ಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜು
ಮಡಿಕೇರಿ, ಸೆಪ್ಟೆಂಬರ್ 13 : ಕಳೆದ ತಿಂಗಳು ಸುರಿದ ಮಹಾಮಳೆಗೆ ಪ್ರವಾಹ ಸೃಷ್ಠಿಯಾಗಿ, ಭೂಕುಸಿತ ಸಂಭವಿಸಿ ಮನೆ, ಆಸ್ತಿಪಾಸ್ತಿ ನಾಶವಾಗಿದ್ದು ತಲತಲಾಂತರದಿಂದ ಬಾಳಿ ಬದುಕಿದ ಕುಟುಂಬಗಳು ಬೀದಿಗೆ ಬಿದ್ದಿವೆ. ಇದೀಗ ಪರಿಹಾರಕ್ಕಾಗಿ ಕೇಂದ್ರ ಮೊರೆಹೋಗಿದ್ದು, ಜಲಪ್ರಳಯದಿಂದ ಆದ ನಷ್ಟವನ್ನು ಅಂದಾಜಿಸಲು ಇದೀಗ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಆಗಮಿಸಿದೆ.
ಬುಧವಾರವೇ ಆಗಮಿಸಿದ ತಂಡ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿತ್ತು. ಗುರುವಾರ ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ, ದೇವಸ್ತೂರು, ತಂತಿಪಾಲ, ಕಾಲೂರು, ಕುಂದರಕೊಡಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ನಿಯೋಗ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿ ಜಲಪ್ರಳಯದಿಂದ ಹಾನಿಗೊಳಗಾಗಿರುವ ಜನರ ಕಲ್ಯಾಣಕ್ಕಾಗಿ 2000 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಪ್ರಧಾನಿಗಳು ಕೇಂದ್ರದಿಂದ ಅಧ್ಯಯನ ತಂಡವನ್ನು ಕಳುಹಿಸುವುದಾಗಿ ಹೇಳಿದ್ದರು. ಅದರಂತೆ ರಾಜ್ಯಕ್ಕೆ ಬಂದ ಅಧ್ಯಯನ ತಂಡ ಬುಧವಾರ ಮತ್ತು ಗುರುವಾರ ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ ಜಿಲ್ಲೆಗಳ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದೆ...

ಮೂವರು ಅಧಿಕಾರಿಗಳ ನಿಯೋಗ
ಅತಿ ಹೆಚ್ಚು ಹಾನಿಗೊಳಗಾದ ಕೊಡಗಿನ ಮಡಿಕೇರಿ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿರುವ ಕೇಂದ್ರ ಅಧ್ಯಯನ ತಂಡದ ಪ್ರಮುಖರಾದ ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್, ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಅಧೀಕ್ಷಕ ಎಂಜಿನಿಯರ್ ಜಿತೇಂದ್ರ ಪಾನ್ವರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪೊನ್ನುಸ್ವಾಮಿ, ಅವರು ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆ, ಮನೆ, ಅಂಗನವಾಡಿ, ಶಾಲಾ ಕಟ್ಟಡಗಳ ಹಾನಿ ಪ್ರದೇಶಗಳನ್ನು ವೀಕ್ಷಿಸಿದರು.

ಕೇಂದ್ರ ಸರ್ಕಾರಕ್ಕೆ ವರದಿ
ತಂಡದ ಜೊತೆ ಇದ್ದ ಸಂಸದ ಪ್ರತಾಪ್ ಸಿಂಹ ಅವರು, 'ಕೇಂದ್ರ ತಂಡವು ಈಗಾಗಲೇ ಎರಡು ದಿನಗಳಿಂದ ತೀವ್ರ ಅತಿವೃಷ್ಟಿ ಪ್ರದೇಶಗಳಿಗೆ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದ್ದು, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿಸಲಿದೆ. ಆ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಜೊತೆಗೂಡಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಪ್ರಕೃತಿ ವಿಕೋಪದದಿಂದ ಉಂಟಾಗಿರುವ ನಷ್ಟ ಸಂಬಂಧ ಹೆಚ್ಚಿನ ಹಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಲಾಗುವುದು' ಎಂದರು.

ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ
ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ, 'ಕೇಂದ್ರ ತಂಡವು ಜಿಲ್ಲೆಯ ನಾನಾ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದೆ. ಕೇಂದ್ರ ತಂಡದ ಅಧಿಕಾರಿಗಳು ಶುಕ್ರವಾರ ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟದ ಬಗ್ಗೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ' ಎಂದು ಹೇಳಿದರು.

ಹಲವು ಅಧಿಕಾರಿಗಳ ಉಪಸ್ಥಿತಿ
ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜ, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ತಹಶೀಲ್ದಾರ್ ಕುಸುಮ, ಇಂಜಿನಿಯರ್‌ಗಳು ಕೇಂದ್ರ ತಂಡದ ಜೊತೆಗಿದ್ದರು.












Click it and Unblock the Notifications