ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಮೃತ್ರಿ: ಕೇಶವ್ ಮೌರ್ಯ ವಾಗ್ದಾಳಿ
ಲಕ್ನೋ ಡಿಸೆಂಬರ್ 17: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಮಾಜವಾದಿ ಪಕ್ಷ ಮತ್ತು ಪ್ರಗತಿಪರ ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಏರ್ಪಟ್ಟಿದೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ಭೇಟಿಯಾದ ನಂತರ ಈ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಅವರು ಮಾತನಾಡಿ, ಇಂತಹ ಯಾವುದೇ ಮೈತ್ರಿ ಬಿಜೆಪಿಯ ಮೇಲೆ ಯಾವುದೇ ಪರಿಣಾಮವನ್ನುಂಟುಮಾಡುವುದಿಲ್ಲ ಎಂದು ಹೇಳಿದ್ದಾರೆ. 2022ರ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸುವುದಾಗಿ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.
ಬಿಜೆಪಿಯವರು ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯ ಸ್ಥಾನ ಗಟ್ಟಿಯಾಗಿದೆ. 2022 ರ ಚುನಾವಣೆಯಲ್ಲಿ ಬಿಜೆಪಿಯ ಮುಂದೆ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಅಥವಾ ಯಾವುದೇ ಮೈತ್ರಿಯನ್ನು ನಾನು ನೋಡುವುದಿಲ್ಲ ಎಂದು ಕೆ.ಪಿ.ಮೌರ್ಯ ಹೇಳಿದ್ದಾರೆ.
2017 ರ ಚುನಾವಣೆಯ ನಂತರ ಯಾದವ್ ಕುಟುಂಬ ಎರಡು ಭಾಗಗಳಾಗಿ ವಿಭಜನೆಗೊಂಡಿತು. 2016 ರಲ್ಲಿ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವೆ ಕೌಟುಂಬಿಕ ಕಲಹ ಎಷ್ಟರ ಮಟ್ಟಿಗೆ ತಲುಪಿತ್ತೆಂದರೆ ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದರು. ಜೊತೆಗೆ ಚಿಕ್ಕಪ್ಪ ಯಾದವ್ ಪಕ್ಷದಿಂದ ಹೊರಹಾಕಿದರು. ಈ ಹೋರಾಟ ಕೆಲ ದಿನಗಳ ಕಾಲ ನಿಂತು ಹೋಗಿತ್ತು. ಜೊತೆಗೆ ಶಿವಪಾಲ್ ಸಿಂಗ್ ಯಾದವ್ ತಮ್ಮದೇ ಪಕ್ಷ ಕಟ್ಟುವ ಮೂಲಕ ಬೇರೆ ದಾರಿ ಹಿಡಿದಿದ್ದರು.

ಯುಪಿ ವಿಧಾನಸಭಾ ಚುನಾವಣೆಗೆ ಮುನ್ನ, ಕೊನೆಗೂ ಚಿಕ್ಕಪ್ಪ ಮತ್ತು ಸೋದರಳಿಯ ಮತ್ತೊಮ್ಮೆ ಒಂದಾಗಿದ್ದಾರೆ. ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ಭೇಟಿಯಾದ ನಂತರ, ಅಖಿಲೇಶ್ ಟ್ವಿಟ್ ಮಾಡಿದ್ದು, 'ಶಿವಪಾಲ್ ಯಾದವ್ ಅವರನ್ನು ಭೇಟಿ ಮಾಡಿ ಮೈತ್ರಿ ವಿಷಯವನ್ನು ನಿರ್ಧರಿಸಲಾಯಿತು. ಪ್ರಾದೇಶಿಕ ಪಕ್ಷಗಳನ್ನು ಜೊತೆಯಲ್ಲಿ ತೆಗೆದುಕೊಳ್ಳುವ ನೀತಿಯನ್ನು ಎಸ್‌ಪಿ ನಿರಂತರವಾಗಿ ಬಲಪಡಿಸುತ್ತಿದೆ. ಇದು ಎಸ್‌ಪಿ ಮತ್ತು ಇತರ ಮಿತ್ರಪಕ್ಷಗಳನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ಯುತ್ತದೆ' ಎಂದಿದ್ದಾರೆ.
ಮುಂದಿನ ವರ್ಷದ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದೆ. 2022ರ ನಂತರದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತಿನಲ್ಲಿ ಚುನಾವಣೆಗಳು ನಡೆಯಲಿವೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸುವ ದಿನ ಸನ್ನಿಹಿತವಾಗಿದೆ. ಇದರ ಮಧ್ಯೆ ಇಂದು ಆಯೋಜಿಸಿರುವ ಉಪಹಾರ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದ 40 ಸಂಸದರನ್ನು ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ಸಂಸತ್ ಚಳಿಗಾಲ ಅಧಿವೇಶನ ಆರಂಭವಾದ ದಿನದಿಂದ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಸಂಸದರ ಜೊತೆಗೆ ಉಪಹಾರ ಸಭೆಗಳನ್ನು ನಡೆಸುತ್ತಿದ್ದಾರೆ. ಇದೇ ವಾರದ ಆರಂಭದಲ್ಲಿ ಮಧ್ಯಪ್ರದೇಶ ಬಿಜೆಪಿ ಸಂಸದರ ಜೊತೆಗೆ ಮೋದಿ ಸಭೆ ನಡೆಸಿದ್ದರು.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಆಡಳಿತ ಪಕ್ಷ ಬಿಜೆಪಿಯು ಯಾತ್ರೆಗಳನ್ನು ನಡೆಸಲು ಮುಂದಾಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು ಆರು ಯಾತ್ರೆಗಳನ್ನು ನಡೆಸಲು ಮುಂದಾಗಿದ್ದು, ಈ ಯಾತ್ರೆಗಳು ರಾಜ್ಯದ 403 ವಿಧಾನಸಭೆ ಕ್ಷೇತ್ರಗಳಿಗೂ ತಲುಪಲಿವೆ. ಈ ಯಾತ್ರೆಗಳು ಬಿಜೆಪಿ ಪರ ಪ್ರಚಾರದ ಭಾಗವಾಗಲಿವೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಭಾರತೀಯ ಜನತಾ ಪಕ್ಷವು ನಿಶಾದ್ ಪಾರ್ಟಿ ಮತ್ತು ಅಪ್ನಾ ದಳದ ಜೊತೆ ಮೈತ್ರಿ ಮಾಡಿಕೊಂಡಿದೆ. ಶುಕ್ರವಾರ ಲಕ್ನೋದಲ್ಲಿ ಬಿಜೆಪಿ ಬೃಹತ್ ಮೆರವಣಿಗೆ ಆಯೋಜಿಸಿದ್ದು, ನಿಶಾದ್ ಪಾರ್ಟಿ ಕೂಡಾ ಇದರ ಭಾಗವಾಗಲಿದೆ. ಇಂದು ನಡೆಯುವ ಮೆರವಣಿಗೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.












Click it and Unblock the Notifications