್ರವಾಹೋಪಾದಿಯಲ್ಲಿ ಭೋರ್ಗರೆಯುತ್ತಿದೆ.
ಸಾಮಾನ್ಯವಾಗಿ ಈ ಸಮಯದಲ್ಲಿ ಧಾರಾಕಾರವಾಗಿ ಮಳೆ ಸುರಿಯುವುದು ಸಾಮಾನ್ಯ. ಈ ಸಮಯವನ್ನು ಅಂದರೆ ಜುಲೈ 17ರಿಂದ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿಯನ್ನು ಕಕ್ಕಡ(ಆಟಿ) ತಿಂಗಳೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವುದಲ್ಲದೆ, ಕೊಡಗಿನಲ್ಲಿ ಕೃಷಿ ಚಟುವಟಿಕೆ ಅದರಲ್ಲೂ ಭತ್ತದ ಕೃಷಿ ಕೆಲಸ ಕಾರ್ಯಗಳು ಬಿಡುವಿಲ್ಲದೆ ನಡೆಯುತ್ತದೆ. ಇತ್ತೀಚೆಗಿನ ಬೆಳವಣಿಗೆಯಲ್ಲಿ ಭತ್ತದ ಕೃಷಿ ಪ್ರದೇಶಗಳು ಮೊದಲಿನಷ್ಟು ಇಲ್ಲವಾಗಿವೆ. ಆದರೂ ಇತರೆ ಕೃಷಿ ಚಟುವಟಿಕೆಗಳು ಇದ್ದೇ ಇರುತ್ತವೆ.

ಕಕ್ಕಡ ಮಾಸದಲ್ಲಿ ಕಾವೇರಿಗೆ ಪೂಜೆ
ಹಾಗೆನೋಡಿದರೆ ಮೊದಲಿನ ಕಾಲದಲ್ಲಿದ್ದ ಮಳೆಗಾಲದ ಚಿತ್ರಣವೇ ಬೇರೆಯಾಗಿತ್ತು. ಆಗ ಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿತ್ತು. ಮೇ ತಿಂಗಳ ಕೊನೆಯಲ್ಲಿ ಆರಂಭವಾದ ಮಳೆ ಒಂದೇ ಸಮನೆ ಸುರಿಯುತ್ತಿತ್ತು. ಸೆಪ್ಟಂಬರ್ ಅಕ್ಟೋಬರ್ ತಿಂಗಳವರೆಗೆ ಸುರಿಯುತ್ತಿತ್ತು. ಆದರೆ ಈಗ ಮಳೆ ಸುರಿದರೆ ಒಮ್ಮೆಗೆ ಸುರಿಯುತ್ತದೆ. ಇಲ್ಲಾಂದ್ರೆ ಸುರಿಯುವುದೇ ಇಲ್ಲ.
ವಾರಗಟ್ಟಲೆ ಸುರಿಯಬೇಕಾದ ಮಳೆ ಒಮ್ಮೆಲೆ ಸುರಿಯುವುದರಿಂದ ನಿರೀಕ್ಷೆಗೂ ಮೀರಿದ ಅನಾಹುತಗಳು ಸಂಭವಿಸುತ್ತವೆ. ಹಿಂದಿನ ಕಾಲದಿಂದಲೂ ಕೊಡಗಿನ ಕಕ್ಕಡ ಮಾಸದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತದೆ. ಇದೇ ಸಮಯದಲ್ಲಿ ಕಾವೇರಿ ಪ್ರವಾಹೋಪಾದಿಯಲ್ಲಿ ಹರಿಯುತ್ತದೆ.

ಈ ವೇಳೆ ಉಕ್ಕೇರಿ ಹರಿಯುವ ಕಾವೇರಿ ಶಾಂತಳಾಗುವಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಉತ್ಸವವನ್ನು ನಡೆಸಲಾಗುತ್ತದೆ. ಇನ್ನು ಕಕ್ಕಡ ಮಾಸದ 18ನೇ ದಿನ (ಆ.3)ವನ್ನು ಕಕ್ಕಡ ಪದ್ನಟ್ ಎಂದು ಕರೆಯಲಾಗುತ್ತದೆ. ಈ ದಿನವನ್ನು ಕೊಡಗಿನಲ್ಲಿ ಆಚರಣೆ ಮಾಡಲಾಗುತ್ತದೆ. ಅಂದು ಇದರ ಬಗ್ಗೆ ನೋಡುತ್ತಾ ಹೋದರೆ ಹತ್ತು ಹಲವು ವಿಶೇಷತೆಗಳು ಇದರ ಹಿಂದೆ ಇರುವುದನ್ನು ನಾವು ಕಾಣಬಹುದಾಗಿದೆ. ಅವತ್ತಿನ ಆಚರಣೆಗಳನ್ನು ಇಂದಿಗೂ ಜಿಲ್ಲೆಯ ಜನ ಚಾಚೂ ತಪ್ಪದೆ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.
ಹಿರಿಯರು ತಂದ ಆಚರಣೆಯಲ್ಲೇನಿದೆ?
