ಬ್ರಾಹ್ಮಣರಿಗೆ ಹೆಚ್ಚು ಟಿಕೆಟ್ : ಮಾಯಾವತಿ ಭರ್ಜರಿ ಮಾಸ್ಟರ್ ಸ್ಟ್ರೋಕ್
ಲಕ್ನೋ, ಮಾರ್ಚ್ 05 : ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ಬಹುಜನ ಸಮಾಜ ಪಕ್ಷದ ನಾಯಕಿ ಕುಮಾರಿ ಮಾಯಾವತಿ ಅವರ ಈ ನಡೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಮಾಯಾವತಿ ಅವರು ದಲಿತ ಮತ್ತು ತುಳಿತಕ್ಕೊಳಗಾದ ವರ್ಗದ ಅಧಿನಾಯಕಿಯಂತಿದ್ದರೂ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಬಹುಜನ ಸಮಾಜ ಪಕ್ಷದ ಪರವಾಗಿ ಸ್ಪರ್ಧಿಸಲು ಹೆಚ್ಚು ಟಿಕೆಟ್ ನೀಡಿದ್ದು ಯಾವ ಸಮುದಾಯಕ್ಕೆ ಗೊತ್ತಾ? ಬ್ರಾಹ್ಮಣ ಸಮುದಾಯಕ್ಕೆ!
ಇದನ್ನು ಮಾಯಾವತಿ ಅವರ ಅದ್ಭುತ ಚಾಲಾಕಿತನ ಎಂದೇ ಗುರುತಿಸಲಾಗುತ್ತಿದೆ. ಕಾಂಗ್ರೆಸ್ಸಿನಿಂದಲೂ ದೂರವಿರುವ ಮಾಯಾವತಿ ಅವರದು ಈ ನಡೆ, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಎರಡನ್ನೂ ಬೇಸ್ತು ಬೀಳಿಸುವ ಮಾಸ್ಟರ್ ಸ್ಟ್ರೋಕ್ ಎಂದೇ ಬಣ್ಣಿಸಲಾಗುತ್ತಿದೆ. ಬ್ರಾಹ್ಮಣರ ಮತಗಳು ಬಿಜೆಪಿಗೂ ಹೋಗಬಾರದು, ಕಾಂಗ್ರೆಸ್ಸಿಗೂ ದಕ್ಕಬಾರದು ಎಂಬುದು ಈ ನಡೆಯ ಹಿಂದಿನ ಉದ್ದೇಶ.

ಉತ್ತರ ಪ್ರದೇಶದಲ್ಲಿ ಜಾತಿ ಲೆಕ್ಕಾಚಾರ
ಉತ್ತರ ಪ್ರದೇಶದಲ್ಲಿ ಜಾತಿ ಲೆಕ್ಕಾಚಾರವಿಲ್ಲದೆ ಯಾವ ಚುನಾವಣೆಯೂ ನಡೆಯುವುದಿಲ್ಲ. ಇಲ್ಲಿ ಹಿಂದುಳಿದ ವರ್ಗದವರ ಸಂಖ್ಯೆ ಶೇ.44ರಷ್ಟಿದ್ದರೆ, ಎರಡನೇ ಅತೀದೊಡ್ಡ ಜನಸಂಖ್ಯೆ ಇರುವುದು ದಲಿತರದ್ದು. ಹಿಂದುಳಿದ ವರ್ಗದವರು ಸಮಾಜವಾದಿ ಪಕ್ಷದ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದರೆ, ದಲಿತರು ಬಹುಜನ ಸಮಾಜ ಪಕ್ಷಕ್ಕೆ ಅಂಟಿಕೊಂಡಿದ್ದಾರೆ. ದಲಿತರು ರಾಜ್ಯದಲ್ಲಿ ಇರುವುದು ಶೇ.21.1ರಷ್ಟು. ಇನ್ನು ಮೇಲ್ವರ್ಗದವರು ಶೇ.16ರಷ್ಟಿದ್ದಾರೆ. ಅವರಲ್ಲಿ ಬ್ರಾಹ್ಮಣರದ್ದು ಶೇ.10, ಠಾಕೂರ್ ಶೇ.3, ವೈಶ್ಯ ಶೇ.2, ತ್ಯಾಗಿ ಮತ್ತು ಭೂಮಿಹಾರ್ ಶೇ.1.1ರಷ್ಟಿದೆ. ಮುಸ್ಲಿಂರದ್ದು ಶೇ.19.3ರಷ್ಟು.

38ರಲ್ಲಿ ಬಿಎಸ್ಪಿ, 37ರಲ್ಲಿ ಸಮಾಜವಾದಿ ಪಕ್ಷ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕುಮಾರಿ ಮಾಯಾವತಿ ಅವರು ಉದ್ದೇಶಪೂರ್ವಕವಾಗಿಯೇ ಸ್ಪರ್ಧಿಸುತ್ತಿಲ್ಲ ಎಂಬ ಮಾತು ಬಂದಿದೆ. ಬಹುಜನ ಸಮಾಜ ಪಕ್ಷ 38 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಅದರ ಮೈತ್ರಿಕೂಟದ ಅಂಗಪಕ್ಷ ಸಮಾಜವಾದಿ ಪಕ್ಷ 37 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಕಾಂಗ್ರೆಸ್ ಸ್ಪರ್ಧಿಸುತ್ತಿರುವ ಅಮೇಥಿ (ರಾಹುಲ್ ಗಾಂಧಿ) ಮತ್ತು ರಾಯ್ ಬರೇಲಿ(ಸೋನಿಯಾ ಗಾಂಧಿ)ಯಲ್ಲಿ ಅವರ ತಂಟೆಗೆ ಹೋಗುವುದಿಲ್ಲ ಎಂದು ಎರಡೂ ಪಕ್ಷಗಳು ನಿರ್ಧರಿಸಿವೆ. ಕಾಂಗ್ರೆಸ್ ಪಕ್ಷವನ್ನು ಮೈತ್ರಿಯಿಂದ ಹೊರಗಿಟ್ಟೂ ಮೈತ್ರಿಯ ದ್ವಾರವನ್ನು ಮುಕ್ತವಾಗಿರಿಸಿದ್ದಕ್ಕೆ ಇದು ಸಂಕೇತ.

