ಯುಪಿ ಚುನಾವಣೆ: ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಕ್ಷೇತ್ರ ಬದಲಾವಣೆ ಗುಟ್ಟು?
ಲಕ್ನೋ, ಫೆಬ್ರವರಿ 2: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಭಾರತೀಯ ಜನತಾ ಪಕ್ಷದಿಂದ ಸಮಾಜವಾದಿ ಪಕ್ಷಕ್ಕೆ ಹೋಗಿರುವ ಹಿರಿಯ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ವಿಧಾನಸಭೆ ಕ್ಷೇತ್ರವನ್ನು ಬದಲಾಯಿಸಿಕೊಂಡಿದ್ದಾರೆ.
2022ರಲ್ಲಿ ನಡೆಯುವ ಯುಪಿ ಚುನಾವಣೆಯಲ್ಲಿ ಸ್ವಾಮಿ ಪ್ರಸಾದ್ ಮೌರ್ಯ, ಪೂರ್ವ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಫಾಜಿಲ್‌ನಗರ ವಿಧಾನಸಭೆ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲಿದ್ದಾರೆ. ಕಳೆದ ಬಾರಿ ಇದೇ ಸ್ವಾಮಿ ಪ್ರಸಾದ್ ಮೌರ್ಯ ಕುಶಿನಗರ್ ಜಿಲ್ಲೆಯಲ್ಲೇ ಇರುವ ಪದ್ರೌಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಪದ್ರೌನಾ ಮತ್ತು ಫಾಜಿಲ್‌ನಗರ ಎರಡೂ ಕುಶಿನಗರ ಜಿಲ್ಲೆಯ ಭಾಗವಾಗಿದ್ದು, ಪ್ರಮುಖ ಹಿಂದುಳಿದ ಜಾತಿ ನಾಯಕರಾಗಿ ಸ್ವಾಮಿ ಪ್ರಸಾದ್ ಮೌರ್ಯ ಗುರುತಿಸಿಕೊಂಡಿದ್ದು ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ. ಈ ಬಾರಿ ಅವರು ಬಿಜೆಪಿ ಶಾಸಕ ಗಂಗಾ ಸಿಂಗ್ ಕುಶ್ವಾಹಾ ಅವರ ಪುತ್ರ ಬಿಜೆಪಿಯ ಸುರೇಂದ್ರ ಕುಶ್ವಾಹಾ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆರ್‌ಪಿಎನ್ ಸಿಂಗ್:
ಮಾಜಿ ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್, ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರಿದ ಕೆಲವೇ ದಿನಗಳಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಕ್ಷೇತ್ರ ಬದಲಾವಣೆ ಆಗಿದೆ. ಈ ಹಿನ್ನೆಲೆ ಮೌರ್ಯ ಸೋಲಿನ ಭಯದಲ್ಲಿ ತಮ್ಮ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕಿಸಿದ್ದಾರೆ.
ಪದ್ರೌಣ ತೊರೆಯುವ ಅಗತ್ಯವೇನಿತ್ತು ಎಂದು ಪ್ರಶ್ನೆ:
ಪ್ರತಿ ಐದು ವರ್ಷಗಳಿಗೆ ಒಮ್ಮೆ ಸ್ವಾಮಿ ಪ್ರಸಾದ್ ಮೌರ್ಯ ಹೊಸ ಗುರುವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅವರು ಸ್ವತಃ ತಮ್ಮ ಸ್ವಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಪದ್ರೌಣ ಕ್ಷೇತ್ರದಿಂದ ಬೇರೆ ಕಡೆಗೆ ಹೋಗುವ ಅಗತ್ಯವೇನಿತ್ತು. ಅವರಿಗೆ ಸೋಲಿನ ಭೀತಿ ಕಾಡುತ್ತಿದೆ," ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಿಡಿ ಕಾರಿದ್ದಾರೆ.
2009ರಲ್ಲಿ ಆರ್‌ಪಿಎನ್ ಸಿಂಗ್ ವಿರುದ್ಧ ಮೌರ್ಯ ಸೋಲು:
ಕುಶಿನಗರ ಲೋಕಸಭೆ ಕ್ಷೇತ್ರದ ಮಾಜಿ ಸಂಸದ ಆಗಿರುವ ಆರ್‌ಪಿಎನ್ ಸಿಂಗ್ 2009ರ ಕೇಂದ್ರ ಚುನಾವಣೆಯಲ್ಲಿ ಸ್ವಾಮಿ ಪ್ರಸಾದ್ ಮೌರ್ಯರನ್ನು ಸೋಲಿಸಿದ್ದರು. ಅದೇ ಆರ್‌ಪಿಎನ್ ಸಿಂಗ್ ಈಗ ಬಿಜೆಪಿ ಸೇರ್ಪಡೆಯಾಗಿದ್ದು, ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಸ್ಪರ್ಧಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಇನ್ನು, ಸ್ವಾಮಿ ಪ್ರಸಾದ್ ಮೌರ್ಯ ಮೂರು ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದು, ಎರಡು ಬಾರಿ ಪದ್ರೌಣ ವಿಧಾನಸಭೆ ಕ್ಷೇತ್ರದಿಂದಲೇ ಗೆಲುವು ಸಾಧಿಸಿದ್ದರು. ಕಳೆದ 2016ರಲ್ಲಿ ಬಹುಜನ ಸಮಾಜವಾದಿ ಪಕ್ಷವನ್ನು ತೊರೆದಿದ್ದ ಸ್ವಾಮಿ ಪ್ರಸಾದ್ ಮೌರ್ಯ, ಬಿಜೆಪಿಗೆ ಸೇರ್ಪಡೆ ಆಗಿದ್ದರು.
7 ಹಂತಗಳಲ್ಲಿ ನಡೆಯಲಿರುವ ಯುಪಿ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
2017ರಲ್ಲಿ ಯುಪಿ ಮತದಾರರ ತೀರ್ಪು:
ಉತ್ತರ ಪ್ರದೇಶದಲ್ಲಿ ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications