ವಿಕಾಸ್ ದುಬೆ ಸಾವು; ಯುಪಿ ಸರ್ಕಾರಕ್ಕೆ ಸುಪ್ರೀಂ ಮಹತ್ವದ ಸೂಚನೆ
ಲಕ್ನೋ, ಜುಲೈ 20 : ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ಉತ್ತರ ಪ್ರದೇಶ ಸರ್ಕಾರ ರಚನೆ ಮಾಡಿದೆ. ಈ ಸಮಿತಿಯ ಸದಸ್ಯರಲ್ಲಿ ಬದಲಾವಣೆ ಮಾಡುವಂತೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ.
ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಸಮಿತಿಯ ಸದಸ್ಯರನ್ನು ಬದಲಾವಣೆ ಮಾಡಿ ಎಂದು ಮುಖ್ಯ ನ್ಯಾಯಮೂರ್ತಿಗಳು ಸರ್ಕಾರಕ್ಕೆ ಸೂಚಿಸಿದರು.
ಒಬ್ಬರು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಒಬ್ಬರು ನಿವೃತ್ತ ಪೊಲೀಸ್ ಅಧಿಕಾರಿಯನ್ನು ಸಮಿತಿಗೆ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ. ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಒಪ್ಪಿಗೆ ನೀಡಿದ್ದು, ಸಮಿತಿಯಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದೆ.

ಪ್ರಸ್ತುತ ಸಮಿತಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಒಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಸಮಿತಿಯನ್ನು ಪುನರ್ ರಚನೆ ಮಾಡಲಾಗುತ್ತದೆ ಎಂದು ಸರ್ಕಾರ ಕೋರ್ಟ್‌ಗೆ ಹೇಳಿತು.
8 ಪೊಲೀಸರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. ಆತನನ್ನು ಕಾನ್ಪುರಕ್ಕೆ ಕರೆತರುವಾಗ ಕಾರು ಪಲ್ಟಿಯಾಗಿತ್ತು. ಆಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ವಿಕಾಸ್ ದುಬೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ.
ಈ ಎನ್ ಕೌಂಟರ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.












Click it and Unblock the Notifications