ಕೊಡಗಿನಲ್ಲಿ ಮಳೆಯ ಅಬ್ಬರ, ಪ್ರವಾಹ: ಕಾಳಜಿ ಕೇಂದ್ರ ಆರಂಭ
ಮಡಿಕೇರಿ, ಜುಲೈ 21: ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಮಳೆಯ ತೀವ್ರತೆಗೆ ನದಿಗಳು ತುಂಬಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವವರಿಗೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ಪ್ರವಾಹದಲ್ಲಿ ಸಿಲುಕಿರುವ ಜನರಿಗಾಗಿ ಕಾಳಜಿ ಕೇಂದ್ರವನ್ನು ಆರಂಭಿಸಲಾಗಿದೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಭೋಸರಾಜು ಸಿದ್ದಾಪುರದಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಊಟ, ಆರೋಗ್ಯ ಸೇವೆ ಇತರ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆಯೇ? ಎಂದು ಮಾಹಿತಿ ಪಡೆದರು. ಪ್ರವಾಹ ಪೀಡಿತ ಪ್ರದೇಶದಿಂದ ಸ್ಥಳಾಂತರವಾಗುತ್ತೀರಾ? ಎಂದು ಜನರನ್ನು ಕೇಳಿದರು.

ಸಂತ್ರಸ್ತರು ಸಚಿವರ ಜೊತೆ ಮಾತನಾಡಿ, ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಜೀವನ ನಡೆಸುವುದು ದುಸ್ತರವಾಗಿದೆ. ಬದುಕು ಕಟ್ಟಿಕೊಳ್ಳಲು ತುಂಬಾ ತೊಂದರೆಯಾಗಿದೆ. ಆದ್ದರಿಂದ ನಿವೇಶನ ಒದಗಿಸಿ ಸ್ಥಳಾಂತರಿಸುವಂತೆ ಮನವಿ ಮಾಡಿದರು.
ಆರೋಗ್ಯ ಸೇವೆ, ಇತರೆ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸುವಂತೆ ತಹಶೀಲ್ದಾರ್‌ಗೆ ಸೂಚನೆ ಕೊಟ್ಟರು. ಕರಡಿಗೋಡು ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಅಲ್ಲಿನ ಸಂತ್ರಸ್ತರ ಅಹವಾಲನ್ನು ಸಚಿವರು ಆಲಿಸಿದರು.
ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ: ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎನ್. ಎಸ್. ಭೋಸರಾಜು, "ಸಂತ್ರಸ್ತರಿಗೆ ನಿವೇಶನ ಒದಗಿಸುವ ಸಂಬಂಧ ಆದಷ್ಟು ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು" ಎಂದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಮಾತನಾಡಿ, "ಸಂತ್ರಸ್ತರಿಗೆ ವಸತಿ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲಾಗುವುದು" ಎಂದು ಭರವಸೆ ನೀಡಿದರು.
ಸಚಿವರು, ಶಾಸಕರು ಗೋಣಿಕೊಪ್ಪಲು ಕೀರೆಹೊಳೆ, ಬಾಳೆಲೆ, ಹುದಿಕೇರಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾವೇರಿ ನದಿ ಪಾತ್ರದ ಪ್ರವಾಹ ಪೀಡಿತ ಪ್ರದೇಶ ಕರಡಿಗೋಡು ಗ್ರಾಮಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಎಸ್. ಭೋಸರಾಜು ಭೇಟಿ ನೀಡಿ ಸಂತ್ರಸ್ತರ ಅಹವಾಲು ಕೇಳಿದರು.
ಪ್ರತಿ ಬಾರಿ ಪ್ರವಾಹದ ಭೀತಿಯನ್ನು ಎದುರಿಸುತ್ತಿದ್ದು, ಬದುಕು ದುಸ್ತರವಾಗಿದೆ. ಆದ್ದರಿಂದ ನಮ್ಮನ್ನು ಸ್ಥಳಾಂತರ ಮಾಡಿ, ವಸತಿ ಕಲ್ಪಿಸುವಂತೆ ಜನರು ಮನವಿ ಮಾಡಿದರು. ಕರಡಿಗೋಡು ನದಿ ದಡದಲ್ಲಿ ಸುಮಾರು 70ಕ್ಕೂ ಹೆಚ್ಚು ಕುಟುಂಬಗಳು ಇದ್ದು, ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಸಚಿವರು ಸದ್ಯದಲ್ಲೇ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು. ಮಾಲ್ದಾರೆ ವ್ಯಾಪ್ತಿಯಲ್ಲಿ ಸಂತ್ರಸ್ತರಿಗಾಗಿ 10 ಎಕರೆ ಜಾಗ ಗುರುತು ಮಾಡಲಾಗಿದ್ದು, ಈ ಸಂಬಂಧ ಆದಷ್ಟು ಶೀಘ್ರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಮಡಿಕೇರಿಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಅಪಾಯ ಸ್ಥಳಗಳಲ್ಲಿ ವಾಸಿಸುತ್ತಿರುವವರಿಗೆ ಈಗಾಗಲೇ ನಗರಸಭೆಯಿಂದ ಖುದ್ದಾಗಿ ನೋಟಿಸ್ ಜಾರಿ ಮಾಡಿರುವುದಲ್ಲದೇ, ನಗರಸಭೆಯ ಸಿಬ್ಬಂದಿಗಳು ಮುಖಾಮುಖಿ ಮಾತನಾಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಇನ್ನೂ ಹೆಚ್ಚಿಗೆ ಇರುತ್ತದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ತಿಳಿದು ಬಂದಿದ್ದು, ಅಪಾಯ ಸ್ಥಳಗಳಲ್ಲಿ ಅಥವಾ ಸುರಕ್ಷಿತವಲ್ಲದ ಪ್ರದೇಶಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ಮರಗಳ ಹತ್ತಿರ ವಾಸವಿರುವವರು ಮುಂದಿನ ಅನಾಹುತ ತಪ್ಪಿಸಲು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಜನರಿಗೆ ಮನವಿ ಮಾಡಲಾಗಿದೆ.
ಈ ಸೂಚನೆ ಮೀರಿ ಅಲ್ಲೇ ವಾಸವಿದ್ದು, ಯಾವುದೇ ರೀತಿಯಲ್ಲಿ ಅನಾಹುತ ಅವಘಡ ಸಂಭವಿಸಿದಲ್ಲಿ, ಮುಂದಿನ ಆಗುಹೋಗುಗಳಿಗೆ ನಗರಸಭೆ ಜವಾಬ್ದಾರರಲ್ಲ ಎಂದು ತಿಳಿಸಿದೆ. ಜನರು ನಗರಸಭೆ ಸಹಾಯವಾಣಿ ದೂರವಾಣಿ ಸಂಖ್ಯೆ 08272-220111 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.












Click it and Unblock the Notifications