ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಯೋಗಿ ಆದಿತ್ಯನಾಥ್ ಹತ್ತಿಕ್ಕುವ ಯತ್ನ; ಪ್ರಿಯಾಂಕಾ ಗಾಂಧಿ
ಲಕ್ನೋ, ಜನವರಿ 26: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಳಿಕೊಂಡ ನಂತರ ಬಿಜೆಪಿ ಅವರನ್ನು ನಿರ್ಲಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಗೋರಖ್‌ಪುರ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆದಿತ್ಯನಾಥ್ ಕಣಕ್ಕಿಳಿಯುವುದು ಪಕ್ಕಾ ಆಗಿದೆ, ಹೀಗಾಗಿ ಅಯೋಧ್ಯೆಯಿಂದ ಯೋಗಿ ಸ್ಪರ್ಧಿಸಬಹುದು ಎಂಬ ಎಲ್ಲಾ ಊಹಾಪೋಹಗಳು ಅಂತ್ಯವಾಗಿವೆ. ಈ ಬೆಳವಣಿಗೆಯನ್ನು ನೋಡುತ್ತಿದ್ದರೆ ಬಿಜೆಪಿಯು ಅವರ ವ್ಯಾಪ್ತಿಯನ್ನು ತುಂಡರಿಸಲು ಪ್ರಯತ್ನಿಸುತ್ತಿದೆ ಎನ್ನುವಂತೆ ತೋರುತ್ತಿದೆ. ಬಿಜೆಪಿಯು ಬಹಳ ಸಮಯದಿಂದ ಈ ಕೆಲಸವನ್ನು ಮಾಡುತ್ತಿದ್ದು, ಅದೀಗ ಬಹಿರಂತ ಸತ್ಯವಾಗಿದೆ.
"ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ ಮತ್ತು ದಳ್ಳುರಿಯ ಬಗ್ಗೆ ಅವರೇ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಅಲ್ಲಿನ ನಿರಂಕುಶಾಧಿಕಾರಿ ವ್ಯವಸ್ಥೆಯಲ್ಲಿ ಒಬ್ಬರೇ ಒಬ್ಬರು ಸರ್ವೋಚ್ಛ ನಾಯಕರು ಇರಬೇಕೆಂದು ಅವರು ಬಯಸುತ್ತಾರೆ," ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದೂಷಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಜನರನ್ನು ರಕ್ಷಿಸುವಲ್ಲಿ ವಿಫಲ:
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ವಿಫಲವಾಗಿದೆ. ರಾಜ್ಯದ ವೈದ್ಯಕೀಯ ವ್ಯವಸ್ಥೆ ತೀರಾ ಕೆಟ್ಟದಾಗಿದೆ. ಜನರನ್ನು ರಕ್ಷಿಸುವಲ್ಲಿ ಸೋತ ಸರ್ಕಾರವು ಜೀವವನ್ನು ಉಳಿಸುವಲ್ಲಿ ವಿಫಲವಾಗಿದೆ. ರಾಜ್ಯದ ಜನರಿಗೆ ಆಕ್ಸಿಜನ್, ಬೆಡ್, ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಆರೋಗ್ಯ ಸೇವೆ ಒದಗಿಸುವವರ ಮೇಲೆ ದೌರ್ಜನ್ಯ:
"ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದ್ದೂ ಅಲ್ಲದೇ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವವರ ಮೇಲೆ ಆಕ್ರಮಣಕಾರಿಯಾಗಿ ವರ್ತಿಸಿದೆ ಎಂಬುದು ಇನ್ನೂ ಕೆಟ್ಟ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇತರರಿಗೆ ಸಹಾಯ ಮಾಡಲು ತಮ್ಮ ಜೀವವನ್ನು ಪಣಕ್ಕಿಟ್ಟಿರುವ 'ಆಶಾಬಾಹುಗಳು' ಅಥವಾ ವೈದ್ಯರು, ದಾದಿಯರು ಮತ್ತು ಆರೋಗ್ಯ ವೃತ್ತಿಪರರಿಗೆ ಸರ್ಕಾರದಿಂದ ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಬದಲು ಭಯದ ವಾತಾವರಣ ಸೃಷ್ಟಿಸಿದೆ, " ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಜೀವ ಉಳಿಸುವ ಬದಲು ಸತ್ಯ ಮುಚ್ಚಿಡುವ ಯತ್ನ:
ಉತ್ತರ ಪ್ರದೇಶದಲ್ಲಿ ಕೊವಿಡ್-19 ಕಾಲದಲ್ಲಿ ಜೀವ ಉಳಿಸಬೇಕಾದ ಸರ್ಕಾರ ತನ್ನ ಕರ್ತವ್ಯವನ್ನು ಮಾಡುವುದರ ಬದಲಿಗೆ ಸತ್ಯವನ್ನು ಮುಚ್ಚಿಡುವ ಕಾರ್ಯವನ್ನು ಮಾಡಿದೆ. ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಸರ್ಕಾರದ ಈ ನಡೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾನು ಹೇಳಲಾರೆ. ಏಕೆಂದರೆ ಜನರು ದುರಂತಗಳನ್ನು ಮರೆತು ಮುಂದೆ ಸಾಗುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications