ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಲ್ಟಾ-ಪಲ್ಟಾ ಫಲಿತಾಂಶ: ಯುಪಿಯಲ್ಲಿ ಬಿಜೆಪಿಗೆ ಏಕೆ ಪೆಟ್ಟು ಕೊಡಲಿಲ್ಲ ರೈತರ ಹೋರಾಟ?

|
Google Oneindia Kannada News

ಲಕ್ನೋ, ಮಾರ್ಚ್ 11: ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಾದಿತ ಕೃಷಿ ಕಾಯ್ದೆಗಳು ರೈತರ ಕಣ್ಣು ಕೆಂಪಾಗಿಸಿದ್ದು ಒಂದು ಕಾಲ. ಬಿಸಿಲು, ಮಳೆ, ಗಾಳಿ ಮತ್ತು ಚಳಿ ಎನ್ನದೇ ಸರ್ಕಾರದ ವಿರುದ್ಧ 15 ತಿಂಗಳು ರೈತರು ನಡೆಸಿದ ಹೋರಾಟ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಪೆಟ್ಟು ಕೊಡುತ್ತದೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಗುರುವಾರ ಹೊರ ಬಿದ್ದ ಯುಪಿ ಚುನಾವಣಾ ಫಲಿತಾಂಶ ಎಲ್ಲ ವಿಶ್ಲೇಷಣೆಗಳನ್ನು ತಲೆ ಕೆಳಗೆ ಮಾಡಿದೆ.

ರೈತರ ತೀವ್ರ ವಿರೋಧದ ನಡುವೆಯೂ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಸಂಪೂರ್ಣ ಬಹುಮತ ಗಳಿಸಿದೆ. ಆ ಮೂಲಕ ರಾಜ್ಯದಲ್ಲಿ ಎರಡನೇ ಬಾರಿ ಗದ್ದುಗೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯೋಗಿ ಆದಿತ್ಯನಾಥ್ ಎರಡನೇ ಬಾರಿ ಮುಖ್ಯಮಂತ್ರಿ ಆಗುವುದೂ ಪಕ್ಕಾ ಆಗಿದೆ.

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ರದ್ದಾಯ್ತು; ಮುಂದೇನು ರೈತರ ಕಥೆ? ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ರದ್ದಾಯ್ತು; ಮುಂದೇನು ರೈತರ ಕಥೆ?

ಒಂದು ಕಡೆಯಲ್ಲಿ ರೈತ ಸಂಘಟನೆಗಳ ವಿರೋಧ ಮತ್ತೊಂದು ಕಡೆಯಲ್ಲಿ ಜಯಂತ್ ಚೌಧರಿ ಮತ್ತು ಅಖಿಲೇಶ್ ಯಾದವ್ ಮೈತ್ರಿಕೂಟ. ಇದರ ಹೊರತಾಗಿಯೂ ಬಿಜೆಪಿ ಗೆಲುವು ಸಾಧ್ಯವಾಗಿದ್ದು ಹೇಗೆ?, ರೈತರ ಆಂದೋಲನದ ಕಾವು ಬಿಜೆಪಿಗೆ ನಿಜವಾಗಿಯೂ ತಟ್ಟಲಿಲ್ಲವೇ?, ಪ್ರಮುಖ ಜಾಟ್ ಸಮುದಾಯವನ್ನು ಕೇಸರಿ ಪಡೆಯನ್ನು ಒಪ್ಪಿಕೊಂಡಿದ್ದು ಹೇಗೆ?, ಬಿಜೆಪಿ ಪಾಲಿಗೆ ವರವಾಗಿದ್ದು ಏನು, ಪ್ರತಿಪಕ್ಷಗಳಿಗೆ ಶಾಪವಾಗಿದ್ದು ಏನು? ರೈತರ ತೀವ್ರ ವಿರೋಧದ ನಡುವೆ ಬಿಜೆಪಿ ಗೆಲುವು ಸಾಧಿಸಿದ್ದರ ಹಿಂದಿನ ಸೀಕ್ರೆಟ್ ಏನು ಎಂಬುದರ ಕುರಿತು ಒಂದು ವಿಶ್ಲೇಷಣಾತ್ಮಕ ವರದಿ ಇಲ್ಲಿದೆ ಓದಿ.

ದೆಹಲಿ: ವಿವಾದಿತ 3 ಕೃಷಿ ಕಾಯ್ದೆ ರದ್ದುಗೊಳಿಸಲು 1 ಮಸೂದೆ ರಚನೆದೆಹಲಿ: ವಿವಾದಿತ 3 ಕೃಷಿ ಕಾಯ್ದೆ ರದ್ದುಗೊಳಿಸಲು 1 ಮಸೂದೆ ರಚನೆ

ಯುಪಿಯಲ್ಲಿ ಬಿಜೆಪಿ ಸೋಲಿನ ಬಗ್ಗೆ ವಿಶ್ಲೇಷಣೆ ಕಾರಣ?

ಯುಪಿಯಲ್ಲಿ ಬಿಜೆಪಿ ಸೋಲಿನ ಬಗ್ಗೆ ವಿಶ್ಲೇಷಣೆ ಕಾರಣ?

ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020ರ ವಿರುದ್ಧ ರೈತರು ಸುದೀರ್ಘ 15 ತಿಂಗಳ ಕಾಲ ದೆಹಲಿಯ ಮೂರು ಗಡಿಯಲ್ಲಿ ಆಂದೋಲನ ನಡೆಸಿದರು. ವಿವಾದಿತ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಜೊತೆ ನಡೆಸಿದ 12ಕ್ಕೂ ಹೆಚ್ಚು ಸುತ್ತಿನ ಸಭೆಗಳು ವಿಫಲವಾದವು. ಕೃಷಿ ಕಾಯ್ದೆ ರದ್ದುಗೊಳಿಸಲು ಸಾಧ್ಯವಿಲ್ಲ ಎನ್ನುವ ಮೊಂಡುತನವನ್ನು ಸರ್ಕಾರ ಅಂದು ಪ್ರದರ್ಸಿಸಿತ್ತು.

ದೆಹಲಿ ಮೂರು ಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಯುಪಿ ಜಾಟ್ ಸಮುದಾಯದ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜಾಟ್ ಸಮುದಾಯದ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಯುಪಿಯ ಪಶ್ಚಿಮ ಪ್ರದೇಶದಲ್ಲಿ ಬಿಜೆಪಿಗೆ ಸೋಲು ನಿಶ್ಚಿತ ಎನ್ನುವಂತೆ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು. ಆದರೆ ಎಲ್ಲವೂ ಉಲ್ಟಾ-ಪಲ್ಟಾ ಆಗಿದೆ.

ಜಾಟ್ ಸಮುದಾಯದ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳ ಫಲಿತಾಂಶ

ಜಾಟ್ ಸಮುದಾಯದ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳ ಫಲಿತಾಂಶ

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಜಾಟ್ ಸಮುದಾಯದ ಪ್ರಾಬಲ್ಯವನ್ನು ಹೊಂದಿರುವ ಜಿಲ್ಲೆಗಳು ಹೆಚ್ಚಾಗಿವೆ. ಈ ಪ್ರದೇಶದ 76 ಕ್ಷೇತ್ರಗಳ ಪೈಕಿ ಬಿಜೆಪಿಯು 51 ಕಡೆಗಳಲ್ಲಿ ಗೆಲುವಿನ ಗದ್ದುಗೆ ಏರಿದೆ. ಮಥುರಾ, ಆಗ್ರಾ ಭಾಗದಲ್ಲಿಯಷ್ಟೇ ಅಲ್ಲದೇ, ರಾಷ್ಟ್ರೀಯ ಲೋಕ ದಳ ಹೆಚ್ಚು ಪ್ರಭಾವ ಹೊಂದಿರುವ ಮುಜಾಫರ್ ನಗರ, ಮೀರತ್ ಜಿಲ್ಲೆಗಳಲ್ಲು ಬಿಜೆಪಿ ಪಾಲಿಗೆ ಉತ್ತಮ ಫಲಿತಾಂಶ ಸಿಕ್ಕಿದೆ.

ಲಖೀಂಪುರ್ ಖೇರಿ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಗೆಲುವು

ಲಖೀಂಪುರ್ ಖೇರಿ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಗೆಲುವು

ಉತ್ತರ ಪ್ರದೇಶದ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ಅದೊಂದು ಘಟನೆ ಬಿಜೆಪಿ ನಾಯಕರಿಗೆ ಕೆಟ್ಟ ಈಮೇಜ್ ಅನ್ನು ಕ್ರಿಯೇಟ್ ಮಾಡಿತ್ತು. ಸರ್ಕಾರದ ವಿರುದ್ಧ ಪ್ರತಿಭಟನೆ ಮುಗಿಸಿ ವಾಪಸ್ ಆಗುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿದ್ದು, ಘಟನೆಯಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು. ಈ ಘಟನೆ ಬಿಜೆಪಿಗೆ ತೀವ್ರ ಹಿನ್ನಡೆಯನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುತ್ತಿತ್ತು. ವಿಪರ್ಯಾಸ ಎಂದರೆ ಅದೇ ಲಖೀಂಪುರ್ ಖೇರಿ ಜಿಲ್ಲೆಯ ಎಂಟೂ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ.

ರಾಕೇಶ್ ಟಿಕಾಯತ್ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಗೆಲುವು

ರಾಕೇಶ್ ಟಿಕಾಯತ್ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ ಗೆಲುವು

ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಆರಂಭದಿಂದಲೂ ನಿರಂತರ ಆಂದೋಲನದಲ್ಲಿ ಗುರುತಿಸಿಕೊಂಡ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್, ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ಮಾತನಾಡಿದ್ದರು. ರೈತರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಪ್ರಚಾರ ಸಭೆಗಳಲ್ಲಿ ಕೆಂಡ ಕಾರಿದ್ದರು. ಆದರೆ ಚುನಾವಣಾ ಫಲಿತಾಂಶ ಎಲ್ಲ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ರಾಕೇಶ್ ಟಿಕಾಯತ್ ಕ್ಷೇತ್ರ ವ್ಯಾಪ್ತಿ ಖತೌಲಿಯಲ್ಲಿಯೇ ಬಿಜೆಪಿ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಅದೇ ರೀತಿ ಭಾಗ್ಪತ್ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಶ್ ಟಿಕಾಯತ್, ಬಿಜೆಪಿಯನ್ನು ವಿರೋಧಿಸಿ ರಾಷ್ಟ್ರೀಯ ಲೋಕ ದಳಕ್ಕೆ ಬೆಂಬಲ ಘೋಷಿಸಿದ್ದರು. ಆದರೆ ಅಲ್ಲಿಯೂ ಬಿಜೆಪಿ ಅಭ್ಯರ್ಥಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.

ಬಿಜೆಪಿ ಗೆಲುವಿನ ಬಾವುಟ ಹಾರಿಸಲು ಇದೊಂದೇ ಕಾರಣ

ಬಿಜೆಪಿ ಗೆಲುವಿನ ಬಾವುಟ ಹಾರಿಸಲು ಇದೊಂದೇ ಕಾರಣ

ಕೇಂದ್ರ ಸರ್ಕಾರದ ಬಿಜೆಪಿ ವಿರುದ್ಧ ರೈತರು ಬಂಡಾಯ ಬಾವುಟ ಹಾರಿಸುವುದಕ್ಕೆ ವಿವಾದಿತ ಕೃಷಿ ಕಾಯ್ದೆಗಳೇ ಪ್ರಮುಖ ಕಾರಣವಾಗಿತ್ತು. ಇದನ್ನು ಅರಿತುಕೊಂಡ ಕೇಂದ್ರ ಸರ್ಕಾರ ಕಳೆದ ನವೆಂಬರ್ 29ರಂದು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ವಿಶೇಷ ಕಾಯ್ದೆಯನ್ನು ಜಾರಿಗೊಳಿಸಿತು. ಇದೊಂದು ನಿರ್ಧಾರದಿಂದ ಕೇಂದ್ರ ಸರ್ಕಾರದ ಬಗ್ಗೆ ರೈತರಲ್ಲಿ ಸಕಾರಾತ್ಮಕ ಭಾವನೆ ಮೂಡಿತು. ಇದರ ಮಧ್ಯೆ ಹೆಚ್ಚು ಪ್ರಾಬಲ್ಯ ಹೊಂದಿರುವ ಜಾಟ್ ಸಮುದಾಯದ ನಾಯಕರೊಂದಿಗೆ ಸ್ವತಃ ಕೇಂದ್ರ ಸಚಿವ ಅಮಿತ್ ಶಾ ಸಾಲು ಸಾಲು ಸಭೆಗಳನ್ನು ನಡೆಸಿದರು. ಬಿಜೆಪಿಗೆ ಬೆಂಬಲ ಸೂಚಿಸಿದರೆ, ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.

ಒಡೆದವು ಜಾಟ್ ಸಮುಾಯದ ಮತಗಳು?

ಒಡೆದವು ಜಾಟ್ ಸಮುಾಯದ ಮತಗಳು?

ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ನಿವಾಸಕ್ಕೆ ಜಾಟ್ ಸಮುದಾಯದವರೇ ಆಗಿರುವ ಕೇಂದ್ರ ಸಚಿವ ಸಂಜೀವ್ ಬಾಲಿಯನ್ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಈ ನಾಯಕರ ನಡುವಿನ ಮಾತುಕತೆಯು ಬೇರೊಂದು ಸಂದೇಶವನ್ನೇ ರವಾನಿಸಿತು. ಜಾಟ್ ಸಮುದಾಯದಲ್ಲಿ ಹಿರಿಯರ ಮತಗಳು ಬಿಜೆಪಿ ಕಡೆಗೆ ವಾಲಿದರೆ, ಯುವಕರು ರಾಷ್ಟ್ರೀಯ ಲೋಕ ದಳದ ಪರವಾಗಿ ಮತದ ಮುದ್ರೆ ಒತ್ತಿದರು. ಸಮುದಯದ ಮತಗಳು ಹೀಗಿ ಇಬ್ಭಾಗ ಆಗಿರುವುದೇ ಬಿಜೆಪಿಯ ಗೆಲುವಿಗೆ ಕಾರಣವಾಯಿತು ಅಂತಲೂ ವಿಶ್ಲೇಷಿಸಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಕ್ಕಿದೆ?

ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಕ್ಕಿದೆ?

2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಎರಡನೇ ಬಾರಿ ಗೆಲುವಿನ ಬಾವುಟ ಹಾರಿಸಿದೆ. ರಾಜ್ಯದ 75 ಜಿಲ್ಲೆಗಳ 403 ಕ್ಷೇತ್ರಗಳಲ್ಲಿ ಸರ್ಕಾರ ರಚಿಸುವುದಕ್ಕೆ ಕನಿಷ್ಠ 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಕೇಂದ್ರ ಚುನಾವಣಾ ಆಯೋಗದ ಪ್ರಕಾರ, ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 255 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಸೆಡ್ಡು ಹೊಡೆದ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವಿನ ಸೈಕಲ್ ಏರಿದೆ. ಅಪ್ನಾ ದಳ 12, ಬಹುಜನ ಸಮಾಜವಾದಿ ಪಕ್ಷ 1, ಜೆಡಿಎಲ್ 2, ನಿರ್ಬಲ್ ಇಂಡಿಯನ್ ಶೋಷಿತ ಹಮಾರಾ ಆಮ್ ದಳ 6, ರಾಷ್ಟ್ರೀಯ ಲೋಕ ದಳ 8, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಮಾತ್ರ ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಆಗಿದೆ.

English summary
Uttar Pradesh Assembly Election Results 2022: Here are the reasons Why farmer protest failed to stop BJP juggernaut in Uttar Pradesh. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X