ಉತ್ತರ ಪ್ರದೇಶದಲ್ಲಿ ಎಸ್‌ಪಿಯಿಂದ ಮಹಿಳಾ ಭದ್ರತೆಗೆ ಅಪಾಯ: ಯೋಗಿ ಆರೋಪ
ಲಕ್ನೋ, ಜನವರಿ 31: ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದಿಂದ ರಾಜ್ಯದ ಮಹಿಳೆಯರ ಭದ್ರತೆಗೆ ಅಪಾಯವಿದೆ ಎಂದು ಮುಖ್ಯಮತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
"ನಾವು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬೇಕು. ಇದೇ ಸಮಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಪರಾಧ, ಮಾಫಿಯಾ ಸಂಸ್ಕೃತಿ ಮತ್ತು ಅರಾಜಕತೆಯನ್ನು ಉತ್ತೇಜಿಸುವ ಕೊರೊನಾವೈರಸ್ ರೀತಿಯ ಸಾಂಕ್ರಾಮಿಕದಂತಹ ಅಂಶಗಳನ್ನು ಸೋಲಿಸಬೇಕಿದೆ," ಎಂದರು.
ಬಿಜೆಪಿ ಡಬಲ್ ಇಂಜಿನ್ ಸರ್ಕಾರವು ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಸಿಎಂ ಕನ್ಯಾ ಸುಮಂಗಲಾ ಯೋಜನೆಯಡಿ ತಲಾ 15,000 ರೂ ನೀಡುತ್ತಿರುವಾಗ ಸಮಾಜವಾದಿ ಪಕ್ಷದ ನಾಯಕರಿಂದ ಮಹಿಳೆಯರ ಸುರಕ್ಷತೆಗೆ ಅಪಾಯವಿದೆ ಎಂದು ಯೋಗಿ ಆದಿತ್ಯನಾಥ್ ಆರೋಪಿಸಿದರು.

ಹೆಸರಿಗಷ್ಟೇ ಸಮಾಜವಾದಿ:
"ಅವರು ರೈತರನ್ನು ಶೋಷಿಸುತ್ತಾರೆ, ಯುವಕರ ಭವಿಷ್ಯದೊಂದಿಗೆ ಆಟವಾಡುತ್ತಾರೆ ಮತ್ತು ಗಲಭೆಗಳನ್ನು ರೂಪಿಸುತ್ತಾರೆ. ಅವರು ಹೆಸರಿನಿಂದ ಮಾತ್ರ 'ಸವಾಜವಾದಿ' ಆಗಿದ್ದಾರೆ, ಆದರೆ ಚಿಂತನಾ ಕ್ರಮದಲ್ಲಿ 'ಪರಿವಾರವಾದಿ' ಮತ್ತು ವೃತ್ತಿಯಿಂದ 'ಡಂಗವಾಡಿ' ಆಗಿದ್ದಾರೆ," ಎಂದು ಯೋಗಿ ಆದಿತ್ಯನಾಥ್ ಕಿಡಿ ಕಾರಿದ್ದಾರೆ.
"ಆಗ್ರಾದಲ್ಲಿ ಯುವಕರಿಗೆ ಕೆಲಸವಿಲ್ಲ. ಇಲ್ಲಿನ ಜನರು ಸೌಲಭ್ಯಗಳು ಮತ್ತು ಅಭಿವೃದ್ಧಿಗಳಿಂದ ವಂಚಿತರಾಗಿದ್ದಾರೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಆಗ್ರಾವನ್ನು ದೇಶದ ಇತರ ಭಾಗಗಳ ಜೊತೆಗೆ ವಿಮಾನದ ಮೂಲಕ ಸಂಪರ್ಕಿಸಿದೆ. ಆಗ್ರಾ ಮೆಟ್ರೋ ಕೆಲಸವೂ ನಡೆಯುತ್ತಿದೆ. ಅತಿ ಶೀಘ್ರದಲ್ಲೇ ಯುಪಿಯಲ್ಲಿ ಬಿಜೆಪಿ ಸರ್ಕಾರವು ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕೆಲಸವನ್ನು ಪ್ರಾರಂಭಿಸುತ್ತದೆ," ಎಂದು ಯೋಗಿ ಹೇಳಿದರು.
ಅಖಿಲೇಶ್ ಯಾದವ್ ವಿರುದ್ಧ ಆರೋಪಿಸಿದ ಪ್ರಧಾನಿ ಮೋದಿ:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಪಕ್ಷ ಸಮಾಜವಾದಿ ಪಕ್ಷ ಮತದಾರರನ್ನು ಪ್ರೇರೇಪಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದರು. ಶಾಮ್ಲಿ, ಮುಜಾಫರ್‌ನಗರ, ಬಾಗ್‌ಪತ್, ಸಹರಾನ್‌ಪುರ ಮತ್ತು ಗೌತಮ್ ಬುಧ್ ನಗರದ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ರಾಜ್ಯದಲ್ಲಿ ಮೊದಲ ವರ್ಚುವಲ್ ಪ್ರಚಾರ ನಡೆಸಿದರು. ಈ ವೇಳೆ "ನಕಲಿ ಸಮಾಜವಾದ (ನಕಲಿ ಸಮಾಜವಾದ್)ದ ವಿರುದ್ಧ ಗರೀಬ್ ಕಾ ಸರ್ಕಾರ್ (ಬಡವರ ಪರ ಸರ್ಕಾರ)" ಎಂದು ಹೇಳಿದ ಪ್ರಧಾನಿ ಮೋದಿ, ಬಡವರಿಗೆ ಮನೆಗಳು, ಹಿಂದುಳಿದ ವರ್ಗಗಳಿಗೆ ಹೊಸ ನೀತಿ, ವೈದ್ಯಕೀಯ ಕಾಲೇಜು, ಎಕ್ಸ್‌ಪ್ರೆಸ್‌ವೇಗಳ ಮೂಲಕ ಹೆಚ್ಚಿನ ಸಂಪರ್ಕ, ಮುಸ್ಲಿಂ ಮಹಿಳೆಯರು ಮತ್ತು ಮದುವೆ ಪ್ರಮಾಣ ಹೆಚ್ಚಿಸುವುದರ ಕುರಿತು ಪ್ರಧಾನಿ ಮೋದಿ ಉಲ್ಲೇಖಿಸಿದರು.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications