'ದಿ ಕಾಶ್ಮೀರ್ ಫೈಲ್ಸ್' ರೀತಿಯಲ್ಲೇ ಲಖೀಂಪುರ್ ಫೈಲ್ಸ್ ಚಿತ್ರ ಏಕೆ ಮಾಡಬಾರದು?
ಲಕ್ನೋ, ಮಾರ್ಚ್ 16: ಜಮ್ಮು ಮತ್ತು ಕಾಶ್ಮೀರದ ಕುರಿತಾಗಿ ದಿ ಕಾಶ್ಮೀರಿ ಫೈಲ್ಸ್ ಮಾಡುವುದಾದರೆ, ಲಖೀಂಪುರ್ ಖೇರಿ ಕುರಿತಾಗಿ ನಾವು ಏಕೆ ಲಖೀಂಪುರ್ ಫೈಲ್ಸ್ ಮಾಡಬಾರದು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಶ್ನೆ ಮಾಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ನಂತರ ಮೊದಲ ಬಾರಿಗೆ ಸೀತಾಪುರದಲ್ಲಿ ವರದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. "ಜಮ್ಮು ಕಾಶ್ಮೀರದ ಬಗ್ಗೆ ಕಾಶ್ಮೀರಿ ಫೈಲ್ಸ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಾಗಿದ್ದರೆ ಲಖೀಂಪುರದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಘಟನೆಗೆ ಸಂಬಂಧಿಸಿದಂತೆ ಲಖೀಂಪುರ್ ಫೈಲ್ತ್ ಅನ್ನು ಏಕೆ ಮಾಡಬಾರದು," ಎಂದಿದ್ದಾರೆ.
ಕಳೆದ 2021ರ ಅಕ್ಟೋಬರ್ 3ರಂದು, ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿ ವಾಪಸ್ಸಾಗುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರೊಬ್ಬರ ಪುತ್ರನ ಜೀಪ್ ಹರಿಸಿದ ನಂತರ ಲಖಿಂಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

ಉತ್ತರ ಪ್ರದೇಶದಲ್ಲಿ ಎರಡನೇ ಅತಿದೊಡ್ಡ ಪಕ್ಷವಾದ ಎಸ್ ಪಿ:
2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಕ್ಕಿದೆ. ಯೋಗಿ ಸರ್ಕಾರವು ಎರಡನೇ ಬಾರಿ ಗೆಲುವಿನ ಬಾವುಟ ಹಾರಿಸಿದೆ. ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 255 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಸೆಡ್ಡು ಹೊಡೆದ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವಿನ ಸೈಕಲ್ ಏರಿದೆ. ಅಪ್ನಾ ದಳ 12, ಬಹುಜನ ಸಮಾಜವಾದಿ ಪಕ್ಷ 1, ಜೆಡಿಎಲ್ 2, ನಿರ್ಬಲ್ ಇಂಡಿಯನ್ ಶೋಷಿತ ಹಮಾರಾ ಆಮ್ ದಳ 6, ರಾಷ್ಟ್ರೀಯ ಲೋಕ ದಳ 8, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಮಾತ್ರ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ನೈತಿಕ ಗೆಲುವು:
ಉತ್ತರ ಪ್ರದೇಶ ವಿಧಾನಸಭೆ ಚುನಾವಮೆಯಲ್ಲಿ ಸಮಾಜವಾದಿ ಪಕ್ಷವು ಸರ್ಕಾರ ರಚಿಸುವಲ್ಲಿ ಯಶಸ್ವಿ ಆಗಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್, "ನಮಗೆ ನೈತಿಕ ಗೆಲುವು ಸಿಕ್ಕಿದೆ. ಭವಿಷ್ಯದಲ್ಲಿ ಬಿಜೆಪಿಯ ಸ್ಥಾನಗಳು ಕಡಿಮೆಯಾಗಲಿವೆ. ಬಿಜೆಪಿಯ ದಾರಿಯಲ್ಲಿ ಇನ್ನೂ ಮೂಲಭೂತ ಸಮಸ್ಯೆಗಳಿವೆ,'' ಎಂದರು. ಹೆಚ್ಚಾಗಿ ಯುವಜನರಲ್ಲಿ ನಿರುದ್ಯೋಗ ಮತ್ತು ಹಣದುಬ್ಬರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಈ ಸಮಸ್ಯೆಗಳನ್ನು ಆಡಳಿತ ಪಕ್ಷ ಇನ್ನೂ ಪರಿಹರಿಸಬೇಕಾಗಿದೆ ಎಂದರು.
ದೇಶದಲ್ಲಿ ಸದ್ದು ಮಾಡುತ್ತಿರುವ "ದಿ ಕಾಶ್ಮೀರಿ ಫೈಲ್ಸ್"
ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ಈ ಚಲನಚಿತ್ರದ ಕಳೆದ ಮಾರ್ಚ್ 11ರಂದು ಬಿಡುಗಡೆಯಾಗಿತ್ತು. 1990ರ ದಶಕದ ವೇಳೆಯಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು, ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಯಿತು ಎಂಬುದರ ಬಗ್ಗೆ ಚಿತ್ರಿಸಲಾಗಿದೆ. ಅದಲ್ಲದೇ ರಾತ್ರೋರಾತ್ರಿ ಕಾಶ್ಮೀರಿ ಪಂಡಿತರನ್ನು ಮನೆಯಿಂದ ಓಡಿಸುವುದಕ್ಕೆ ನಡೆಸಿದ ದೌರ್ಜನ್ಯದ ಕುರಿತು ಎತ್ತಿ ತೋರಿಸಲಾಗಿದೆ. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಹಾಗೂ ಪ್ರಕಾಶ್ ಬೆಳವಡಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications