ಮಳೆಗಾಲದಲ್ಲಿ ಕೊಡಗಿನಲ್ಲಿ ನಡೆಯುವ ಬೇಲ್ ನಮ್ಮೆ: ಏನಿದರ ವಿಶೇಷ..?
ಮಡಿಕೇರಿ, ಜುಲೈ 19: ಕೊಡಗಿನ ಜನರಿಗೂ ಭತ್ತದ ಕೃಷಿಗೂ ಅವಿನಾಭಾವ ಸಂಬಂಧವಿದೆ. ಇವತ್ತು ಭತ್ತದ ಕೃಷಿ ಬಗ್ಗೆ ಆಸಕ್ತಿ ಇಲ್ಲಿನವರಿಗೆ ಕಡಿಮೆಯಾಗಿ ಹೆಚ್ಚಿನ ಗದ್ದೆಗಳು ತೋಟ, ಜನವಸತಿ ಪ್ರದೇಶವಾಗಿ ಮಾರ್ಪಟ್ಟಿದ್ದರೂ ಭತ್ತದ ಕೃಷಿಯೊಂದಿಗಿನ ಸಂಬಂಧ ದೂರವಾಗಿಲ್ಲ. ಇವತ್ತು ಕೊಡಗಿನಲ್ಲಿ ಏನೇ ಹಬ್ಬ, ಹರಿದಿನಗಳು ನಡೆದರೂ ಅದಕ್ಕೆ ಭತ್ತದ ಕೃಷಿಯ ಸಂಬಂಧವಂತು ಇದ್ದೇ ಇರುತ್ತದೆ. ಇವತ್ತಿಗೂ ಭತ್ತವನ್ನು ಧಾನ್ಯ ಲಕ್ಷ್ಮಿಯಾಗಿ ಪೂಜಿಸಲ್ಪಡುತ್ತಿದೆ. ಹುಟ್ಟು ಸಾವಿನ ನಡುವಿನ ಸೇತುವಾಗಿ ನಿಂತಿದೆ.
ಕೊಡಗಿನಲ್ಲಿ ಭತ್ತದ ಕೃಷಿಯನ್ನು ಕೇವಲ ಕೃಷಿಯನ್ನಾಗಿ ನೋಡದೆ ಅದನ್ನು ಸಂಭ್ರಮಿಸುವುದು ವಿಶೇಷ. ಎಲ್ಲ ಕುಟುಂಬಗಳ ಸದಸ್ಯರು ಮುಯ್ಯಿ ಆಳುಗಳಾಗಿ ಸೇರಿಕೊಂಡು ಭತ್ತದ ನಾಟಿಯನ್ನು ಮುಗಿಸುವುದೇ ಸಡಗರ ಸಂಭ್ರಮವಾಗಿತ್ತು. ಈಗ ನಿಧಾನವಾಗಿ ಭತ್ತದ ಕೃಷಿ ಕಡಿಮೆಯಾಗುತ್ತಿದೆ. ಆದರೆ ಈ ಭತ್ತದ ಕೃಷಿಯನ್ನು ಸಂಭ್ರಮಿಸುವ ಸಲುವಾಗಿಯೇ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಪಾಂಡಂಡ ಕುಟ್ಟಣಿ ಕುಟ್ಟಪ್ಪ ಇವರ ಜ್ಞಾಪಕಾರ್ತವಾಗಿ ಅವರ ಮಗ ಪಾಂಡಂಡ ಬೋಪಣ್ಣನವರ ಸಹಕಾರದೊಂದಿಗೆ ಬೇಲ್ ನಮ್ಮೆ (ಗದ್ದೆ ಹಬ್ಬ) ನಡೆಸಲು ಮುಂದಾಗಿದೆ.

ಈ ಬಾರಿ ಬೇಲ್ ನಮ್ಮೆ ಕೊಡಗಿನ ಕರಡ ಗ್ರಾಮದಲ್ಲಿ ಆಗಸ್ಟ್ 14 ರಂದು ನಡೆಯಲಿದೆ. ಬೇಲ್ ನಮ್ಮೆಯಲ್ಲಿ ವಿಚಾರಮಂಡನೆ, ಕೃಷಿಕ ಪ್ರಶಸ್ತಿ ಹಾಗೂ ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಆ ಮೂಲಕ ಕೊಡಗಿನ ಮುಂಗಾರು ಮಳೆಯಲ್ಲಿ ಕೆಸರು ಗದ್ದೆಯಲ್ಲಿ ವಿಚಾರಗಳನ್ನು ಮಂಡಿಸಿ ಕ್ರೀಡಾ ಕೂಟಗಳನ್ನು ನಡೆಸಿ ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುವ ಮೂಲಕ ಸಂತಸದ ಕ್ಷಣಗಳನ್ನು ಕಳೆಯಲು ವೇದಿಕೆ ದೊರೆತಂತಾಗಲಿದೆ.
ಕ್ರೀಡಾ ಸ್ಫೂರ್ತಿ ನೀಡುವ ಕೊಡಗಿನ ಗದ್ದೆಗಳು
ಹಾಗೆನೋಡಿದರೆ ಸುರಿಯುವ ಮಳೆಯಲ್ಲಿಯೇ ಕೃಷಿ ಚಟುವಟಿಕೆ ಮಾಡುತ್ತಾ ಜಡಗೊಂಡ ದೇಹಕ್ಕೆ ಉಲ್ಲಾಸ ನೀಡಲೆಂದೇ ಮನಸ್ಸಿನ ಕ್ರೀಡಾ ಸ್ಪೂರ್ತಿಗೆ ಧಕ್ಕೆ ಬಾರದಿರಲೆಂದು ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸಿ ಖುಷಿ ಪಡುವುದು ಕೊಡಗಿನವರ ಜಾಯಮಾನ. ಜಿಲ್ಲೆಯಾದ್ಯಂತ ಕೆಸರು ಗದ್ದೆಗಳನ್ನೇ ಆಟದ ಮೈದಾನವನ್ನಾಗಿ ಮಾಡಿಕೊಂಡು ಅಲ್ಲಿ ಓಟ, ಹಗ್ಗಜಗ್ಗಾಟ, ವಾಲಿಬಾಲ್, ಫುಟ್ಭಾಲ್ ನಂತಹ ಕ್ರೀಡೆಗಳನ್ನು ನಡೆಸಿ ಖುಷಿ ಪಡುವುದು ಹಿಂದಿನಿಂದಲೂ ನಡೆಯುತ್ತಾ ಬಂದಿದೆ.
ಕೊಡಗಿನಲ್ಲಿ ಏನೇ ಮಾಡಿದರೂ ಅದನ್ನು ಸಡಗರ ಸಂಭ್ರಮದಿಂದಲೇ ಮಾಡುವುದು ಸಂಪ್ರದಾಯ. ಮೊದಲೆಲ್ಲ ಭತ್ತದ ಕೃಷಿ ಚಟುವಟಿಕೆ ಅದರಲ್ಲೂ ನಾಟಿ ಕೆಲಸ ವೆಂದರೆ ಮಕ್ಕಳಿಂದ ವೃದ್ದರವರೆಗೆ ಎಲ್ಲಿಲ್ಲದ ಖುಷಿ. ಎಲ್ಲರೂ ಒಟ್ಟಾಗಿ ಗದ್ದೆಗಿಳಿದು ಲೋಕರೂಢಿ ಮಾತನಾಡುತ್ತಾ ಕೆಲಸ ಮಾಡುತ್ತಿದ್ದರು. ದೂರದ ಮನೆಗಳು, ತಮ್ಮದೇ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಜನರಿಗೆ ಗದ್ದೆಯಲ್ಲಿ ಒಟ್ಟಾಗಿ ಕಲೆತು ನಾಟಿ ಮಾಡುವಾಗ ಸಿಗುತ್ತಿದ್ದ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.

ಭಾವನಾತ್ಮಕ ಸಂಬಂಧ ಬೆಸೆಯುವ ಬೇಲ್ ನಮ್ಮೆ
ನಾಟಿಕೆಲಸದ ಸಮಯಕ್ಕೆ ಸರಿಯಾಗಿ ಮನೆಯಿಂದ ಹೊರ ಹೋಗಿ ಕೆಲಸ ಮಾಡುತ್ತಿದ್ದವರು ಒಂದಷ್ಟು ದಿನಗಳ ಕಾಲ ರಜೆ ಪಡೆದು ಬರುತ್ತಿದ್ದರು. ಅದರಲ್ಲೂ ಪೊಲೀಸ್, ಸೇನೆಯಲ್ಲಿ ಕೆಲಸ ಮಾಡುತ್ತಿದ್ದವರು ಈ ಸಮಯದಲ್ಲಿಯೇ ರಜೆ ಪಡೆದು ಬರುತ್ತಿದ್ದದ್ದು ವಿಶೇಷವಾಗಿತ್ತು. ಒಂದಷ್ಟು ದಶಕಗಳ ಕಾಲ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಭತ್ತದ ಕೃಷಿಯೇ ಹಲವು ಕಾರಣಗಳಿಗೆ ಭಾರವಾಗ ತೊಡಗಿತು.
ಓದಿದವರು ಕೆಲಸ ಹುಡುಕಿಕೊಂಡು ಪರ ಊರುಗಳಿಗೆ ಹೋದವರು ಅಲ್ಲಿಯೇ ನೆಲೆಸಿದರು. ಜತೆಗೆ ಭತ್ತದ ಕೃಷಿ ಮಾಡಿಸುವುದು ದುಬಾರಿಯಾಯಿತು. ಗದ್ದೆ ಹೊಂದಿದ್ದ ಮಾಲೀಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಜತೆಗೆ ಅನಾವೃಷ್ಠಿ, ಅತಿವೃಷ್ಠಿಗೆ ಸಿಲುಕಿ ಗದ್ದೆ ಕೃಷಿ ಮಾಡುವುದೇ ಕಷ್ಟವಾಗಿ ಪರಿಣಮಿಸಲಾರಂಭಿಸಿತು. ಪರಿಣಾಮ ಭತ್ತದ ಕೃಷಿ ಬದಲಿಗೆ ಇತರೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದರು.
ಎಲ್ಲೋ ಒಂದು ಕಡೆ ತಲೆಮಾರುಗಳಿಂದ ಮುಂದುವರೆದುಕೊಂಡು ಬಂದಿದ್ದ ಗದ್ದೆಯೆಡೆಗಿನ ಭಾವನಾತ್ಮಕ ಸಂಬಂಧಗಳು ಸಡಿಲವಾಗಲು ಆರಂಭಿಸಿತು. ಇದು ಹೀಗೆಯೇ ಮುಂದುವರೆದರೆ ಯುವ ತಲೆಮಾರು ಕೊಡಗಿನ ಪೂಜನೀಯವಾದ ಧಾನ್ಯ ಲಕ್ಷ್ಮಿಯಾದ ಭತ್ತದ ಮಹತ್ವ, ಕೃಷಿ ಚಟುವಟಿಕೆ, ಆಚಾರ ವಿಚಾರ ಎಲ್ಲವನ್ನು ಮರೆತು ಬಿಡುತ್ತಾರೆ ಎಂಬ ಭಯವೂ ಆರಂಭವಾಯಿತು. ಹೀಗಾಗಿ ಗದ್ದೆಯ ಮಹತ್ವ ಮತ್ತು ಅದರ ಸುತ್ತ ಇರುವ ಭಾವನಾತ್ಮಕ ಸಂಬಂಧ, ಸಂಪ್ರದಾಯ ಎಲ್ಲವನ್ನು ಜೀವಂತವಾಗಿರಿಸುವ ಹಾಗೂ ಯುವ ತಲೆಮಾರಿಗೂ ಪರಿಚಯಿಸುವ ಸಲುವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಬೇಲ್ ನಮ್ಮೆಯನ್ನು ಹುಟ್ಟು ಹಾಕಿದೆ.
ಬೇಲ್ ನಮ್ಮೆ ಹೇಗೆ ನಡೆಯುತ್ತದೆ ಗೊತ್ತಾ?
ಈ ಬೇಲ್ ನಮ್ಮೆ ಹೇಗಿರುತ್ತೆ ಎಂದರೆ, ಜಿಲ್ಲೆಯ ಯಾವುದಾರೊಂದು ಕಡೆ ಯಾವುದಾದರೂ ಒಂದು ಕುಟುಂಬದ ವ್ಯಕ್ತಿಯ ಗದ್ದೆಯನ್ನು ಆಯ್ಕೆ ಮಾಡಿಕೊಂಡು ಹಿರಿಯರು ಕಿರಿಯರು, ಮಹಿಳೆಯರು, ಪುರುಷರು ಎನ್ನದೇ ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ನೆರೆಯುತ್ತಾರೆ. ಹಿಂದಿನ ಕಾಲದ ಸಂಪ್ರದಾಯದಂತೆ ಪೈರು ಕೀಳುವ ಮುನ್ನ ಭೂಮಿ ತಾಯಿಯನ್ನು ಪ್ರಾರ್ಥಿಸಿ ಪೂಜೆ ಮಾಡಿ ನಂತರ ಪೈರು ಕೀಳುವ ಕಾರ್ಯವನ್ನು ಮಹಿಳೆಯರು ಮಾಡುತ್ತಾರೆ. ಈ ಕಾರ್ಯದಲ್ಲಿ ವಿವಿಧ ಅತ್ಯುನ್ನತ ಹುದ್ದೆಯಲ್ಲಿದ್ದವರು ಬಂದು ಥೇಟ್ ಕೊಡಗಿನ ಕೃಷಿಕ ಮಹಿಳೆಯರಾಗಿ ಗದ್ದೆಗಿಳಿದು ಪೈರು ಕೀಳುವುದು, ಜತೆಗೆ ಇಂದಿನ ಯುವತಿಯರಿಗೂ ಪೈರು ಕೀಳುವುದು ಮತ್ತು ಅದನ್ನು ಕಂತೆ ಕಟ್ಟುವುದು ಹೇಗೆಂದು ಹೇಳಿಕೊಡುತ್ತಾರೆ.
ಇನ್ನೊಂದೆಡೆ ಪುರುಷರು ಎತ್ತಿನಿಂದ ಹಿಂದಿನ ಕಾಲದ ಮರದ ನೇಗಿಲನ್ನು ಬಳಸಿ ಉಳುಮೆ ಮಾಡಿ ಬಳಿಕ ನೆರೆದವರೆಲ್ಲ ಗದ್ದೆಗಿಳಿದು ನಾಟಿ ಮಾಡುತ್ತಾರೆ. ಆ ನಂತರ ಸಹ ಬೋಜನ.. ಆ ನಂತರ ಕೆಸರು ಗದ್ದೆಯನ್ನೇ ಕ್ರೀಡಾಂಗಣವಾಗಿಸಿ ಮಹಿಳೆಯರಿಗೆ, ಪುರುಷರಿಗೆ, ಬಾಲಕರು ಹೀಗೆ ಎಲ್ಲರೂ ಹಗ್ಗಜಗ್ಗಾಟ, ಓಟ, ಶಕ್ತಿಕೋಲ್, ರನ್ನಿಂಗ್ ರೇಸ್, ರಿಲೇ ಹೀಗೆ ವಿವಿಧ ಆಟಗಳನ್ನಾಡುತ್ತಿದ್ದರು.
ಬಳಿಕ ನೆರೆದವರೆಲ್ಲರೂ ತಮ್ಮ ಜಂಜಾಟ ಮರೆತು ಕೆಸರಿನ ಗದ್ದೆಯಲ್ಲಿಯೇ ಕೊಡವ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕುವುದು ಎಲ್ಲವೂ ಸುರಿಯುವ ಮಳೆಯಲ್ಲಿಯೇ ನಡೆಯುತ್ತದೆ. ಇದರ ಜತೆಗೆ ಸಭಾ ಕಾರ್ಯಕ್ರಮ ವಿಚಾರಮಂಡನೆ ಹೀಗೆ ಕೆಲವೊಂದು ಕಾರ್ಯಕ್ರಮಗಳು ಸೇರ್ಪಡೆಯಾಗುತ್ತವೆ. ಒಟ್ಟಾರೆ ಬೇಲ್ ನಮ್ಮೆ ಸಂತೋಷದಿಂದಲೇ ಕಳೆದು ಹೋಗುತ್ತದೆ.












Click it and Unblock the Notifications