ಕೊಡಗಿನಲ್ಲಿ ರಾಜಕೀಯ ಆಟ.. ಗಿರಿಜನರಿಗೆ ಪ್ರಾಣಸಂಕಟ..

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ: ಕೊಡಗಿನ ಸಿದ್ದಾಪುರ ಬಳಿಯ ಮಾಲ್ದಾರೆಯ ದಿಡ್ಡಳ್ಳಿ ದೇವಮಾಚಿ ಮೀಸಲು ಅರಣ್ಯದಲ್ಲಿ ನೆಲೆಯೂರಿ ಬದುಕು ಕಟ್ಟಿಕೊಳ್ಳಬೇಕೆಂದು ಗುಡಿಸಲು ಹಾಕಿಕೊಂಡಿದ್ದ ಗಿರಿಜನರು ಅರಣ್ಯ ಇಲಾಖೆ ನಡೆಸಿದ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡು ಮಳೆ, ಚಳಿ, ಬಿಸಿಲಿಗೆ ಮೈಯೊಡ್ಡಿ ದಿನ ಕಳೆಯುವ ಸ್ಥಿತಿಗೆ ಬಂದು ನಿಲ್ಲುವಂತಾಗಿದೆ.

ಒಂದೆಡೆ ಗಿರಿಜನರು ಸೂರು ಕಳೆದುಕೊಂಡು ಕಂಗಾಲಾಗಿದ್ದರೆ, ಮತ್ತೊಂದೆಡೆ ಇವರನ್ನು ಮುಂದೆಯಿಟ್ಟುಕೊಂಡು ರಾಜಕೀಯ ಲಾಭ ಪಡೆಯುವ ಹುನ್ನಾರಗಳು ಕೂಡ ನಡೆಯುತ್ತಿವೆ. ಬೇರೆಡೆ ನೆಲೆಗೊಂಡಿದ್ದ ಗಿರಿಜನರನ್ನು ದಿಡ್ಡಳ್ಳಿ ದೇವಮಾಚಿ ಮೀಸಲು ಅರಣ್ಯಕ್ಕೆ ಕರೆತಂದು ನೆಲೆಕಲ್ಪಿಸುವ ಭರವಸೆ ನೀಡಿದವರು ಇದೀಗ ಮೌನಕ್ಕೆ ಜಾರಿದ್ದಾರೆ. ಅವರನ್ನು ನಂಬಿ ಬಂದ ಗಿರಿಜನರು ಮಾತ್ರ ಸೂರು ಕಳೆದುಕೊಂಡು ಹೋರಾಟದ ಹಾದಿ ಹಿಡಿದಿದ್ದಾರೆ.[ಭಾರತದ 2ನೇ ಮರುಭೂಮಿಯಾಗಲಿರುವ ಕರ್ನಾಟಕ!]

ತಾತ, ಮುತ್ತಾಂದಿರ ಕಾಲದಿಂದಲೂ ಕಾಡಿನೊಂದಿಗೆ ನಂಟು ಹೊಂದಿರುವ ಗಿರಿಜನರನ್ನು ಕಾಡಿನಿಂದ ಒಕ್ಕಲೆಬ್ಬಿಸಿ ನಾಡಿನಲ್ಲಿ ಪುನರ್ವಸತಿ ಕಲ್ಪಿಸುವ ಪ್ರಯತ್ನ ಹಲವು ದಶಕಗಳಿಂದ ನಡೆಯುತ್ತಾ ಬಂದಿದ್ದರೂ ಅವರು ಮಾತ್ರ ಕಾಡು ಬಿಟ್ಟು ನಾಡಿಗೆ ಹೋಗಲು ಒಪ್ಪುತ್ತಿಲ್ಲ ಹೀಗಾಗಿ ಅರಣ್ಯ ಇಲಾಖೆ ಮತ್ತು ಗಿರಿಜನರ ನಡುವೆ ಸಂಘರ್ಷ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ.[5,000 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಸೂಚನೆ]

