ಎಎಪಿ ಪಂಜಾಬಲ್ಲಿ ಕಿಂಗ್, ಯುಪಿಯಲ್ಲಿ ನೋಟಾ ಮುಂದೆ ಗೋತಾ
ಗೋವಾ, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ನೋಟಾಕ್ಕೆ ಹೋದ ಮತಗಳಿಗಿಂತ ಶಿವಸೇನೆ ಕಡಿಮೆ ಮತಗಳನ್ನು ಗಳಿಸಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತೋರಿಸುತ್ತವೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಕೂಡಾ ನೋಟಾ ಮುಂದೆ ಶರಣಾಗಿರುವ ವರದಿ ಬಂದಿದೆ. ಪಂಜಾಬ್ ರಾಜ್ಯದಲ್ಲಿ ಅಭೂತಪೂರ್ವ ಜಯ ದಾಖಲಿಸಿರುವ ಆಮ್ ಆದ್ಮಿ ಪಕ್ಷವು ಉತ್ತರಪ್ರದೇಶದಲ್ಲಿ ಕಳಪೆ ಪ್ರದರ್ಶನ ನೀಡಿದೆ.
ಉತ್ತರಪ್ರದೇಶದಲ್ಲಿ 403 ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲೂ ಎಎಪಿ ಮುನ್ನಡೆ ಗಳಿಸಲಿಲ್ಲ, ಅಂತಿಮವಾಗಿ ಚುನಾವಣಾ ಆಯೋಗದ ಅಂಕಿ ಅಂಶದಂತೆ ನೋಟಾ(none of the above) ಗಿಂತ ಕಡಿಮೆ ಫಲಿತಾಂಶ ನೀಡಿದೆ. ಎಎಪಿ ಶೇಕಡಾವಾರು ಮತ ಗಳಿಕೆ 0.38% ಇದ್ದರೆ, NOTA 0.69% ಬಂದಿದೆ.
ಎಎಪಿಯ ಉತ್ತರ ಪ್ರದೇಶ ಉಸ್ತುವಾರಿ ಸಂಜಯ್ ಸಿಂಗ್ ಪ್ರತಿಕ್ರಿಯಿಸಿ, "ಯುಪಿ ಚುನಾವಣೆಯು ಆಪ್ ಅಸ್ತಿತ್ವದ ಬಗ್ಗೆ, ಆಪ್ ಕಲ್ಪನೆಯನ್ನು ಜನರಲ್ಲಿ ಕೊಂಡೊಯ್ಯುವುದು, ಅರವಿಂದ್ ಕೇಜ್ರಿವಾಲ್ ಜಿ ಅವರ ನೀತಿಗಳನ್ನು ಪ್ರತಿ ಹಳ್ಳಿಗೆ ಕೊಂಡೊಯ್ಯುವುದು ನಮ್ಮ ಗುರಿಯಾಗಿತ್ತು" ಎಂದು ಹೇಳಿದರು.

"ನಾವು ನಿಲ್ಲದೆ ಅಥವಾ ಆಯಾಸಗೊಳ್ಳದೆ ಸವಾಲುಗಳನ್ನು ಸ್ವೀಕರಿಸುತ್ತಾ ಮುನ್ನಡೆಯಬೇಕು" ಎಂದು ಸಿಂಗ್ ಅವರು ಎಎಪಿಯ ಉತ್ತರ ಪ್ರದೇಶ ಘಟಕದ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಏತನ್ಮಧ್ಯೆ, ರಾಜ್ಯಸಭಾ ಸಂಸದರಾಗಿರುವ ಸಿಂಗ್ ಅವರು ಪಂಜಾಬ್‌ನಲ್ಲಿ ಎಎಪಿಯ ಗೆಲುವಿನಿಂದ ಉತ್ತೇಜಿತರಾಗಿದ್ದಾರೆ, ಅಲ್ಲಿ ಅವರ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ. ಉತ್ತರ ಪ್ರದೇಶದ ಎಎಪಿ ಕಚೇರಿಗಳಲ್ಲಿಯೂ ಸಹ ಸಂಭ್ರಮಾಚರಣೆಗಳು ಪ್ರಾರಂಭವಾಗಿವೆ, ಲಕ್ನೋ ಮತ್ತು ಗೌತಮ್ ಬುದ್ಧ ನಗರದಂತಹ ಸ್ಥಳಗಳಲ್ಲಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿದ್ದಾರೆ.
ಮಾರ್ಚ್ 10 ರಂದು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಿ ಮತ ಎಣಿಕೆ ಪ್ರಕ್ರಿಯೆ ನಡೆಸಲಾಯಿತು. ಎರಡು ತಿಂಗಳಲ್ಲಿ ಒಟ್ಟು 690 ವಿಧಾನಸಭಾ ಕ್ಷೇತ್ರಗಳು ಮತದಾನವಾಗಿದ್ದು, ಯುಪಿಯಲ್ಲಿ ಗರಿಷ್ಠ (403 ಸ್ಥಾನಗಳು) ನಂತರ ಪಂಜಾಬ್ (117), ಉತ್ತರಾಖಂಡ್ (70), ಮಣಿಪುರ (60), ಮತ್ತು ಗೋವಾ (40)ದ ಮುಂದಿನ ಸರ್ಕಾರ ಯಾವುದು ಎಂದು ಮಾರ್ಚ್ 10 ರಂದು ನಿರ್ಧಾರವಾಗಿದೆ. ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯ ಸಾಧಿಸಿದರೆ, ಎಎಪಿ ಪಂಜಾಬ್ ವಶಪಡಿಸಿಕೊಂಡಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆಸಲಾಯಿತು. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು, ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಹಾಗೂ ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಸಲಾಗಿದೆ. ಎಎಪಿಯಂತೆ ಉತ್ತರ ಪ್ರದೇಶದಲ್ಲಿ ಶಿವಸೇನೆ ಕೂಡಾ ಶೇ.0.03ರಷ್ಟು ಮತಗಳನ್ನು ಪಡೆದಿದ್ದು, ನೋಟಾ ಕೂಡಾ ಹಿಂದಿಕ್ಕಲು ಸಾಧ್ಯವಾಗಿಲ್ಲ.












Click it and Unblock the Notifications