ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಯ ಅಜ್ಞಾತ ಜಲಧಾರೆ ಹಾಲೇರಿ ಫಾಲ್ಸ್

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ, ಆಗಸ್ಟ್ 08 : ನಿಸರ್ಗ ಸೌಂದರ್ಯದ ನೆಲೆವೀಡಾದ ಕೊಡಗಿನಲ್ಲಿ ಮಳೆಗಾಲ ಬಂದಾಗ ಸುರಿಯುವ ಮಳೆಗೆ ಬೆಟ್ಟಗುಡ್ಡಗಳ ಮೇಲೆ, ಕಾಫಿ ತೋಟಗಳ ನಡುವೆ ಹುಟ್ಟಿ ಹರಿಯುವ ಹೊಳೆ, ತೊರೆಗಳು ಧುಮ್ಮಿಕ್ಕಿ ಹರಿಯುವಾಗ ಸುಂದರ, ರಮಣೀಯ ಜಲಧಾರೆಗಳನ್ನು ಸೃಷ್ಠಿ ಮಾಡಿಬಿಡುತ್ತವೆ.

ಹೀಗೆ ಸೃಷ್ಠಿಯಾಗುವ ಜಲಧಾರೆಗಳು ಯಾರದ್ದೋ ಕಾಫಿ ತೋಟದಲ್ಲಿ, ಕಾಡಿನಲ್ಲಿರುವುದರಿಂದ ಯಾರ ಗಮನಕ್ಕೂ ಬಾರದೆ ತನ್ನ ಪಾಡಿಗೆ ತಾನು ಎಂಬಂತೆ ಧುಮುಕುತ್ತಿರುತ್ತವೆ. ಮಳೆಗಾಲದ ಮಳೆಗೆ ಮೈಯೊಡ್ಡಿ, ರಕ್ತಹೀರುವ ಜಿಗಣೆಗೆ ಹೆದರದೆ, ಬೆಟ್ಟಗುಡ್ಡವನ್ನೇರಿ, ಕಲ್ಲು, ಮುಳ್ಳಿನ ರಸ್ತೆಯಲ್ಲಿ ಸಾಗುತ್ತೇನೆ ಎಂಬ ಛಲವಿದ್ದರೆ ಈ ಅಜ್ಞಾತ ಜಲಧಾರೆಗಳನ್ನು ಹತ್ತಿರದಿಂದ ನೋಡಿ ಸಂತಸಪಡಬಹುದು.[ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್ ನತ್ತ ಪ್ರವಾಸಿಗರ ದೌಡು]

Haleri falls

ಹಾಗೆ ನೋಡಿದರೆ ಕೊಡಗಿನಲ್ಲಿ ಅಸಂಖ್ಯಾತ ಜಲಧಾರೆಗಳಿವೆ. ಆದರೆ, ಅವುಗಳ ಪೈಕಿ ಕೆಲವೇ ಕೆಲವು ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳಿರುವುದರಿಂದ ಅಲ್ಲಿಗೆ ಪ್ರವಾಸಿಗರು ತೆರಳುವ ಮೂಲಕ ಹೆಸರುವಾಸಿಯಾಗಿವೆ. ಇನ್ನುಳಿದಂತೆ ಹೆಚ್ಚಿನ ಜಲಧಾರೆಗಳು ಯಾರ ಗಮನಕ್ಕೂ ಬಾರದೆ ಪ್ರವಾಸಿಗರಿಂದ ದೂರ ಉಳಿದಿವೆ.[ಪೊಸಡಿಗುಂಪೆ ಬೆಟ್ಟಕ್ಕೆ ಬಂದು ಸೂರ್ಯಾಸ್ತ ನೋಡಿ]

ಇಂತಹ ಜಲಧಾರೆಗಳ ನಡುವೆ ಮಡಿಕೇರಿಗೆ ಸುಮಾರು 10ಕಿ.ಮೀ ದೂರದಲ್ಲಿರುವ ಹಾಲೇರಿ ಫಾಲ್ಸ್ ಒಂದಾಗಿದೆ. ಇದನ್ನು ನೋಡಬೇಕಾದರೆ ಮಡಿಕೇರಿ-ಮೈಸೂರು ಹೆದ್ದಾರಿಯಲ್ಲಿ ಸುಮಾರು 9 ಕಿ.ಮೀ. ಸಾಗಿದರೆ ಕೆದಕಲ್ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಹಾಲೇರಿಗೆ ತೆರಳುವ ರಸ್ತೆಯಲ್ಲಿ 1 ಕಿ.ಮೀ.ನಷ್ಟು ಹೋಗಿ ಅಲ್ಲಿಂದ ಮೋದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯತ್ತ ತಿರುಗಿದರೆ ಜಲಧಾರೆ ಎದುರಾಗುತ್ತದೆ.[ಅರಶಿನಗುಂಡಿ ಜಲಪಾತಕ್ಕೆ ಚಾರಣ ಹೋಗೋಣ ಬನ್ನಿ]

falls

ಸುಮಾರು ಐವತ್ತು ಅಡಿ ಎತ್ತರದಿಂದ ಕಲ್ಲುಬಂಡೆಗಳ ಮೇಲಿನಿಂದ ಧುಮುಕುವ ಈ ಜಲಪಾತ ಪುಟ್ಟದಾದರೂ ಅದ್ಭುತವಾಗಿದೆ. ಕಾಫಿ ತೋಟದ ನಡುವೆ ಹೆಬ್ಬಂಡೆ ಮೇಲಿನಿಂದ ಎರಡು ಹಂತದಲ್ಲಿ ಧುಮುಕುವ ಜಲಧಾರೆ. ಮೊದಲಿಗೆ 50 ಅಡಿ ಎತ್ತರದಿಂದ ರಭಸದಿಂದ ಧುಮುಕುತ್ತದೆಯಾದರೂ ಬಳಿಕ 10 ಅಡಿ ಎತ್ತರದಿಂದ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುತ್ತದೆ.

ಸಾಮಾನ್ಯವಾಗಿ ಸಮೀಪದ ತೋಟಕ್ಕೆ ಕೆಲಸಕ್ಕೆ ಬರುವ ಕಾರ್ಮಿಕರು ಹೊರತುಪಡಿಸಿದರೆ ಹೆಚ್ಚಿನವರು ಯಾರೂ ಇದರತ್ತ ಸುಳಿಯುವುದಿಲ್ಲ. ಹೀಗಾಗಿ ಈ ಜಲಪಾತ ಮಳೆಗಾಲದಲ್ಲಿ ತನ್ನ ಚೆಲುವನ್ನು ಪ್ರದರ್ಶಿಸಿ ಬೇಸಿಗೆ ಬರುತ್ತಿದ್ದಂತೆ ಹೆಬ್ಬಂಡೆಯಲ್ಲೇ ಲೀನವಾಗಿ ಬಿಡುತ್ತದೆ.

ಕಾನನದ ಬೆಡಗಿಯಂತೆ ಕಂಗೊಳಿಸುವ ಹಾಲೇರಿ ಫಾಲ್ಸ್‍ನ್ನು ವೀಕ್ಷಿಸಬೇಕಾದರೆ ಮಳೆಗಾಲದ ದಿನಗಳು ಉತ್ತಮ. ಮಳೆ ಕಡಿಮೆಯಾದಾಗ ಇದರ ಚೆಲುವು ಕೂಡ ಇಳಿದು ಬಿಡುತ್ತದೆ. ಸಂಬಂಧಿಸಿದ ಗ್ರಾಮ ಪಂಚಾಯಿತಿ ಇದರತ್ತ ಗಮನಹರಿಸಿ ಅಭಿವೃದ್ಧಿ ಪಡಿಸಿದರೆ, ಈ ಜಲಧಾರೆ ಪ್ರವಾಸಿಗರ ಸೆಳೆಯುವುದರಲ್ಲಿ ಸಂಶಯವಿಲ್ಲ.

English summary
Monsoon is the right time to discover waterfalls in the Kodagu district. Haleri falls is also one of the unexplored beauty spot of Madiketi. Haleri falls around 10 km from Madikeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X