ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಅಸೆಂಬ್ಲಿಗೆ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ ಕೊಡಗಿನ ಡಾ.ಚರಿಷ್ಮಾ, ಮಾಹಿತಿ ಇಲ್ಲಿದೆ
ಮಡಿಕೇರಿ, ಏಪ್ರಿಲ್, 10: ಭಾರತೀಯರು ಹೊರ ದೇಶಗಳಲ್ಲಿ ನೆಲೆನಿಂತು ತಮ್ಮದೇ ಆದ ಸಾಧನೆ ಮಾಡಿ ಹುಟ್ಟೂರಿಗೆ ಕೀರ್ತಿ ತರುವುದು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಹೀಗೆ ರಾಜಕೀಯವಾಗಿಯೂ ಹಲವರು ಗುರುತಿಸಿಕೊಂಡಿದ್ದಾರೆ. ಇಂತಹವರ ಪೈಕಿ ನಮ್ಮ ದೇಶದ ಅದರಲ್ಲೂ ಕರ್ನಾಟಕದ ಕೊಡಗಿನ ಮೂಲದ ಮಹಿಳೆ ಡಾ.ಚರಿಷ್ಮಾ ಮಾದಪ್ಪ ಎನ್ನುವವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿಗೆ ಆಯ್ಕೆಯಾಗಿರುವುದು ನಾವೆಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ.
ಸ್ಥಳೀಯವಾಗಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವುದೇ ಕಷ್ಟವಾಗಿರುವ ಕಾಲದಲ್ಲಿ ರಾಜಕೀಯದ ಗಂಧಗಾಳಿಯಿಲ್ಲದ ಕುಟುಂಬದಿಂದ ಹೋದ ಭಾರತದ ಮಹಿಳೆ ದೂರದ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ಅಂದುಕೊಂಡಷ್ಟು ಸುಲಭವಲ್ಲ. ಹೀಗೆ ಡಾ. ಚರಿಷ್ಮಾ ಮಾದಪ್ಪ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಹಾಗಾದರೆ ಯಾರು ಡಾ.ಚರಿಷ್ಮಾ ಮಾದಪ್ಪ ಎಂಬ ಕುತೂಹಲ ಎಲ್ಲರನ್ನು ಕಾಡದಿರದು. ಆಸ್ಟ್ರೇಲಿಯಾದಲ್ಲಿ ರಾಜಕೀಯದ ಛಾಪು ಮೂಡಿಸಿರುವ ಡಾ.ಚರಿಷ್ಮಾ ಅವರ ಬಗ್ಗೆ ಹುಡುಕುತ್ತಾ ಹೋದರೆ ಅವರ ಮೂಲವಾದ ಕೊಡಗಿನ ಕಡೆಗೆ ನಮ್ಮನ್ನು ಕರೆದೊಯ್ಯತ್ತದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಕೊಳಕೇರಿಯು ಚರಿಷ್ಮಾ ಮಾದಪ್ಪ ಅವರ ಹುಟ್ಟೂರಾಗಿದೆ. ಅಲ್ಲಿ ನಿವಾಸಿ ಕಲಿಯಂಡ ಮಾದಪ್ಪ ಮತ್ತು ಭಾನುಮತಿ ದಂಪತಿಯ ಪುತ್ರಿಯೇ ಡಾ.ಚರಿಷ್ಮಾ ಮಾದಪ್ಪ ಆಗಿದ್ದಾರೆ.
ಚಿಕ್ಕವರಿದ್ದಾಗಲೇ ಆಸ್ಟ್ರೇಲಿಯಾಗೆ ಪಯಣ
ಮಾದಪ್ಪ ಅವರು ಪತ್ನಿ ಸಹಿತ ಹಲವು ವರ್ಷಗಳ ಹಿಂದೆಯೇ ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಿದವರು ಅಲ್ಲಿಯೇ ನೆಲೆಸಿದ್ದರು. ಬೆಂಗಳೂರಿನಲ್ಲಿಯೇ ಈ ದಂಪತಿಗೆ ಚರಿಷ್ಮಾ (2-12-1987) ಮತ್ತು ತರುಣ್ ಜನಿಸಿದ್ದರು. ಮಕ್ಕಳು ಚಿಕ್ಕವರಿದ್ದಾಗಲೇ ಮಾದಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ವತಿಯಿಂದ ಆಸ್ಟ್ರೇಲಿಯಾಗೆ ಹೋಗುವ ಅವಕಾಶ ದೊರೆತಿತ್ತು. ಹೀಗಾಗಿ ಅವರು ಬೆಂಗಳೂರು ಬಿಟ್ಟು ಆಸ್ಟ್ರೇಲಿಯಾಗೆ ಹೋಗಬೇಕಾಯಿತು. ಅಲ್ಲದೆ ಅಲ್ಲಿನ ಸಿಡ್ನಿಯಲ್ಲೇ ನೆಲೆಯೂರಿ ಜೀವನ ಕಟ್ಟಿಕೊಳ್ಳಬೇಕಾಯಿತು.

ಸದ್ಯ ಅವರು ಅಲ್ಲಿನ ಲಿವರ್ ಫೂಲ್ ಬಡಾವಣೆಯಲ್ಲಿ ನೆಲೆಯೂರಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಆಸ್ಟ್ರೇಲಿಯಾಕ್ಕೆ ತೆರಳಿದ್ದರಿಂದ ಅಲ್ಲಿದ್ದುಕೊಂಡೇ ಅಲ್ಲಿನ ಬದುಕಿಗೆ ಹೊಂದಿಕೊಂಡು ಚರೀಷ್ಮಾ ಜೀವನ ಸಾಗಿಸುತ್ತಿದ್ದಾರೆ. ದೂರದ ಊರಿನಲ್ಲಿದ್ದಾಗ ನಮ್ಮ ದೇಶದ ಅದರಲ್ಲೂ ನಮ್ಮ ರಾಜ್ಯದ ಜನ ಸಿಕ್ಕರೆ ಮತ್ತಷ್ಟು ಸಂತೋಷವಾಗುತ್ತದೆ.
ಹೀಗಿರುವಾಗ ಚರಿಷ್ಮಾ ಅವರ ತಾಯಿ ಭಾನುಮತಿ ಅವರು ಅಲ್ಲಿನ ಕನ್ನಡ ಸಮುದಾಯದ ಸಂಪರ್ಕ ಬೆಳೆಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗತೊಡಗಿದ್ದರು. ಇದರಿಂದ ಸಂಪರ್ಕವೂ ಹೆಚ್ಚಾಗಿತ್ತಲ್ಲದೆ, ಕನ್ನಡಿಗರು ಒಂದೆಡೆ ಸೇರಲು ಉತ್ತಮ ಅವಕಾಶವಾಗಿತ್ತು. ತಮ್ಮ ಉದ್ಯೋಗದ ಜೊತೆಗೆ ಭಾರತೀಯ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡರು.
ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣ
ಇತ್ತ ಭಾನುಮತಿ ಅವರ ಪುತ್ರಿ ಚರಿಷ್ಮಾ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿ ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ 'ಆಕುಪೇಶನಲ್ ಥೆರಪಿ' ವಿಷಯದಲ್ಲಿ ಉನ್ನತ ಪದವಿಯನ್ನು ಪಡೆದರು. ನಂತರ ಯುವಕರ ಮಾನಸಿಕ ಆರೋಗ್ಯ ವಿಭಾಗದಲ್ಲಿ ಕೆಲಸ ಮಾಡಿದರು. ಆದರೆ ಶಾಲಾ, ಕಾಲೇಜಿಗೆ ಹೋಗುವಾಗಲೇ ಚರಿಷ್ಮಾ ಅವರು ನಾಯಕತ್ವದ ಗುಣಗಳನ್ನು ಹೊಂದಿದ್ದರು. ಇದು ಅವರಿಗೆ ರಾಜಕೀಯದಲ್ಲಿ ಬೆಳೆಯಲು ಸಹಕಾರಿಯಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಡಾ. ಚರಿಷ್ಮಾ ಎರಡು ಬಾರಿ ಲಿವರ್ ಪೂಲ್ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದಾರೆ. ಲೇಬರ್ ಪಕ್ಷದಲ್ಲಿ ಗುರುತಿಸಿಕೊಂಡು ಕೆಲಸ ಮಾಡಿದ ಅವರು ಇತ್ತೀಚೆಗೆ ನ್ಯೂ ಸೌತ್ ವೇಲ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಜನರ ಮೆಚ್ಚುಗೆಗೆ ಪಾತ್ರರಾದ ಇವರನ್ನು ಅಲ್ಲಿನ ಮತದಾರರು ಅಧಿಕ ಸಂಖ್ಯೆಯಲ್ಲಿ ಮತನೀಡಿ ಗೆಲುವು ಸಾಧಿಸುವಂತೆ ಮಾಡಿದ್ದಾರೆ.
ಮಾರಿಕ್ಲೇರ್ ಪತ್ರಿಕೆಯಿಂದ ಶ್ಲಾಘನೆ
ಇನ್ನು ಡಾ.ಚರಿಷ್ಮಾ ಅವರ ಸಾಧನೆಯನ್ನು ಗುರುತಿಸಿರುವ ಆಸ್ಟ್ರೇಲಿಯಾದ ವಾರಪತ್ರಿಕೆ ಮಾರಿಕ್ಲೇರ್ ದೇಶದ ಬೆಳೆಯುತ್ತಿರುವ ಕಿರಿಯ ಯುವ ನೇತಾರರು ಎಂದು ಶ್ಲಾಘಿಸಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲದೆ, 2021ರಲ್ಲಿ ಬಿಡುಗಡೆಯಾದ 40 ವರ್ಷ ವಯಸ್ಸಿನೊಳಗಿನ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಇವರ ಹೆಸರು ಇರುವುದು ಖುಷಿಪಡುವ ವಿಚಾರವಾಗಿದೆ.
ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೂ ಆಗೊಮ್ಮೆ ಈಗೊಮ್ಮೆ ಈ ಕುಟುಂಬ ತಮ್ಮ ಹುಟ್ಟೂರು ಕೊಡಗಿನ ಕೊಳಕೇರಿ ಗ್ರಾಮಕ್ಕೆ ಬರುತ್ತಿರುತ್ತದೆ. ಕೆಲವು ಸಮಯಗಳ ಹಿಂದೆ ಊರಿಗೆ ಬಂದಾಗ ಡಾ.ಚರಿಷ್ಮಾ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಲಾಗಿತ್ತು. ಇದೀಗ ಅವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿಯಲ್ಲಿ ಛಾಪು ಮೂಡಿಸಿರುವುದು ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಇಡೀ ದೇಶವೇ ಹೆಮ್ಮೆಪಡುವ ವಿಚಾರವಾಗಿದೆ.












Click it and Unblock the Notifications