ಅವತ್ತಿನ ಮಳೆಗಾಲದ ಪರಿಸ್ಥಿತಿಗನುಗುಣವಾಗಿ ಕೆಲವು ಆಚರಣೆಯನ್ನು ಹಿರಿಯರು ಜಾರಿಗೆ ತಂದಿದ್ದರು. ಅದನ್ನು ಇವತ್ತಿಗೂ ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಆಚರಣೆಯಲ್ಲಿ ಒಂದಿಷ್ಟು ಬದಲಾವಣೆಗಳು ಕಾಲಕ್ಕೆ ತಕ್ಕಂತೆ ಆಗಿವೆ. ಆದರೂ ಆಚರಣೆ ಮಸುಕಾಗಿಲ್ಲ. ಹಿರಿಯರು ಕೆಲವೊಂದನ್ನು ಆಚರಣೆ ತಂದಿರುವುದರ ಹಿಂದೆ ವೈಜ್ಞಾನಿಕ ಕಾರಣಗಳು ಇಲ್ಲದಿಲ್ಲ. ಆಗಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಮುಖ ಬೆಳೆಯಾಗಿತ್ತು. ನೀರಿನ ಆಶ್ರಯವಿರುವ ಸ್ಥಳಗಳಲ್ಲಿ ಗದ್ದೆಗಳನ್ನು ನಿರ್ಮಿಸಿ ಕೃಷಿ ಮಾಡುತ್ತಿದ್ದರು ಭತ್ತದ ಕೃಷಿ ಅವತ್ತಿನ ದಿನದಲ್ಲಿ ಪ್ರಮುಖವಾಗಿತ್ತು. ಹೀಗಾಗಿ ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭವಾದರೆ ಆಗಸ್ಟ್ ತಿಂಗಳು ಬಂದರೂ ಮಗಿಯುತ್ತಿರಲಿಲ್ಲ.

ಎಡೆ ಬಿಡದೆ ಸುರಿಯುವ ಮಳೆಯಲ್ಲಿ ಕೊರೆಯುವ ಚಳಿಯಂತಹ ಶೀತ ವಾತಾವರಣದಲ್ಲಿ ದೇಹವನ್ನು ಬಿಸಿಯಾಗಿಟ್ಟುಕೊಳ್ಳಬೇಕಾಗಿತ್ತು. ಅದಕ್ಕಾಗಿ ಮಳೆಗಾಲದಲ್ಲಿ ಆಯಾಯ ಸಂದರ್ಭಕ್ಕೆ ತಕ್ಕಂತೆ ಸುತ್ತಮುತ್ತಲಿದ್ದ ಗಿಡಮೂಲಿಕೆಗಳಲ್ಲಿನ ಔಷಧೀಯ ಗುಣಗಳನ್ನು ಗಮನಿಸಿ ಅದನ್ನು ಬಳಸಲು ಆರಂಭಿಸಿದ್ದರಲ್ಲದೆ, ಅದರ ಸೇವನೆಗೆ ಅನುಕೂಲವಾಗುವಂತೆ ಆಚರಣೆಯನ್ನು ಜಾರಿ ಮಾಡಿದರು. ಅದು ಹಾಗೆಯೇ ಮುಂದುವರೆದು ಇಂದಿಗೂ ಅಚರಣೆಯಲ್ಲಿದೆ. ಅದುವೇ ಕಕ್ಕಡ ಪದ್ನಟ್.
ಬಿರುಸು ಪಡೆದುಕೊಳ್ಳುವ ಕೃಷಿ ಚಟುವಟಿಕೆ
ಅವತ್ತಿನ ಕಾಲದ ಮಳೆಗಾಲ ಎನ್ನುವುದು ಕೊಡಗಿನವರ ಪಾಲಿಗೆ ಒಂದು ರೀತಿಯ ಚಾಲೆಂಜ್ ಆಗಿತ್ತು. ಸುರಿಯುವ ಮಳೆಯಲ್ಲಿಯೇ ಕೃಷಿ ಕೆಲಸವನ್ನು ಮಾಡಬೇಕಾಗಿತ್ತು. ಹೊರಗಿನ ಪ್ರಪಂಚದ ಸಂಪರ್ಕದಿಂದ ದೂರವಾಗಿ ಭತ್ತದ ಕೃಷಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಜನ ಭತ್ತದ ಕೃಷಿ ನಡುವೆ ಎಲ್ಲರೂ ಒಟ್ಟಾಗಿ ಸೇರಿ ಕೃಷಿ ಕಾರ್ಯ ಮಾಡುವ ಮೂಲಕ ದೊಡ್ಡನಾಟಿಯಂದು ಒಂಡೆಡೆ ಕಲೆತು ನಾಟಿ ಮಾಡಿ ಬಳಿಕ ಅದರಲ್ಲಿ ಓಟ ಏರ್ಪಡಿಸಿ ಗೆದ್ದವರನ್ನು ಅಭಿನಂದಿಸಿ, ಸೋತವರಲ್ಲಿ ಆತ್ಮವಿಶ್ವಾಸ ತುಂಬಿ ಮನರಂಜನೆ ಪಡೆಯುತ್ತಿದ್ದರು.