1,500 tribals thrown out of their homes in Devamachi forest Kodagu

ಯಾವ ಆಸ್ತಿ, ಮನೆಯೂ ಇಲ್ಲ: ಅರಣ್ಯದ ನಡುವೆ ಹಾಡಿಗಳಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿರುವ ಬಹಳಷ್ಟು ಗಿರಿಜನರಿಗೆ ಆಧಾರ್ ಕಾರ್ಡ್ ಆಗಲೀ, ಗುರುತಿನ ಚೀಟಿಯಾಗಲೀ ಇಲ್ಲ. ಕಾರಣ ಅವರ ಹೆಸರಿನಲ್ಲಿ ಯಾವ ಆಸ್ತಿ, ಮನೆಯೂ ಇಲ್ಲ. ಆದ್ದರಿಂದ ಜನಪ್ರತಿನಿಧಿಗಳಿಗೆ ಅವರಿಂದ ಯಾವುದೇ ಪ್ರಯೋಜನವಿಲ್ಲ. ಇನ್ನು ಅವರು ಆದಿಮಾನವರಂತೆ ಜೀವನ ಸಾಗಿಸುತ್ತಿದ್ದರೂ ಅವರಿಗೆ ಸೌಲಭ್ಯ ಕಲ್ಪಿಸೊಣ ಎಂದರೆ ಅರಣ್ಯ ಇಲಾಖೆಯ ತಕರಾರು. ಹೀಗೆ ಹಲವು ಕಾರಣಗಳಿಂದ ಗಿರಿಜನರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇಂತಹ ಮುಗ್ದ ಗಿರಿಜನರ ಬಾಳಲ್ಲಿ ಆಟವಾಡಲು ಹೊರಟಿರುವುದು ನಿಜಕ್ಕೂ ಬೇಸರದ ಸಂಗತಿಯೇ. ಗುಡಿಸಲು ಕಟ್ಟಿಕೊಳ್ಳುವಾಗ ಮೌನವಾಗಿದ್ದ ಅರಣ್ಯ ಇಲಾಖೆ ಅವರು ಬದುಕು ಕಟ್ಟಿಕೊಂಡ ಬಳಿಕ ಏಕಾಏಕಿ ಜೆಸಿಬಿ ತಂದು ಪೊಲೀಸ್ ಬೆಂಗಾವಲಿನಲ್ಲಿ ಗುಡಿಸಲುಗಳನ್ನು ತೆರವುಗೊಳಿಸಿ ಮಾನವೀಯತೆ ಇಲ್ಲದಂತೆ ವರ್ತಿಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.[37 ಸಾವಿರ ಮರ ಕಾಪಾಡೋರು ಯಾರು?]

ಇದೀಗ ಪ್ಲಾಸ್ಟಿಕ್ ಡೇರೆ ಹಾಕಿಕೊಂಡು ಹೋರಾಟ ಆರಂಭಿಸಿರುವ ಗಿರಿಜನರಿಗೆ ಸದ್ಯ ಸೂರು ಕಲ್ಪಿಸುವ ವ್ಯವವಸ್ಥೆಯನ್ನು ಸರ್ಕಾರ ಮಾಡಬೇಕಿದೆ. ಬಡವರ ಏಳ್ಗೆಗಾಗಿ ನಾವಿರುವುದು ಎನ್ನುವಂತೆ ಫೋಸ್ ಕೊಡುತ್ತಿದ್ದ ಸರ್ಕಾರದ ಪ್ರಮುಖರು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಜಾಣ ಮೌನ ವಹಿಸಿದ್ದಾರೆ.

