ಜಾಗ ಖಾಲಿ ಮಾಡಿ ಎಂದ ಯೋಗಿ ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು!

ಲಕ್ನೋ, ಜನವರಿ.29: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟದ ವ್ಯಾಪ್ತಿ ಹೆಚ್ಚುತ್ತಿದೆ. ರೈತರ ಪರವಾಗಿ ಉತ್ತರ ಪ್ರದೇಶ ಮತ್ತು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಒಕ್ಕೂಟದ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ರೈತ ಸಂಘಟನೆ ಭಾರತೀಯ ಕಿಸಾನ್ ಒಕ್ಕೂಟವನ್ನು ಬೆಂಬಲಿಸುವ ಸಲುವಾಗಿ ಉತ್ತರ ಪ್ರದೇಶದ ಮುಜಾಫರನಗರದಲ್ಲಿ ಮಹಾಪಂಚಾಯತ್ ಸಭೆ ನಡೆಸಲಾಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ನೆರೆದ ರೈತರು ಸಂಘಟನೆ ಹೋರಾಟಕ್ಕೆ ಕೈ ಜೋಡಿಸಿದರು.

ದೆಹಲಿ ಮತ್ತು ಉತ್ತರಪ್ರದೇಶದ ಗಡಿಯಲ್ಲಿರುವ ಘಾಜಿಪುರ್ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರು ಜಾಗ ಖಾಲಿ ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಆದೇಶಿಸಿತ್ತು. ಸರ್ಕಾರದ ಸೂಚನೆಗೆ ಸೊಪ್ಪ ಹಾಕುವುದಿಲ್ಲ. ಯಾವುದೇ ಕಾರಣಕ್ಕೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ತಿಕೈಟ್ ಸ್ಪಷ್ಟ ಸಂದೇಶ ರವಾನಿಸಿದ್ದರು.

ಉತ್ತರ ಪ್ರದೇಶದಲ್ಲಿ ರೈತರ ಹೋರಾಟಕ್ಕೆ ಬೆಂಬಲ

ಉತ್ತರ ಪ್ರದೇಶದಲ್ಲಿ ರೈತರ ಹೋರಾಟಕ್ಕೆ ಬೆಂಬಲ

ಕೃಷಿ ಕಾಯ್ದೆ ವಿರುದ್ಧ ಘಾಜಿಪುರ್ ಗಡಿಯಲ್ಲಿ ಭಾರತೀಯ ಕಿಸಾನ್ ಒಕ್ಕೂಟವು ಕಳೆದ ಎರಡು ತಿಂಗಳಿನಿಂದಲೂ ರೈತರ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದೆ. ದೆಹಲಿ ಹಿಂಸಾಚಾ ಬೆನ್ನಲ್ಲೇ ರೈತಪರ ಹೋರಾಟ ಮಾಡುತ್ತಿರುವವರನ್ನೂ ಕೂಡಾ ಅಲ್ಲಿಂದ ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಇದನ್ನು ವಿರೋಧಿಸಿ ಉತ್ತರ ಪ್ರದೇಶದಲ್ಲಿ ಹೋರಾಟ ನಡೆಸಲಾಯಿತು. ಸ್ಥಳೀಯ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗೆ ಬೆಂಬಲವನ್ನು ಸೂಚಿಸಿದರು.

ಜಿಐಸಿ ಮೈದಾನದಲ್ಲಿ ರೈತರ ಬೆಂಬಲಕ್ಕೆ ನೆರೆದ ಸಾವಿರಾರು ಮಂದಿ

ಜಿಐಸಿ ಮೈದಾನದಲ್ಲಿ ರೈತರ ಬೆಂಬಲಕ್ಕೆ ನೆರೆದ ಸಾವಿರಾರು ಮಂದಿ

ಮುಜಾಫರನಗರದ ಮಹಾವೀರ್ ಚೌಕ್ ಬಳಿಯಿರುವ ಜಿಐಸಿ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿದ್ದರು. ತ್ರಿವರ್ಣ ಧ್ವಜವನ್ನು ಹಾರಿಸಿಕೊಂಡು ಟ್ರ್ಯಾಕ್ಟರ್ ಗಳಲ್ಲಿ ಸಾಗರೋಪಾದಿಯಲ್ಲಿ ಜನರು ಹರಿದು ಬಂದರು. ಉತ್ತರ ಪ್ರದೇಶದ ರಸ್ತೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಸಾಗಿದ ಟ್ರ್ಯಾಕ್ಟರ್ ಗಳಿಂದ ವಾಹನ ದಟ್ಟನೆ ಹೆಚ್ಚಾಗಿತ್ತು.

ರೈತಪರ ಹೋರಾಟಕ್ಕೆ ಪ್ರಾದೇಶಿಕ ಪಕ್ಷಗಳ ಬೆಂಬಲ

ರೈತಪರ ಹೋರಾಟಕ್ಕೆ ಪ್ರಾದೇಶಿಕ ಪಕ್ಷಗಳ ಬೆಂಬಲ

ಕೃಷಿ ಕಾಯ್ದೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರತೀಯ ಕಿಸಾನ್ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಿವೆ. ಉತ್ತರ ಪ್ರದೇಶದ ರಾಷ್ಟ್ರೀಯ ಲೋಕ್ ದಳ ಮುಖ್ಯಸ್ಥ ಅಜಿತ್ ಸಿಂಗ್ ಮತ್ತು ಅವರ ಪುತ್ರ ಜಯಂತ್ ಚೌಧರಿ ರೈತರ ಹೋರಾಟವನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. "ಇದು ರೈತರ ಸಾವು ಬದುಕಿನ ನಡುವಿನ ಹೋರಾಟವಾಗಿದೆ. ಆದರೆ ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ. ರೈತರ ಹೋರಾಟದಲ್ಲಿ ಒಗ್ಗಟ್ಟಿದೆ. ಒಗ್ಗಟ್ಟಿನಿಂದ ಎಲ್ಲರೂ ಒಂದಾಗಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸೋಣ" ಎಂದು ಅಜಿತ್ ಸಿಂಗ್ ಟ್ವೀಟ್ ಮಾಡಿದ್ದಾರೆ.

"ಪೊಲೀಸರು ಗುಂಡು ಹಾರಿಸಿದರೂ ಹೋರಾಟ ಬಿಡಲ್ಲ"

"ನಾನು ಬೇಕಿದ್ದಲ್ಲಿ ಪೊಲೀಸರ ಗುಂಡನ್ನು ಎದುರಿಸುವುದಕ್ಕೆ ಸಿದ್ಧರಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ತಿಕೈಟ್ ಹೇಳಿದ್ದರು. ರೈತರು ನಡೆಸುತ್ತಿರುವ ಹೋರಾಟಕ್ಕೆ ಅಪಖ್ಯಾತಿ ತರುವ ಕಾರ್ಯವನ್ನು ಕೇಂದ್ರ ಸರ್ಕಾರ ಪದೇ ಪದೆ ಮಾಡುತ್ತಿದೆ. ಎಲ್ಲಾ ಗಡಿ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರದಲ್ಲಿನ ಆತಂಕವು ಸ್ಪಷ್ಟವಾಗುತ್ತದೆ. ರೈತರ ಪ್ರತಿಭಟನೆ ಹಿಂಸಾತ್ಮಕ ರೂಪದಲ್ಲಿದೆ ಎಂದು ತೋರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

ದೆಹಲಿ ಪೊಲೀಸರಿಂದ ರೈತರ ವಿರುದ್ಧ ಎಫ್ಐಆರ್ ದಾಖಲು

ದೆಹಲಿ ಪೊಲೀಸರಿಂದ ರೈತರ ವಿರುದ್ಧ ಎಫ್ಐಆರ್ ದಾಖಲು

ಗಣರಾಜ್ಯೋತ್ಸವದ ದಿನವೇ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 37 ರೈತ ಮುಖಂಡರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ರಾಕೇಶ್ ತಿಕೈಟ್, ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್, ದರ್ಶನ್ ಪಾಲ್, ಗುರ್ನಾಮ್ ಸಿಂಗ್ ಚಾಂದುನಿ, ಕುಲ್ವಂತ್ ಸಿಂಗ್ ಸಂಧು, ಸತ್ನಾಮ್ ಸಿಂಗ್ ಪನ್ನು, ಜೋಗಿಂದರ್ ಸಿಂಗ್ ಉಗ್ರಹಾ, ಸರ್ಜಿತ್ ಸಿಂಗ್ ಫೂಲ್, ಜಗಜೀತ್ ಸಿಂಗ್ ದಾಲೇವಾಲ್, ಬಲ್ಬೀರ್ ಸಿಂಗ್ ರಾಜೇವಾಲ್, ಹರೀಂದರ್ ಸಿಂಗ್ ಲಖೇವಾಲ್ ಎಂಬ ರೈತ ಮುಖಂಡರ ಹೆಸರು ಸೇರಿಸಲಾಗಿದೆ. ಒಟ್ಟು 37 ರೈತ ಮುಖಂಡರ ವಿರುದ್ಧ ಕೊಲೆ ಯತ್ನ, ಗಲಭೆ ಮತ್ತು ಪಿತೂರಿ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಕಳೆದ ನವೆಂಬರ್.26ರಿಂದಲೂ ಕೇಂದ್ರ ಸರ್ಕಾರದ ಹೊಸ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+