ಡಿ.18ರಂದು ಉತ್ತರಪ್ರದೇಶದ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ
ಲಕ್ನೋ, ಡಿಸೆಂಬರ್ 15: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 18ರಂದು ಉತ್ತರಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಲು ಆಡಳಿತರೂಢ ಬಿಜೆಪಿ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಕಳೆದ ಇಂದು ತಿಂಗಳಿನಲ್ಲಿ ಹಲವು ಬಾರಿ ಭೇಟಿ ನೀಡಿದ್ದಾರೆ. ತರಾತುರಿಯಲ್ಲಿ ಒಂದಾದರ ಮೇಲೆ ಒಂದರಂತೆ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿದ್ದಾರೆ.

ಇತ್ತೀಚೆಗೆ ಗೋರಖ್ಪುರ್ನಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಸೇರಿ ಮೂರು ಬೃಹತ್ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದ ಪ್ರಧಾನಿ ಮೋದಿ, ಮತ್ತೆ ಡಿ.11ರಂದು ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ 9802 ಕೋಟಿ ರೂಪಾಯಿ ವೆಚ್ಚದ ಸರಯೂ ನಾಲೆ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು.
ಎರಡು ದಿನಗಳ ಹಿಂದೆ ಪ್ರಧಾನಿ ಮೋದಿಯವರು ತಾವು ಪ್ರತಿನಿಧಿಸುವ ಹಿಂದೂಗಳ ಪವಿತ್ರ ಕ್ಷೇತ್ರ, ವಾರಣಾಸಿಯ ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಉದ್ಘಾಟಿಸಿದರು.
ಗಂಗಾ ಎಕ್ಸ್‌ಪ್ರೆಸ್‌ವೇ ಕುರಿತು
ಇನ್ನು 594 ಕಿಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ, ವಾಯುಪಡೆಯ ವಿಮಾನಗಳನ್ನು ತುರ್ತು ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಮಾಡಲು ಶಹಜಹಾನ್‌ಪುರ ಜಿಲ್ಲೆಯಲ್ಲಿ ಏರ್‌ಸ್ಟ್ರಿಪ್ ಅನ್ನು ಸಹ ನಿರ್ಮಿಸಲಾಗುತ್ತದೆ.
ಮಂಗಳವಾರದಂದು ಉತ್ತರಪ್ರದೇಶ ಸರ್ಕಾರದ ಹೇಳಿಕೆಯ ಪ್ರಕಾರ, ಎಕ್ಸ್‌ಪ್ರೆಸ್‌ವೇಯ ಅರ್ಧಕ್ಕಿಂತ ಹೆಚ್ಚು ಪಶ್ಚಿಮ ಉತ್ತರ ಪ್ರದೇಶದ ಮೀರತ್, ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬುದೌನ್, ಶಹಜಹಾನ್‌ಪುರ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ ಎಂದು ಹೇಳಿದೆ.
ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಯ ರಸ್ತೆಯು ಪೂರ್ವ ಉತ್ತರಪ್ರದೇಶದಿಂದ ಪಶ್ಚಿಮ ಉತ್ತರಪ್ರದೇಶವನ್ನು ಸಂಪರ್ಕಿಸುತ್ತದೆ. ಅಲ್ಲದೇ ಇದು ನೇರವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ ನವದೆಹಲಿ (ಎನ್‌ಸಿಆರ್) ಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ.
ಗಂಗಾ ಎಕ್ಸ್‌ಪ್ರೆಸ್‌ವೇಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಾಗ, ಇಡೀ ದೇಶದಲ್ಲಿ ಕೊರೊನಾ ಅಲೆಯು ಉತ್ತುಂಗದಲ್ಲಿತ್ತು. ಇದರ ಹೊರತಾಗಿಯೂ, ಕೇವಲ ಒಂದು ವರ್ಷದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇಗಾಗಿ 83 ಸಾವಿರ ರೈತರಿಂದ ಶೇಕಡಾ 94ರಷ್ಟು ಭೂಮಿಯನ್ನು ಖರೀದಿಸಲಾಗಿದೆ.
ಒಟ್ಟು 36,230 ಕೋಟಿ ವೆಚ್ಚದಲ್ಲಿ 594 ಕಿಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಕಳೆದ ವರ್ಷ ನವೆಂಬರ್ 26ರಂದು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಯೋಜನೆಗೆ ಸುಮಾರು 7386 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಕಳೆದ ನಾಲ್ಕು ತಿಂಗಳಲ್ಲಿ 71,621 ರೈತರಿಂದ ಶೇ.90ಕ್ಕೂ ಹೆಚ್ಚು ಭೂಮಿ ಖರೀದಿಸಲಾಗಿದೆ.
94ರಷ್ಟು ಭೂಮಿಯನ್ನು ಒಟ್ಟು 82,750 ರೈತರಿಂದ ಖರೀದಿಸಲಾಗಿದೆ, ಪರಿಸರ ಸಂರಕ್ಷಣೆಗಾಗಿ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಸುಮಾರು 18,55,000 ಸಸಿಗಳನ್ನು ನೆಡಲಾಗುತ್ತದೆ. ಯೋಜನೆಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಸೌರಶಕ್ತಿಯ ಮೂಲಕ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಇದು ಯೋಜನೆಯ ಕಾರ್ಯಾಚರಣೆಗೆ ಅಗತ್ಯವಾದ ಶಕ್ತಿಯನ್ನು ಪೂರೈಸುತ್ತದೆ ಎಂದು ಉತ್ತರಪ್ರದೇಶ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜನರ ಅನುಕೂಲಕ್ಕಾಗಿ ಒಂಬತ್ತು ಸಾರ್ವಜನಿಕ ಅನುಕೂಲ ಕೇಂದ್ರಗಳು, ಏಳು ರೈಲ್ವೆ ಮೇಲ್ಸೇತುವೆಗಳು, 14 ಪ್ರಮುಖ ಸೇತುವೆಗಳು, 126 ಕಿರು ಸೇತುವೆಗಳು ಮತ್ತು 381 ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದೆ.












Click it and Unblock the Notifications