Devamachi forest Kodagu

ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ: ಇನ್ನು ರಾಜ್ಯದ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಲಿಖಿತವಾಗಿ ಗಿರಿಜನರ ಪರವಾಗಿ ಮನವಿಯೊಂದನ್ನು ಸಲ್ಲಿಸಿ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಈ ನಡುವೆ ಕೊಡಗಿಗೆ ಭೇಟಿ ನೀಡಿದ್ದ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಅದು ಸಮಸ್ಯೆಯೇ ಅಲ್ಲವೆಂಬಂತೆ ಮಾತನಾಡಿ ಅರಣ್ಯ ಸಮಿತಿಯ ಸಭೆಯೊಂದನ್ನು ಕರೆದು ಗಿರಿಜನರ ಮನೆ ತೆರವುಗೊಳಿಸಿದ ಸ್ಥಳದಲ್ಲಿಯೇ ಬಡಾವಣೆಗಳನ್ನು ನಿರ್ಮಿಸಿ ಪುನರ್ವಸತಿ ಕಲ್ಪಿಸಲಾಗುವುದು. ಅರಣ್ಯ ಸಮಿತಿ ಮೂಲಕ ಜಿಲ್ಲೆಯ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಶಿಫಾರಸು ಮಾಡಿ ಮಂಜೂರು ಪಡೆಯಬಹುದಾಗಿದೆ ಎಂಬಂತೆ ತಿಪ್ಪೆ ಸಾರಿಸುವ ಮಾತನಾಡಿದ್ದಾರೆಯೇ ವಿನಃ ಸಮಸ್ಯೆ ಬಗೆಹರಿಸುವ ಕ್ರಮದ ಬಗ್ಗೆ ಏನನ್ನೂ ಹೇಳದೆ ಕಾಲ್ಕಿತ್ತಿದ್ದಾರೆ.[ಕೊಡಗು: ಅಕ್ರಮ ಹೋಂಸ್ಟೇ ತಡೆಗೆ ಕಠಿಣ ಕ್ರಮ]

ಸಚಿವರು ತೆರಳಿದ ಬಳಿಕ ಜಿಲ್ಲಾಧಿಕಾರಿ ಆರ್.ವಿ. ಡಿಸೋಜಾ ಅವರು, ಗಿರಿಜನರನ್ನು ತೆರವುಗೊಳಿಸಿದ ಜಾಗ ಮೀಸಲು ಪ್ರದೇಶವಾಗಿದೆ. ಅಲ್ಲಿ ಪುರ್ನವಸತಿ ಅಸಾಧ್ಯವಾಗಿದೆ. ಹೀಗಾಗಿ ಜಿಲ್ಲೆಯ ಇತರ ಕಡೆ ಜಾಗ ಗುರುತಿಸಿ ಗಿರಿಜನರನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಸದ್ಯಕ್ಕೆ ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಗಿರಿಜನರಿಗೆ ಸದ್ಯ ಸೂರು ಸಿಗುವ ಲಕ್ಷಣಗಳು ಮಾತ್ರ ಕಂಡು ಬರುತ್ತಿಲ್ಲ.

ಆದರೆ ಗಿರಿಜನರ ಹೋರಾಟಕ್ಕೆ ರಾಜ್ಯಮಟ್ಟದಲ್ಲಿ ಬೆಂಬಲಗಳು ಸಿಗುತ್ತಿದ್ದು ಗಿರಿಜನರೊಂದಿಗೆ ನಾವಿದ್ದೇವೆ ಎಂದು ಪ್ರಮುಖರು ಮುಂದೆ ಬರುತ್ತಿದ್ದಾರೆ. ಇದು ಹೀಗೆಯೇ ಮುಂದುವರೆಯುತ್ತಾ ಅಥವಾ ಗಿರಿಜನರಿಗೆ ಅಗತ್ಯ ಸೂರು ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 1,500 tribes lost the right to stay in their own district, a violation of their fundamental rights provided in the Constitution. Tibals include Eravas, Jenu Kuruabas and Paniyas had a rude jolt on December 07 when 577 huts were razed and families thrown to streets.
Please Wait while comments are loading...