ಲಖಿಂಪುರಕ್ಕೆ ರಾಹುಲ್ ಗಾಂಧಿ ಭೇಟಿ; ಅನುಮತಿ ನೀಡದ ಯುಪಿ ಸರ್ಕಾರ!
ಲಕ್ನೋ, ಅಕ್ಟೋಬರ್ 06; ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ 8 ಜನರು ಮೃತಪಟ್ಟಿದ್ದಾರೆ. ಘಟನೆ ಖಂಡಿಸಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಲಖಿಂಪುರ ಖೇರಿಗೆ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಬೇಕಿತ್ತು. ಆದರೆ ಉತ್ತರ ಪ್ರದೇಶ ಸರ್ಕಾರ ರಾಹುಲ್ ಭೇಟಿಗೆ ಅನುಮತಿಯನ್ನು ನೀಡಿಲ್ಲ. ಸೋಮವಾರ ಪ್ರಿಯಾಂಕಾ ಗಾಂಧಿ ವಾದ್ರಾ ಆಗಮಿಸುವಾಗಲೂ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಲಖಿಂಪುರ ಖೇರಿಗೆ ಭೇಟಿ ನೀಡಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಸರ್ಕಾರ ನಿಯೋಗದ ಭೇಟಿಗೆ ಅವಕಶವಿಲ್ಲ ಎಂದು ಹೇಳಿದೆ.
ಅಕ್ಟೋಬರ್ 3ರ ಘಟನೆ ಬಳಿಕ ಲಖಿಂಪುರ ಖೇರಿ ಪ್ರದೇಶದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದ್ದರಿಂದ ಯಾರೂ ಸಹ ಸ್ಥಳಕ್ಕೆ ಭೇಟಿ ನೀಡುವಂತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಘಟನೆಗೆ ಕಾರಣವಾದ ವಾಹನ ತಮಗೆ ಸೇರಿದ್ದು. ಆದರೆ ಕಾರಿನಲ್ಲಿ ತಮ್ಮ ಪುತ್ರ ಆಶಿಶ್ ಮಿಶ್ರಾ ಇರಲಿಲ್ಲ ಎಂದು ಮಂಗಳವಾರ ಹೇಳಿಕೆ ನೀಡಿದ್ದಾರೆ.

ಪ್ರತಿಪಕ್ಷದ ನಾಯಕರ ಭೇಟಿ ಇಲ್ಲ
ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರ ಖಂಡಿಸಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೋಮವಾರ ಲಕ್ನೋದ ತಮ್ಮ ನಿವಾಸದ ಮುಂದೆ ಧರಣಿ ಕುಳಿತಿದ್ದರು. ಧರಣಿ ಸ್ಥಳದಿಂದ ಅಖಿಲೇಶ್ ಯಾದವ್ ಲಖಿಂಪುರ ಖೇರಿಗೆ ಹೊರಟಿದ್ದರು. ಆಗ ಉತ್ತರ ಪ್ರದೇಶ ಪೊಲೀಸರು ಅವರನ್ನು ತಡೆದಿದ್ದು, ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಸೋಮವಾರ ಲಖಿಂಪುರಕ್ಕೆ ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈಗ ರಾಹುಲ್ ಗಾಂಧಿ ನೇತೃತ್ವದ ನಿಯೋಗಕ್ಕೆ ಸಹ ಅನುಮತಿ ನೀಡಿಲ್ಲ. ಉತ್ತರ ಪ್ರದೇಶ ಸರ್ಕಾರದ ಈ ನಡೆಗೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿ
ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹೋರಾಟ ನಡೆಸಲು ತೀರ್ಮಾನಿಸಿವೆ.
"ಎಲ್ಲಾ ವಿರೋಧ ಪಕ್ಷಗಳು ರೈತರ ಜೊತೆ ಇವೆ. ಎಲ್ಲಾ ಪಕ್ಷಗಳು ಸೇರಿ ಮುಂದಿನ ಕಾರ್ಯ ಯೋಜನೆ ತಯಾರು ಮಾಡಲಿವೆ. ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದಲೇ ಘಟನೆ ಕುರಿತು ತನಿಖೆ ನಡೆಯಬೇಕು" ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆಗ್ರಹಿಸಿದ್ದಾರೆ.

ಪ್ರತಿಪಕ್ಷಗಳಿಗೆ ಏಕೆ ತಡೆ?
ಪ್ರತಿಪಕ್ಷಗಳ ನಾಯಕರು ಲಖಿಂಪುರ ಖೇರಿಗೆ ಭೇಟಿ ನೀಡಲು ತಡೆ ಹಾಕಿರುವ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. "ಈ ದಮನ ನೀತಿಯ ವಿರುದ್ಧ ಪ್ರತಿಪಕ್ಷಗಳು ಒಟ್ಟಾಗಿ ಹೋರಾಟ ನಡೆಸಬೇಕು" ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ಕರೆ ನೀಡಿದ್ದಾರೆ.
"ಯೋಗಿ ಆದಿತ್ಯನಾಥ್ ಸರ್ಕಾರ ಲಖಿಂಪುರ ಖೇರಿಯಲ್ಲಿ ಏನು ನಡೆಯಿತು ಎಂಬುದನ್ನು ಮುಚ್ಚಿಹಾಕಲು ಹೊರಟಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು" ಎಂದು ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಆಗ್ರಹಿಸಿದ್ದಾರೆ.

2ನೇ ಬಾರಿ ಮರಣೋತ್ತರ ಪರೀಕ್ಷೆ ಮಾಡಿ
ಭಾನುವಾರ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ರೈತರ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ. ಆದ್ದರಿಂದ ಮಂಗಳವಾರ ಶವಗಳ ಅಂತ್ಯ ಸಂಸ್ಕಾರಕ್ಕೆ ಸಹ ಅವರು ಒಪ್ಪಿಗೆ ಕೊಟ್ಟಿಲ್ಲ.
ಲವ್ ಪ್ರೀತ್ ಸಿಂಗ್ (19), ನಚ್ತರ್ ಸಿಂಗ್ (65), ದಲ್ವೀತ್ ಸಿಂಗ್ (42) ಅಂತ್ಯ ಸಂಸ್ಕಾರ ಮಂಗಳವಾರ ನಡೆದಿದೆ. ಗುರುವಿಂದರ್ ಸಿಂಗ್ (22) ಅಂತ್ಯ ಸಂಸ್ಕಾರಕ್ಕೆ ಕುಟುಂಬ ಒಪ್ಪಿಗೆ ನೀಡಿಲ್ಲ. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.

ಪ್ರಕರಣ ದಾಖಲು ಮಾಡಲಾಗಿದೆ
ಲಖಿಂಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಮತ್ತು ಪಕ್ಷದ ಮುಖಂಡ ದೀಪೆಂದರ್ ಹೂಡಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 144, 151,107,116 ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಇವರಿಂದ ಶಾಂತಿಗೆ ಭಂಗವಾಗುವುದಿಲ್ಲ ಎಂಬುದು ಖಚಿತವಾದರೆ ಈ ಸೆಕ್ಷನ್ ರದ್ದುಗೊಳಿಸಲಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಪ್ಯಾರೇಲಾಲ್ ಮೌರ್ಯ ಹೇಳಿದ್ದಾರೆ.
ಇನ್ನು ಘಟನೆಗೆ ಕಾರಣವಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾರನ್ನು ಇನ್ನೂ ಬಂಧಿಸಿಲ್ಲ. ಅಜಯ್ ಮಿಶ್ರಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಆಶಿಶ್ ಮಿಶ್ರಾ ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.












Click it and Unblock the Notifications