ಉತ್ತರ ಪ್ರದೇಶದಲ್ಲಿ ಸಮೀಕ್ಷೆ ಸಮರ: ಕೇಂದ್ರ ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷದಿಂದ ಪತ್ರ
ಲಕ್ನೋ, ಜನವರಿ 24: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಭಿಪ್ರಾಯ ಸಮೀಕ್ಷೆಗಳಿಗೆ ಕೇಂದ್ರ ಚುನಾವಣಾ ಆಯೋಗ ತಕ್ಷಣ ನಿರ್ಬಂಧ ವಿಧಿಸಬೇಕಿದೆ ಎಂದು ಸಮಾಜವಾದಿ ಪಕ್ಷ ಒತ್ತಾಯಿಸಿದೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರರಿಗೆ ಬರೆದ ಪತ್ರದಲ್ಲಿ ಸಮಾಜವಾದಿ ಪಕ್ಷ ಈ ಬಗ್ಗೆ ಉಲ್ಲೇಖಿಸಿದೆ. ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಪ್ರಸಾರ ಮಾಡುವುದು ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ಇಂಥ ಸಮೀಕ್ಷೆಗಳು ಮತದಾರರ ದಾರಿ ತಪ್ಪಿಸುತ್ತಿದ್ದು, ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎಂದು ಎಸ್‌ಪಿ ದೂಷಿಸಿದೆ.
ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪಕ್ಷದ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ, ಉತ್ತರ ಪ್ರದೇಶ ಸಮಾಜವಾದಿ ಪಕ್ಷ ಘಟಕದ ಮುಖ್ಯಸ್ಥ ನರೇಶ್ ಉತ್ತಮ್ ಪಟೇಲ್, ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದು, ಏಳು ಹಂತಗಳ ಯುಪಿ ಚುನಾವಣೆಗೆ ಮಾರ್ಚ್ 7ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಅಭಿಪ್ರಾಯ ಸಮೀಕ್ಷೆ ಮುಖೇನ ಮತದಾರರ ದಾರಿ ತಪ್ಪಿಸುವ ಹುನ್ನಾರ
ಉತ್ತರ ಪ್ರದೇಶದಲ್ಲಿ ಮತದಾನಕ್ಕೂ ಮೊದಲೇ ಅಭಿಪ್ರಾಯ ಸಮೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ಅಭಿಪ್ರಾಯ ಸಮೀಕ್ಷೆಗಳ ಮೂಲಕ ರಾಜ್ಯದ ಮತದಾರರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದ್ದು, ಇದು ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ. ಈ ಹಿನ್ನೆಲೆ ನರೇಶ್ ಉತ್ತಮ್ ಪಟೇಲ್ ಬರೆದಿರುವ ಪತ್ರದಲ್ಲಿ ತಕ್ಷಣವೇ ಕೆಲವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಭಿಪ್ರಾಯ ಸಮೀಕ್ಷೆಗಳನ್ನು ತಡೆ ಹಿಡಿಯುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದು ಅಖಿಲೇಶ್ ಯಾದವ್ ಹತಾಶೆ ಎಂದ ಬಿಜೆಪಿ
ಯುಪಿ ಚುನಾವಣಾ ಪೂರ್ವ ಸಮೀಕ್ಷೆಗಳಿಗೆ ಸಂಬಂಧಿಸಿದಂತೆ ಆಯೋಗಕ್ಕೆ ಸಮಾಜವಾದಿ ಪಕ್ಷ ಬರೆದಿರುವ ಪತ್ರಕ್ಕೆ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸಮಾಜವಾರಿ ಪಕ್ಷ ಮತ್ತು ಅಖಿಲೇಶ್ ಯಾದವ್ ಅವರು, ಚುನಾವಣೆಯಲ್ಲಿ ಸೋಲಿನ ಹತಾಶೆ ಎದುರಿಸುತ್ತಿರುವುದನ್ನು ತೋರಿಸುತ್ತದೆ ಎಂದಿದ್ದಾರೆ. "ಕೆಲವೊಮ್ಮೆ ಅಖಿಲೇಶ್ ಯಾದವ್ ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನಿಸುತ್ತಾರೆ. ಇನ್ನೂ ಕೆಲವೊಮ್ಮೆ ಅವರು ಡಿಜಿಟಲ್ ಮಾಧ್ಯಮದ ಮೂಲಕ ಪ್ರಚಾರ ಮಾಡುವಲ್ಲಿ ತಮ್ಮ ದೌರ್ಬಲ್ಯವನ್ನು ಹೇಳಿಕೊಳ್ಳುತ್ತಾರೆ. ಇದೀಗ ಅವರು ಸಮೀಕ್ಷೆಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ," ಎಂದು ತ್ರಿಪಾಠಿ ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷಕ್ಕೆ ಸೋಲು ತಪ್ಪಿದ್ದಲ್ಲ ಎಂದ ತ್ರಿಪಾಠಿ
ಉತ್ತರ ಪ್ರದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನಪ್ರಿಯತೆಯನ್ನು ಕಂಡು ಅಖಿಲೇಶ್ ಯಾದವ್ ವಿಚಲಿತಗೊಂಡಿದ್ದಾರೆ. ಈ ಹಿನ್ನೆಲೆ ಚುನುವಣಾ ಪೂರ್ವ ಸಮೀಕ್ಷೆಗಳನ್ನು ಪ್ರಸಾರ ಮಾಡದಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಸಮೀಕ್ಷೆಗಳನ್ನು ನಿಲ್ಲಿಸಿದ ತಕ್ಷಣ ಸಮಾಜವಾದಿ ಪಕ್ಷವು ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತ್ರಿಪಾಠಿ ಕಿಡಿ ಕಾರಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಬಿಸಿ, ಜೀ, ಇಂಡಿಯಾ ಟುಡೇ ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಅಭಿಪ್ರಾಯ ಸಮೀಕ್ಷೆ ನಡೆಸಿದ್ದು, ಅವುಗಳ ಸುದ್ದಿಯನ್ನು ಪ್ರಸಾರ ಮಾಡಿವೆ. ಈ ಎಲ್ಲ ಸಮೀಕ್ಷೆಗಳಲ್ಲಿ ಬಿಜೆಪಿಯು ಸಂಪೂರ್ಣ ಬಹುಮತದೊಂದಿಗೆ ಎರಡನೇ ಬಾರಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲಿದೆ. ಸಮಾಜವಾದಿ ಪಕ್ಷವು ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬ ಫಲಿತಾಂಶವನ್ನು ನೀಡಿವೆ.

ಯುಪಿಯ ಹಿಂದಿನ ಚುನಾವಣೆಯಲ್ಲಿ ಹೇಗಿತ್ತು ತೀರ್ಪು?
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications