Get Updates
Get notified of breaking news, exclusive insights, and must-see stories!

Kodagu Rains: ಸುರಿಯುವ ಮಳೆಗೆ ಭೋರ್ಗರೆದ ನದಿಗಳು: ಬೆಚ್ಚಿ ಬಿದ್ದ ಕೊಡಗಿನ ಜನ

ಮಡಿಕೇರಿ, ಜುಲೈ 25: ಕೊಡಗಿನಲ್ಲಿ ಮಹಾಮಳೆ ಸುರಿಯಲಾರಂಭಿಸಿದೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನ ಬೆಚ್ಚಿ ಬಿದ್ದಿದ್ದಾರೆ. ಕಾವೇರಿ ನದಿ ಭೋರ್ಗರೆದು ಹರಿಯುತ್ತಿದ್ದು, ನದಿ ತಟದ ಜನರು ಭಯಭೀತರಾಗಿದ್ದಾರೆ. ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಿದ್ದರೆ, ಮತ್ತೊಂದೆಡೆ ವಾಸದ ಮನೆಗಳಿಗೆ ನೀರು ನುಗ್ಗುತ್ತಿವೆ. ಸದ್ಯ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಬರಬೇಕಾದ ಸಮಯದಲ್ಲಿ ಸರಿಯಾಗಿ ಮಳೆ ಬಾರದೆ ಇದುವರೆಗೆ ಸುರಿಯಬೇಕಾಗಿದ್ದ ಮಳೆ ಒಮ್ಮೆಲೆ ಸುರಿಯುತ್ತಿರುವುದರಿಂದ ದಿಢೀರ್ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಕಾವೇರಿ, ಲಕ್ಷ್ಮಣ ತೀರ್ಥ, ಕೂಟುಹೊಳೆ ನದಿಗಳು ಮಾತ್ರವಲ್ಲದೆ, ಮನೆಯ ಬಳಿಯಿದ್ದ ಸಣ್ಣಪುಟ್ಟ ನದಿಗಳು ಕೂಡ ತುಂಬಿ ಹರಿಯಲಾರಂಭಿಸಿದ್ದು, ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ.

High Alert In Kodagu Caused by Massive Rainfall And Landslide In Several Parts Of Region

ಕಾವೇರಿ ನದಿ ಭೋರ್ಗರೆತಕ್ಕೆ ಭಾಗಮಂಡಲ ಸಂಪೂರ್ಣ ಜಲಾವೃತಗೊಂಡು ಸಂಪರ್ಕ ಕಳೆದುಕೊಂಡಿದ್ದರೆ, ಕಾವೇರಿ ಹರಿದು ಹೋಗುವ ನಾಪೋಕ್ಲು ಬಳಿಯ ಕೊಟ್ಟಮುಡಿ ಮಡಿಕೇರಿ ರಸ್ತೆಯಲ್ಲಿ ನೀರು ಉಕ್ಕಿ ಹರಿಯುತ್ತಿರುವ ಕಾರಣ ಸಂಚಾರ ಬಂದ್ ಆಗಿದೆ. ಭಾಗಮಂಡಲ ವ್ಯಾಪ್ತಿಯ ಬೇಂಗೂರು ಚೇರಂಬಾಣೆ ದೋಣಿಕಡುವು ಗ್ರಾಮ ವ್ಯಾಪ್ತಿಯಲ್ಲಿ ಕಾವೇರಿ ನದಿ ನೀರಿನ ಪ್ರವಾಹಕ್ಕೆ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು, ಜನರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಅಗ್ನಿಶಾಮಕ ದಳವು ಫೈಬರ್ ದೋಣಿಯ ವ್ಯವಸ್ಥೆಯನ್ನು ಮಾಡಿದೆ.

ಜನಕ್ಕೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಇನ್ನು ಸಮೀಪದ ನಾಪೋಕ್ಲು -ಮೂರ್ನಾಡು ಮುಖ್ಯರಸ್ತೆ, ಚೆರಿಯ ಪರಂಬು ಕಲ್ಲುಮೊಟ್ಟೆ ರಸ್ತೆಯಲ್ಲೂ ಪ್ರವಾಹವೇರ್ಪಟ್ಟಿದ್ದು, ಗದ್ದೆ, ತೋಟ ಮಾತ್ರವಲ್ಲದೆ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಚೆರಿಯಪರಂಬು ಗ್ರಾಮದ ನದಿ ದಂಡೆಯಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇನ್ನೊಂದೆಡೆ ಭಾರೀ ಮಳೆಯಿಂದಾಗಿ ನಾಪೋಕ್ಲುವಿನಲ್ಲಿ ತಡೆಗೋಡೆ ಕುಸಿದು ಅಜ್ಜೇಟಿರ ಬೋಪಣ್ಣ ಎಂಬುವರಿಗೆ ಸೇರಿದ ಅಂಗಡಿ ಮಳಿಗೆಗಳ ಮೇಲೆ ಬಿದ್ದ ಪರಿಣಾಮ ಭಾರೀ ಹಾನಿಯಾಗಿದೆ. ಇದರಿಂದ ಅಂದಾಜು 10 ಲಕ್ಷ ರೂ.ನಷ್ಟು ನಷ್ಟ ಸಂಭವಿಸಿದೆ. ಒಟ್ಟಾರೆ ಭಾಗಮಂಡಲ ಬಳಿಕ ನಾಪೋಕ್ಲುಗೆ ಕಾವೇರಿ ನದಿ ದಿಗ್ಭಂಧನ ವಿಧಿಸಿದೆ.

High Alert In Kodagu Caused by Massive Rainfall And Landslide In Several Parts Of Region

ಕುಸಿಯುತ್ತಿರುವ ಮನೆ.. ಜನರಲ್ಲಿ ಆತಂಕ

ಇನ್ನು ಗುಡ್ಡಕುಸಿತ, ಮರಗಳು ನೆಲಕ್ಕುರುಳುತ್ತಿರುವುದರಿಂದ ಮಡಿಕೇರಿ ಮಂಗಳೂರು ರಸ್ತೆ ಯಾವಾಗ ಬೇಕಾದರೂ ಸಂಪರ್ಕ ಕಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ರಾತ್ರಿ ಮಡಿಕೇರಿ-ಮಂಗಳೂರು ಹೆದ್ದಾರಿ ಮಧ್ಯೆ ಸಮೀಪದ ಕರತೋಜಿ ಬಳಿ ಹೆಚ್ಚಿನ ಮಳೆಯಿಂದಾಗಿ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ತಕ್ಷಣ ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್‌ ಕಿರಣ್ ಗೌರಯ್ಯ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರು, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿ ಸುಗಮ ಸಾರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಬೇತ್ರಿ ಸೇತುವೆ ಮುಳುಗಡೆಯಾಗುವ ಭಯ

ಇದೆಲ್ಲದರ ನಡುವೆ ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮಡಿಕೇರಿ ಮತ್ತು ವಿರಾಜಪೇಟೆಗೆ ಸಂಪರ್ಕ ಕಲ್ಪಿಸುವ ಬೇತ್ರಿ ಬಳಿ ಸೇತುವೆ ಮೇಲೆ ನೀರು ಹರಿಯಲು ಎರಡು ಅಡಿಯಷ್ಟೇ ಬಾಕಿಯಿದೆ. ಮಳೆ ಇದೇ ರೀತಿ ಮುಂದುವರೆದರೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಈಗಾಗಲೇ ಕಾವೇರಿ ನದಿ ಪಾತ್ರದ ಪ್ರದೇಶಗಳು ಜಲಾವೃತಗೊಳ್ಳುತ್ತಿದ್ದು, ಜನರನ್ನು ಭಯ ಆವರಿಸಿದೆ.

High Alert In Kodagu Caused by Massive Rainfall And Landslide In Several Parts Of Region

ಒಂದು ಕಾಲದಲ್ಲಿ ಸುರಕ್ಷಿತ ಸ್ಥಳ ಎಂದು ಕರೆಯಿಸಿಕೊಳ್ಳುತ್ತಿರುವ ಕುಶಾಲನಗರದಲ್ಲಿಯೂ ಆತಂಕ ಸೃಷ್ಟಿಯಾಗಿದೆ. ಹಾರಂಗಿ ಜಲಾಶಯದಿಂದ ಹೊರ ಹರಿಯುವ ನೀರಿನ ಪ್ರಮಾಣ ಹೆಚ್ಚಾದಂತೆ ಕೆಲವು ಬಡಾವಣೆಗಳು ಜಲಾವೃತಗೊಳ್ಳುವ ಭಯ ಹೆಚ್ಚಾಗಿದೆ. ಈಗಾಗಲೇ ಸಾಯಿ ಬಡಾವಣೆಗೆ ನೀರು ನುಗ್ಗಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಉಸ್ತುವಾರಿ ಸಚಿವರಿಂದ ಸೂಕ್ತ ಪರಿಹಾರದ ಭರವಸೆ

ಜಿಲ್ಲೆಗೆ ಆಗಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಅವರು ಕುಶಾಲನಗರ ಸೇರಿದಂತೆ ಹಾರಂಗಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಬುಧವಾರ ಸಂಜೆ 4ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ, ಜಿ.ಪಂ. ಸಿಇಓ, ಉಸ್ತುವಾರಿ ಸಚಿವರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಮಳೆ, ಪ್ರವಾಹ ಹಾನಿ ಮಾಹಿತಿ ಪಡೆಯಲಿದ್ದಾರೆ. ಈ ವೇಳೆ ಕೊಡಗಿನಲ್ಲಿ ಮಳೆಹಾನಿ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮಳೆಗಾಲದಲ್ಲಿ ಉಂಟಾಗುವ ವಿಕೋಪಕ್ಕೆ ಶಾಶ್ವತ ಪರಿಹಾರದ ಬಗ್ಗೆಯೂ ತಜ್ಞರ ಸಮಿತಿ ಸೂಕ್ತ ಪರಿಹಾರೋಪಾಯದ ವರದಿ ನೀಡಲಿದೆ. ಈ ವರದಿಯಾನುಸಾರ ಸರ್ಕಾರ ಶೀಘ್ರ ಕ್ರಮಕೈಗೊಳ್ಳಲಿದೆ. ಈಗಾಗಲೇ ಜನರ ತೊಂದರೆಗಳ ಬಗ್ಗೆ ಮನವಿ ಸ್ವೀಕರಿಸಿದ್ದು, ಕುಶಾಲನಗರದ ಮಳೆಹಾನಿ ಪೀಡಿತ ಬಡಾವಣೆಗಳ ನಾಗರಿಕರು, ಜಿಲ್ಲೆಯ ಕಾಫಿ ಬೆಳೆಗಾರರೂ ಕೂಡ ಮಳೆಯಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೆಲ್ಲದರ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+