ಮಳೆ ಇರಲಿ ಇಲ್ಲದಿರಲಿ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯಲೇ ಬೇಕಾಗಿತ್ತು. ಜತೆಗೆ ಈ ಸಮಯದಲ್ಲಿ ಗದ್ದೆ ಕೆಲಸ ಹೊರತು ಪಡಿಸಿ ಉಳಿದ ಎಲ್ಲ ಶುಭ ಕಾರ್ಯಗಳು ನಿಷಿದ್ಧವಾಗಿತ್ತು. ಅವತ್ತಿನ ದಿನಗಳಲ್ಲಿ ಕಕ್ಕಡ ತಿಂಗಳು ಎಂದರೆ ಸದಾ ಸುರಿಯುವ ಮಳೆ ಮತ್ತು ಬಿಡುವಿಲ್ಲದ ಕೆಲಸ ಇಂತಹ ಸಂದರ್ಭಗಳಲ್ಲಿ ತಮ್ಮ ಶರೀರವನ್ನು ಶೀತದಿಂದ ರಕ್ಷಿಸಿಕೊಂಡು ಆರೋಗ್ಯವಾಗಿರುವುದು ಕೂಡ ಬಹು ಮುಖ್ಯವಾಗಿತ್ತು. ಹಾಗಾಗಿಯೇ ಅವತ್ತು ಎಲ್ಲೆಡೆಯೂ ಸುಲಭವಾಗಿ ಬೆಳೆಯುತ್ತಿದ್ದ ಗಿಡಮೂಲಿಕೆಗಳಲ್ಲಿರುವ ಆರೋಗ್ಯಕಾರಿ ಗುಣ ಮತ್ತು ರುಚಿಯನ್ನು ಅರಿತು ಅವುಗಳನ್ನು ಬಳಕೆ ಮಾಡುತ್ತಾ ಬಂದರು.
ಏನೇನು ಆಹಾರ ಸೇವಿಸುತ್ತಿದ್ದರು ಗೊತ್ತಾ?
ಕಕ್ಕಡ ತಿಂಗಳಲ್ಲಿ ಮಳೆ ಹೆಚ್ಚು ಸುರಿಯುತ್ತಿದ್ದರಿಂದ ಮನೆಯಿಂದ ಹೊರಗೆ ಹೋಗಲಾಗದ ಪರಿಸ್ಥಿತಿ ಇದ್ದುದರಿಂದ ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಪತ್ರೊಡೆ, ನಾಟಿಕೋಳಿ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು.
ಇವುಗಳಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಶಕ್ತಿಯಿತ್ತು. ಇನ್ನು ಕಕ್ಕಡ ತಿಂಗಳ 18ನೇ ದಿನ ಕಾಡಿನಲ್ಲಿ ಸಿಗುವ ಆಟಿಸೊಪ್ಪನ್ನು ತಂದು ಅದನ್ನು ಚೆನ್ನಾಗಿ ತೊಳೆದು ಬಳಿಕ ನೀರಿನಲ್ಲಿ ಬೇಯಿಸಿ ಅದು ಬಿಡುವ ನೀರಿನಲ್ಲಿ ಪಾಯಸ, ಸೇರಿದಂತೆ ಇನ್ನಿತರ ತಿನಿಸು ಮಾಡಿ ಜೇನುತುಪ್ಪದೊಂದಿಗೆ ಸೇವಿಸುವುದು ಹಾಗೆಯೇ ನಾಟಿಕೋಳಿ ಸಾರು, ಕಾಡಿನಲ್ಲಿ ಬೆಳೆಯುವ ಕೆಸುವನ್ನು ಬಳಸಿ ಮಾಡುವ ಪತ್ರೊಡೆ ಎಲ್ಲವೂ ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತಿತ್ತು. ಇದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿತ್ತು.
ಇದೆಲ್ಲದರ ನಡುವೆ ಕಕ್ಕಡ ಭಾರೀ ಮಳೆ ಸುರಿಯುವ ಮಾಸವಾಗಿದ್ದು, ಮಳೆಯಿಂದ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ನದಿ ತಟದಲ್ಲಿ, ಬೆಟ್ಟಗುಡ್ಡಗಳ ಬಳಿ ಮನೆ ಮಾಡಿಕೊಂಡು ಬದುಕುವ ನಿವಾಸಿಗಳೆಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಈಗಾಗಲೇ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ಮನೆಗೋಡೆಗಳು ಕುಸಿದು ಬೀಳುತ್ತಿವೆ. ಜತೆಗೆ ವಿದ್ಯುತ್ ಕಂಬಗಳು, ಮುರಿದು ಬೀಳುತ್ತವೆ. ಇದರಾಚೆಗೆ ಬೆಟ್ಟಗುಡ್ಡಗಳು ಕೂಡ ಕುಸಿಯುವ ಭಯವೂ ಇಲ್ಲದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.












Click it and Unblock the Notifications