ಕೊಡಗಿನಲ್ಲಿ ಬಾಗಿಲು ಮುಚ್ಚಲಿವೆ 64 ಸರ್ಕಾರಿ ಶಾಲೆಗಳು
ಮಡಿಕೇರಿ, ಏಪ್ರಿಲ್ 02: ಕರ್ನಾಟಕ ಸರ್ಕಾರ ಕಡಿಮೆ ವಿದ್ಯಾರ್ಥಿಗಳ ಸಂಖ್ಯೆ ಇರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಸಮೀಪದ ಶಾಲೆಗಳ ಜೊತೆ ವಿಲೀನ ಮಾಡುತ್ತಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾದರೆ ಕೊಡಗು ಜಿಲ್ಲೆಯಲ್ಲಿ 64 ಶಾಲೆಗಳಿಗೆ ಬೀಗ ಬೀಳಲಿದೆ.
ರಾಜ್ಯದಲ್ಲಿ ಈಗಾಗಲೇ ವಿಶ್ವವಿದ್ಯಾಲಯಗಳ ವಿಲೀನಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈ ಕುರಿತು ಸಂಪುಟ ಉಪ ಸಮಿತಿ ವರದಿ ಕೈ ಸೇರಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಸರ್ಕಾರಿ ಶಾಲೆಗಳನ್ನು ಪಕ್ಕದ ಶಾಲೆಗಳ ಜೊತೆ ವಿಲೀನ ಮಾಡಬೇಕು ಎಂದು ಚರ್ಚೆಗಳು ನಡೆದಿತ್ತು. ಶಾಲಾ ಸುಧಾರಣಾ ಆಯೋಗ ಸರ್ಕಾರ ಶಿಫಾರಸ್ಸು ಮಾಡಿತ್ತು.
ಶಾಲೆಗಳ ವಿಲೀನ: ಆದರೆ ಆ ಸಂದರ್ಭದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿತ್ತು. ಆದ್ದರಿಂದ ಈ ಪ್ರಸ್ತಾವನೆಗೆ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ ಈಗ ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ಈ ಕುರಿತ ಪ್ರಕ್ರಿಯೆ ಕೈಗೊಳ್ಳಲು ಮುಂದಾಗಿದೆ.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಪ್ರಾಥಮಿಕ ಶಾಲೆಗಳನ್ನು ಮೊದಲ ಹಂತದಲ್ಲಿ ವಿಲೀನಗೊಳಿಸಲು ಸರ್ಕಾರ ತಯಾರಿ ನಡೆಸಿದೆ. ಮೂಲ ಸೌಕರ್ಯಗಳ ಕೊರತೆ ಇರುವ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿನ 6, ಸೋಮವಾರಪೇಟೆ ತಾಲೂಕಿನ 12, ವಿರಾಜಪೇಟೆ ತಾಲೂಕಿನ 3 ಸರ್ಕಾರಿ ಶಾಲೆಗಳಿಗೆ 2019 ರಿಂದ 2024ರ ಅವಧಿಯಲ್ಲಿ ಬೀಗ ಜಡಿಯಲಾಗಿದೆ. ಈಗ ಮುಚ್ಚಿರುವ ಶಾಲೆಗಳಿಗೆ ಮಕ್ಕಳು ದಾಖಲಾದರೆ ಅದನ್ನು ಪುನಃ ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಯಲ್ಲಿ 10ಕ್ಕಿಂತ ಕಡಿಮೆ ಹಾಜರಾತಿ ಇರುವ 48 ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ 16 ಹಿರಿಯ ಪ್ರಾಥಮಿಕ ಮತ್ತು 1 ಪ್ರೌಢ ಶಾಲೆ ಇದೆ. ಈಗ ಶಾಲೆಗಳನ್ನು ವಿಲೀನಗೊಳಿಸಲು ಮುಂದಾದರೆ 64 ಸರ್ಕಾರಿ ಶಾಲೆಗಳಿಗೆ ಬೀಗ ಬೀಳಲಿದೆ.
ಸರ್ಕಾರ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಇಲ್ಲ ಎಂದು ಅದನ್ನು ಸಮೀಪದ ಶಾಲೆಗಳ ಜೊತೆ ವಿಲೀನ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗ ಸರ್ಕಾರಿ ಶಾಲೆಗಳನ್ನು ಏಕೆ ಮುಚ್ಚಲು ಹೊರಟಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆದರೆ ಸರ್ಕಾರ ಶಾಲೆಗಳನ್ನು ವಿಲೀನಗೊಳಿಸುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2023ರಲ್ಲಿ ಸರ್ಕಾರದ ಲೆಕ್ಕಾಚಾರದಂತೆ ರಾಜ್ಯದಲ್ಲಿ 6,796 ಸರ್ಕಾರಿ ಶಾಲೆಗಳ ವಿಲೀನವಾಗಲಿದೆ ಎಂದು ಅಂದಾಜಿಸಲಾಗಿತ್ತು. ಒಟ್ಟು 6,796 ಶಾಲೆ, ಕಾಲೇಜುಗಳು ವಿಲೀನಗೊಳ್ಳಲಿವೆ. 3,339 ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳನ್ನು ಸಮೀಪದ 1,135 ಶಾಲೆ/ ಕಾಲೇಜುಗಳಲ್ಲಿ ವಿಲೀನಗೊಳಿಸಬೇಕು ಎಂದು ಸರ್ಕಾರ ಅಂದಾಜಿಸಿತ್ತು.












Click it and Unblock the Notifications