ಮಾಜಿ ಕ್ರಿಕೆಟರ್, ಹಾಲಿ ಸಚಿವ ಚೇತನ್ ಚೌಹಾಣ್ ಇನ್ನಿಲ್ಲ
ಲಕ್ನೋ, ಆ. 16: ಭಾರತದ ಮಾಜಿ ಆಟಗಾರ, ಯೋಗಿ ಆದಿತ್ಯನಾಥ್ ಸಚಿವ ಸಂಪುಟದ ಸಚಿವ ಚೇತನ್ ಚೌಹಾಣ್ ವಿಧಿವಶರಾಗಿದ್ದಾರೆ. ಕೊರೊನಾವೈರಸ್ ಸೋಂಕಿಗೆ ಸಿಲುಕಿದ್ದ ಚೌಹಾಣ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ನಿನ್ನೆ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಉಂಟಾಗಿ, ಬಹು ಅಂಗಾಂಗ ವೈಫಲ್ಯಕ್ಕೊಳಗಾದರು. ಗುರುಗ್ರಾಮದ ವೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ.
ಜುಲೈ ತಿಂಗಳ 12ರಂದು ಚೇತನ್ ಚೌಹಾಣ್‌ಗೆ ಕೋವಿಡ್-19 ಸೋಂಕು ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರಲಿಲ್ಲ. ಹೀಗಾಗಿ, ವೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕೊರೊನಾ ಸೋಂಕಿನಿಂದ ಚೌಹಾಣ್ ಅವರ ಕಿಡ್ನಿ ವೈಫಲ್ಯ ಉಂಟಾಗಿ, ಕೊನೆಗೆ ಬಹುಅಂಗಾಂಗ ವೈಫಲ್ಯಕ್ಕೊಳಗಾದರು ಎಂದು ಅವರ ಸೋದರ ಪುಷ್ಪೇಂದ್ರ ಚೌಹಾಣ್ ಹೇಳಿದ್ದಾರೆ.

73 ವರ್ಷ ವಯಸ್ಸಿನ ಚೌಹಾಣ್ ಅವರು ಕ್ರಿಕೆಟರ್, ಕ್ರಿಕೆಟ್ ಅಧಿಕಾರಿಯಾಗಿ ದೆಹಲಿ ಅಂಡ್ ಡಿಸ್ಟ್ರಿಕ್ಸ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಮುಖ್ಯ ಆಯ್ಕೆದಾರ ಹೀಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಟೀಂ ಇಂಡಿಯಾದ ಮ್ಯಾನೇಜರ್ ಆಗಿದ್ದರು.
ನಂತರ ರಾಜಕೀಯ ಪ್ರವೇಶಿಸಿ ಎರಡು ಬಾರಿ ಅಮ್ರೋಹ್ ನಿಂದ ಆಯ್ಕೆಯಾಗಿ ಲೋಕಸಭಾ ಸದಸ್ಯರಾಗಿದ್ದರು. ಉತ್ತರ ಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದರು.
ಟೀಂ ಇಂಡಿಯಾ ಪರವಾಗಿ 1969ರಿಂದ 1978ರ ವರೆಗೆ ಆಡಿದ್ದ ಚೌಹಾಣ್, 40 ಟೆಸ್ಟ್ ಪಂದ್ಯಗಳಲ್ಲಿ 31.57ರ ಸರಾಸರಿಯಂತೆ 16 ಅರ್ಧ ಶತಕಗಳು ಸೇರಿದಂತೆ 2084 ರನ್ ಗಳಿಸಿದ್ದಾರೆ. 7 ಏಕದಿನ ಪಂದ್ಯಗಳನ್ನೂ ಆಡಿರುವ ಚೌಹಾಣ್ 153 ರನ್ ಗಳಿಸಿದ್ದಾರೆ. ಸುನಿಲ್ ಗವಾಸ್ಕರ್-ಚೇತನ್ ಚೌಹಾಣ್ ಜೋಡಿ 12 ಶತಕ ಜೊತೆಯಾಟ, 3000 ರನ್ ಗಳಿಸಿತ್ತು.
ಚೌಹಾಣ್ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದ್ದು, ಅವರ ಪುತ್ರ ವಿನಾಯಕ್ ಆಗಮಿಸಿದ ನಂತರ ಮುಂದಿನ ಕಾರ್ಯಕ್ರಮಗಳ ವಿವರಗಳನ್ನು ನೀಡಲಾಗುವುದು ಎಂದು ಸೋದರ ಪುಷ್ಪೇಂದ್ರ ಚೌಹಾಣ್ ಹೇಳಿದರು.












Click it and Unblock the Notifications