ಕಳೆದ ಚುನಾವಣೆಯಲ್ಲಿ ಮಾಯಾಗೆ ಬಿಗ್ ಬೋಂಡಾ
ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಬ್ರಾಹ್ಮಣರು ಮತ್ತು ಠಾಕೂರ್ ಜನಾಂಗದವರು ರಾಜಕೀಯವಾಗಿ ಸಾಕಷ್ಟು ಬಲಿಷ್ಠರಿದ್ದಾರೆ. ಇವರು ಹಿಂದೆ ಕೂಡ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸಿದ್ದರು. ಆದರೆ, ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯಿಂದಾಗಿ ಎಲ್ಲವೂ ಕೊಚ್ಚಿಕೊಂಡು ಹೋಗಿ, ಬಹುಜನ ಸಮಾಜ ಪಕ್ಷ ಕೈಯನ್ನು ಬರಿದು ಮಾಡಿಕೊಂಡಿದ್ದು. 80ರಲ್ಲಿ ಬಿಜೆಪಿ 71ರಲ್ಲಿ ಗೆದ್ದಿದ್ದರೆ, ಸಮಾಜವಾದಿ ಪಕ್ಷ 5 ಮತ್ತು ಕಾಂಗ್ರೆಸ್ 2ರಲ್ಲಿ ಗೆದ್ದಿತ್ತು. ಅಪ್ನಾ ದಳಕ್ಕೆ 2 ಸಿಕ್ಕಿದ್ದವು. ಮಾಯಾವತಿ ಅವರಿಗೆ ಸಿಕ್ಕಿದ್ದು ಬಿಗ್ ಬೋಂಡಾ. ಆದರೆ, ಈ ಬಾರಿ ನರೇಂದ್ರ ಮೋದಿ ಅಷ್ಟಾಗಿ ಇಲ್ಲದಿರುವುದರ ಲಾಭವನ್ನು ಪಡೆದುಕೊಳ್ಳಲು ಮಾಯಾವತಿ ಯತ್ನಿಸುತ್ತಿದ್ದಾರೆ. ಈ ಪ್ರಾಂತ್ಯದಲ್ಲಿ 6 ಕ್ಷೇತ್ರಗಳಲ್ಲಿ ಮಾಯಾವತಿ ಅವರು ಬ್ರಾಹ್ಮಣರನ್ನು ನಿಲ್ಲಿಸುತ್ತಿದ್ದಾರೆ.

ಸಮೀಕ್ಷೆಗಳ ಪ್ರಕಾರ ಮಾಯಾಗೆ ಆಶಾದಾಯಕ
ಹಲವಾರು ಸಮೀಕ್ಷೆಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷ ಭಾರೀ ಸ್ಪರ್ಧೆಯನ್ನು ಎದುರಿಸಲಿದೆ. ಸಿವೋಟರ್ಸ್-ಎಬಿಪಿ ಸಮೀಕ್ಷೆಯ ಪ್ರಕಾರ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದರೆ ಹೆಚ್ಚು ಎಂದಿದೆ ಸಮೀಕ್ಷೆ. ಕಾಂಗ್ರೆಸ್ ಸ್ಥಾನ ಗಳಿಕೆಯಲ್ಲಿ ಅಷ್ಟೇನೂ ಗಣನೀಯ ವ್ಯತ್ಯಾಸ ಕಂಡುಬರದಿದ್ದರೂ, ಎಸ್ಪಿ ಮತ್ತು ಬಿಎಸ್ಬಿ ಮೈತ್ರಿಕೂಟ ಅಚ್ಚರಿಯ ಫಲಿತಾಂಶ ನೀಡಲಿವೆ ಎಂಬುದು ಮಾಯಾವತಿ ಮತ್ತು ಅಖಿಲೇಶ್ ಅವರಿಗೆ ಆಶಾದಾಯಕವಾಗಿದೆ. ಅದರಲ್ಲಿಯೂ, ಪ್ರಧಾನಿ ಹುದ್ದೆಯ ಮೇಲೆ ಭಾರೀ ಕಣ್ಣಿಟ್ಟಿರುವ ಮಾಯಾವತಿ ಅವರು ಆ ಆಸೆ ಕೈಗೂಡಿಸಿಕೊಳ್ಳಬೇಕಿದ್ದರೆ ಹೆಚ್ಚು ಸೀಟುಗಳನ್ನು ಗೆಲ್ಲಲೇಬೇಕು. ಮಹಾಘಟಬಂಧನ್ ನಲ್ಲಿ ಅತೀಹೆಚ್ಚು ಸೀಟು ಗೆದ್ದರೆ ಮಾತ್ರ ಪ್ರಧಾನಿ ಹುದ್ದೆಯ ಕನಸು ನನಸಾಗಲಿದೆ. ಇದನ್ನು ಮಾಯಾ ಚೆನ್ನಾಗಿ ಬಲ್ಲರು. ಮಾಯಾವತಿ ಅವರು ಇನ್ನೇನು ಮಾಯಾಜಾಲ ಬೀಸಲಿದ್ದಾರೋ ನೋಡಬೇಕು.












Click it and Unblock the Notifications