Kodagu Weather: ಕೊಡಗಿನಲ್ಲಿ ಇಲ್ಲಿವರೆಗೆ ಸುರಿದ ಮಳೆ ಪ್ರಮಾಣ ಎಷ್ಟು ಗೊತ್ತಾ?

ಮಡಿಕೇರಿ, ಡಿಸೆಂಬರ್‌ 03: ಫೆಂಗಲ್ ಚಂಡಮಾರುತದ ಪರಿಣಾಮ ಕೊಡಗಿನಲ್ಲಿ ಮುಂಗಾರಿನಂತೆ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿರುವುದು ಒಂದೆಡೆಯಾದರೆ ಭತ್ತ ಮತ್ತು ಕಾಫಿ ಬೆಳೆಯ ಮೇಲೆಯೂ ಪರಿಣಾಮ ಬೀರಿದೆ. ಆದರೆ ಸಾಮಾನ್ಯವಾಗಿ ಈ ವೇಳೆಗೆಲ್ಲ ಮಳೆ ದೂರವಾಗಿ ಬಿಸಿಲು ಕಾಣಿಸುತ್ತಿತ್ತು. ಆ ಬಿಸಿಲು ಭತ್ತ ಮತ್ತು ಕಾಫಿ ಕೊಯ್ಲುಗೆ ಸಹಕಾರಿಯಾಗಿರುತ್ತಿತ್ತು. ಆದರೆ ಈ ಬಾರಿ ಚಂಡಮಾರುತದಿಂದಾಗಿ ಸುರಿದ ಮಳೆ ವಾರ್ಷಕ ಮಳೆಯ ಪ್ರಮಾಣ ಹೆಚ್ಚಿಸುವ ಜೊತೆಗೆ ತೊಂದರೆ ನೀಡಿರುವುದಂತು ನಿಜ.

ಪ್ರತಿವರ್ಷವೂ ಈ ವೇಳೆಗೆಲ್ಲ ಕೊಡಗಿನಲ್ಲಿ ಎಷ್ಟು ಮಳೆ ಸುರಿದಿದೆ ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಕಾರಣ ಮಳೆಯೇ ಬರುತ್ತಿರಲಿಲ್ಲ. ಆದರೆ ಈ ಬಾರಿ ಬೇಸಿಗೆಯಲ್ಲಿ ಮಳೆ ಕೈಕೊಟ್ಟು ಬಿಸಿಲಿನ ಪ್ರಖರತೆ ಹೆಚ್ಚಾಗಿ ಕಾಫಿಗಿಡಗಳೇ ಸುಟ್ಟು ಹೋಗುವ ಪರಿಸ್ಥಿತಿಗೆ ಬಂದಿತ್ತಾದರೂ ಮೇ ತಿಂಗಳಲ್ಲಿ ಸುರಿಯಲು ಆರಂಭಿಸಿದ ಮಳೆ ಇಲ್ಲಿ ತನಕವೂ ಸುರಿಯುತ್ತಲೇ ಇದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿರುವುದು ಗೋಚರಿಸುತ್ತಿದೆ. ಇದರಿಂದ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂಬುದು ಖುಷಿಯ ವಿಚಾರವಾಗಿದೆ.

How Much Rain Has Fallen In Kodagu District Till Now

ಈ ಬಾರಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಭರ್ತಿಯಾದಲ್ಲಿಂದ ಇಲ್ಲಿವರೆಗೆ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಹಾಗೆಯೇ ಕೊಡಗಿನಿಂದ ಹರಿದು ಹೋಗುವ ಕಾವೇರಿ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಿನ ಇಳಿಮುಖ ಕಾಣಿಸುತ್ತಿಲ್ಲ. ಇದಕ್ಕೆ ಕಾರಣವಾಗಿರುವುದು ಕೊಡಗಿನಲ್ಲಿ ಆಗಾಗ್ಗೆ ಸುರಿಯುತ್ತಿರುವ ಮಳೆಯಾಗಿದೆ. ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದಿರುವುದಕ್ಕೆ ಖುಷಿಪಡಬೇಕೋ? ಅಥವಾ ಮಳೆಯಿಂದ ಆಗುತ್ತಿರುವ ತೊಂದರೆ ಬಗ್ಗೆ ಬೇಸರ ಪಡಬೇಕೋ ಎಂಬ ಪರಿಸ್ಥಿತಿ ಕೊಡಗಿನವರದ್ದಾಗಿದೆ.

ಕಳೆದ ವರ್ಷಕ್ಕಿಂತ 1304 ಮಿ.ಮೀ ಅಧಿಕ ಮಳೆ

ಅದು ಏನೇ ಇರಲಿ ವಾತಾವರಣಕ್ಕೆ ತಕ್ಕಂತೆ ಬದುಕು ನಡೆಸುವುದು ಕೊಡಗಿನ ಜನರಿಗೆ, ಬೆಳೆಗಾರರಿಗೆ ಅಭ್ಯಾಸವಾಗಿ ಹೋಗಿದೆ. ಹಾಗಾಗಿ ಎಲ್ಲ ಸಮಸ್ಯೆಗಳನ್ನು ಎದುರಿಸಿಕೊಂಡೇ ಬದುಕು ಕಟ್ಟಿಕೊಂಡು ಬಂದಿದ್ದಾರೆ. ಈ ಬಾರಿಯ ಹವಾಮಾನ ವೈಪರೀತ್ಯ ಮತ್ತು ಅಧಿಕ ಮಳೆಯಿಂದಾಗಿ ಕಾಫಿ ಮತ್ತು ಕರಿಮೆಣಸು ಇಳುವರಿ ಕಡಿಮೆಯಾಗಿದೆ. ಬೆಳೆಗಾರರು ನಷ್ಟ ಅನುಭವಿಸಲೇ ಬೇಕಾಗಿದೆ. ಇನ್ನು ಇಲ್ಲಿಯ ತನಕ ಎಷ್ಟು ಮಳೆ ಸುರಿದಿದೆ ಎಂಬುದನ್ನು ನೋಡಿದ್ದೇ ಆದರೆ ಅಚ್ಚರಿಯಾಗದಿರದು.

ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದ ಇಲ್ಲಿವರೆಗೆ ಕೊಡಗು ಜಿಲ್ಲೆಯಲ್ಲಿ ಸರಾಸರಿ ಸುಮಾರು 1304 ಮಿ.ಮೀ ಮಳೆ ಹೆಚ್ಚು ಸುರಿದಿದೆ. ಕಳೆದ ವರ್ಷ ಕಡಿಮೆ ಮಳೆ ಸುರಿದು ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿತ್ತಲ್ಲದೆ, ಕಾವೇರಿ ನದಿಯಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿಯದ ಕಾರಣ ಕೆಆರ್ ಎಸ್ ಜಲಾಶಯ ಭರ್ತಿಯಾಗದೆ ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಆದರೆ ಈ ವರ್ಷ ನಿರೀಕ್ಷೆ ಮೀರಿ ಮಳೆ ಸುರಿದಿದ್ದು ಜಲಾಶಯ ಮಾತ್ರವಲ್ಲದೆ ಕೆರೆಕಟ್ಟೆಗಳು ಭರ್ತಿಯಾಗಿವೆ.

ಒಂದೇ ದಿನ ಸರಾಸರಿ 44.93ಮಿ.ಮೀ. ಮಳೆ

ಫೆಂಗಲ್ ಚಂಡಮಾರುತದ ಪರಿಣಾಮ ಕೊಡಗಿನಲ್ಲಿ ಒಂದು ದಿನದ ಅವಧಿಯಲ್ಲಿ ಸರಾಸರಿ 44.93 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಈ ದಿನಗಳಲ್ಲಿ ಮಳೆಯ ವಾತಾವರಣವೇ ಇರಲಿಲ್ಲ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 3093.22 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1789.35 ಮಿ.ಮೀ ಮಾತ್ರ ಮಳೆಯಾಗಿತ್ತು. ತಾಲೂಕುವಾರು ನೋಡುವುದಾದರೆ, ಒಂದು ದಿನದ ಅವಧಿಯಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ 74.30 ಮಿ.ಮೀ ಮಳೆಯಾಗಿದ್ದರೆ, ಜನವರಿಯಿಂದ ಇಲ್ಲಿಯವರೆಗಿನ ಮಳೆ 4533.02 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2942.77 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ 48.20 ಮಿ.ಮೀ. ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ 2713.50 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1509.01 ಮಿ.ಮೀ. ಮಳೆಯಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 36.94 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 2852.70 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1619.67 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ 28.70 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 3518.31 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1851.79 ಮಿ.ಮೀ. ಮಳೆಯಾಗಿತ್ತು.

ಭಾಗಮಂಡಲ, ಸಂಪಾಜೆಯಲ್ಲಿ ಅತ್ಯಧಿಕ ಮಳೆ

ಕುಶಾಲನಗರ ತಾಲ್ಲೂಕಿನಲ್ಲಿ ಸರಾಸರಿ 36.50 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1848.58 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1023.50 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯ ಹೋಬಳಿವಾರು ಅತಿಹೆಚ್ಚು ಮಳೆ ಸಂಪಾಜೆ 94, ಭಾಗಮಂಡಲ 90 ಮಿ.ಮೀ ಮಳೆಯಾಗಿದ್ದರೆ ಕಡಿಮೆ ಮಳೆ ಸೋಮವಾರಪೇಟೆ 24, ಶನಿವಾರಸಂತೆ 25 ಮಿ.ಮೀ ಸುರಿದಿದೆ. ಗರಿಷ್ಠ ಮಟ್ಟ 2,859 ಅಡಿ ಹೊಂದಿರು ಹಾರಂಗಿ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 2835.21 ಅಡಿಗಳಷ್ಟಿದ್ದು. ಒಳಹರಿವು 651 ಕ್ಯುಸೆಕ್ ಇದೆ. ಕಳೆದ ವರ್ಷ ಇದೇ ದಿನ 128 ಕ್ಯುಸೆಕ್ ಒಳ ಹರಿವು ಇತ್ತು.

ಈ ವರ್ಷ ಜಲಾಶಯದ ಒಳಹರಿವು ತುಸು ಹೆಚ್ಚಾಗಿಯೇ ಇದೆ. ಜಲಾಶಯದಿಂದ ನದಿಗೆ 200 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಇದೇ ರೀತಿಯಲ್ಲಿ ನೀರಿನ ಪ್ರಮಾಣ ಬೇಸಿಗೆಯ ತನಕ ಉಳಿದು ಬಿಟ್ಟರೆ ನೀರಿನ ಸಮಸ್ಯೆ ಕಾಣಿಸದು. ಒಟ್ಟಾರೆಯಾಗಿ ಹೇಳಬೇಕೆಂದರೆ ಚಂಡಮಾರುತದ ಪರಿಣಾಮ ಸುರಿದ ಮಳೆಯಿಂದ ನದಿ, ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+