ಬಿಜೆಪಿ ಸೋಲಿಸಲು ವಿಪಕ್ಷಗಳು ಒಂದಾಗಿ ಎಂದ ಬಿಜೆಪಿ ಸಂಸದ!
ಲಕ್ನೋ, ಅಕ್ಟೋಬರ್ 15: 'ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳೂ ಒಂದಾಗಬೇಕಿದೆ' ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಇತ್ತೀಚೆಗೆ ಬಿಜೆಪಿ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಸಿನ್ಹಾ, ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯರೂ ಹೌದು.
ರಫೇಲ್ ಡೀಲ್ ನಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ ಎಂದ ಸಿನ್ಹಾ, ರಿಲಯನ್ಸ್ ಅನ್ನು ಫ್ರಾನ್ಸ್ ನ ಡಸಾಲ್ಟ್ ಸಂಸ್ಥೆ ರಫೇಲ್ ಯುದ್ಧ ವಿಮಾನ ಬಿಡಿಭಾಗಗಳ ತಯಾರಿಕೆಗಾಗಿ ಪಾಲುದಾರ ಕಂಪನಿಯನ್ನಾಗಿ ಆರಿಸಿಕೊಂಡಿರುವುದನ್ನು ಖಂಡಿಸಿದರು.

'ಹಿಂದುಸ್ಥಾನ್ ಏರೋನಾಟಿಕ್ಸ್ ಲಿ. ನಂಥ ಅನುಭವಿ ಕಂಪನಿಗಳಿಗೆ ಈ ಕೆಲಸ ವಹಿಸುವುದನ್ನು ಬಿಟ್ಟು, ಬಿಜೆಪಿ ಸರ್ಕಾರವೇಕೆ ರಿಲಯನ್ಸ್ ಗೆ ಈ ಯೋಜನೆಯ ಹೊಣೆ ನೀಡಿದೆ' ಎಂದು ಅವರು ಪ್ರಶ್ನಿಸಿದರು.
ಪದೇ ಪದೇ ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಶತ್ರುಘ್ನ ಸಿನ್ಹಾ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಶತ್ರುಘ್ನ ಸಿನ್ಹಾ ಅವರ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರಿಗೆ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.












Click it and Unblock the Notifications