ಯೋಗಿ ಸಂಪುಟಕ್ಕೆ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ
ಲಕ್ನೋ ಜನವರಿ 11: ಯೋಗಿ ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಯುಪಿ ವಿಧಾನಸಭಾ ಚುನಾವಣೆ 2022ರ ಮೊದಲು ರಾಜೀನಾಮೆ ನೀಡಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು, ನಿರುದ್ಯೋಗಿ ಯುವಕರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಯುಪಿ ಕಾರ್ಮಿಕ, ಉದ್ಯೋಗ ಮತ್ತು ಸಮನ್ವಯ ಖಾತೆ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಕಾರ್ಮಿಕರು ಮತ್ತು ಸಣ್ಣ ಪ್ರಮಾಣದ ವ್ಯಾಪಾರಿಗಳು ಬಿಜೆಪಿ ಕಡೆಗಣಿಸುತ್ತಿದೆ ಎಂದು ಅವರು ದೂರಿದ್ದಾರೆ. ವರದಿಗಳ ಪ್ರಕಾರ, ಸ್ವಾಮಿ ಪ್ರಸಾದ್ ಮೌರ್ಯ ಅವರು ಮುಂಬರುವ ಚುನಾವಣೆಯಲ್ಲಿ ಮತ್ತೊಂದು ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ. ಅದಕ್ಕಾಗಿ ಪಕ್ಷವು ಸಿದ್ಧವಾಗಿಲ್ಲ. ಆದ್ದರಿಂದ ಅವರು ಸರ್ಕಾರಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿಯ ಆಪ್ತ ಮೂಲಗಳು ತಿಳಿಸಿವೆ.
ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ನೀಡಿದ ಕೂಡಲೇ, ಸಮಾಜವಾದಿ ಪಕ್ಷದ ನಾಯಕ ಮತ್ತು ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಮಾಜಿ ಯುಪಿ ಸಚಿವರೊಂದಿಗಿನ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
"ಜನಪ್ರಿಯ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಜಿ ಮತ್ತು ಪಕ್ಷದ ಇತರ ನಾಯಕರು, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡಿದ ಕಾರ್ಯಕರ್ತರಿಗೆ ಆತ್ಮೀಯ ಸ್ವಾಗತ ಮತ್ತು ಶುಭಾಶಯಗಳು. 2022ರಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿಯಾಗಲಿದೆ, ಬದಲಾವಣೆಯಾಗಲಿ" ಎಂದು ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 7 ರಿಂದ 7 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಮೈತ್ರಿ ಕುತೂಹಲ:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಫೆಬ್ರವರಿಯಲ್ಲಿ ಚುನಾವಣೆಗಳು ಎದುರಾಗುತ್ತಿದ್ದು, ಯುಪಿಯಲ್ಲಿ ಪ್ರಮುಖ ರಾಜಕೀಯ ಬದಲಾವಣೆಗಳು ನಡೆಯುತ್ತಿವೆ. ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಸಮಾಜವಾದಿ ಪಕ್ಷಕ್ಕೆ ಸಣ್ಣ ಪಕ್ಷಗಳು ಸೇರ್ಪಡೆಯಾಗುತ್ತಿವೆ.
ಸದ್ಯ ಎರಡು ಪಕ್ಷಗಳು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿವೆ. ಈ ಹಿಂದೆ ಎಎಪಿ ಮತ್ತು ಎಸ್ಪಿ ಮೈತ್ರಿ ಮಾಡಿಕೊಳ್ಳುವ ಸುಳಿವು ಸಿಕ್ಕಿತ್ತು. ಆದರೆ ಮೈತ್ರಿಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸ್ವತ: ಈ ಮೈತ್ರಿಗಳು ಬಿಜೆಪಿಗೆ ಮಾತ್ರ ಹಿನ್ನಡೆಯಲ್ಲ ಇದು ಕಾಂಗ್ರೆಸ್ಸಿಗೂ ದೊಡ್ಡ ಸವಾಲಾಗಿದೆ.













Click it and Unblock the Notifications