ನನ್ನನ್ನು ವಿರೋಧಿಸಲು ಈಗ ಹೆಚ್ಚು ಕಾರಣ ಸಿಕ್ಕಿವೆ; ಮೋದಿ
ಲಕ್ನೋ, ಅಕ್ಟೋಬರ್ 05: ಸರ್ಕಾರದ ಯೋಜನೆಗಳಿಂದ ಸಾವಿರಾರು ಫಲಾನುಭವಿಗಳಿಗೆ ಉತ್ತಮ ಅವಕಾಶಗಳು ಸಿಕ್ಕಿವೆ. ಇದೀಗ ನನ್ನ ವಿರೋಧಿಗಳಿಗೆ ನನ್ನನ್ನು ವಿರೋಧಿಸಲು ಕೂಡ ಹೆಚ್ಚಿನ ಕಾರಣಗಳು ದೊರೆತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸ್ವಾತಂತ್ರ್ಯ@75 ನಗರಗಳ ನವ ಭಾರತ: ಬದಲಾಗುತ್ತಿರುವ ನಗರಗಳ ಚಿತ್ರಣ ಸಮ್ಮೇಳನ ಮತ್ತು ಮೇಳವನ್ನು ಉತ್ತರಪ್ರದೇಶದ ಲಕ್ನೋ ನಗರದಲ್ಲಿರುವ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನಾ ನಗರ ಪ್ರದೇಶದ ಮನೆಗಳನ್ನು 75 ಸಾವಿರ ಫಲಾನುಭವಿಗಳಿಗೆ ಡಿಜಿಟಲ್ ಮೂಲಕ ಮನೆ ಕೀಲಿಗಳನ್ನು ಹಸ್ತಾಂತರಿಸಿದ ಸಂದರ್ಭ ಮಾತನಾಡಿದ ಅವರು, 'ಹಿಂದಿನ ಸರ್ಕಾರದ ಅವಧಿಯಲ್ಲಿ ನಗರ ಯೋಜನೆಗಳು ರಾಜಕೀಯದ ಬಲಿಪಶುವಾಗಿದ್ದವು. 18 ಸಾವಿರ ಮನೆಗಳನ್ನು ಮಂಜೂರಾತಿ ಮಾಡಿ 18 ಮನೆಗಳನ್ನು ಕೂಡ ನಿರ್ಮಿಸಿರಲಿಲ್ಲ' ಎಂದು ಹೇಳಿದರು.

'ಹಿಂದಿನ ಸರ್ಕಾರಗಳು ಬಡಜನರಿಗೆ ಮನೆ ನಿರ್ಮಿಸುವ ಬಯಕೆ ಹೊಂದಿರಲಿಲ್ಲ. ಮನೆ ಕಟ್ಟಲು ಹಲವು ತೊಡಕುಗಳನ್ನು ಅವರೇ ಹುಟ್ಟುಹಾಕುತ್ತಿದ್ದರು. ಆದರೆ ಇದುವರೆಗೂ ಯೋಗಿ ಆದಿತ್ಯಾನಾಥ್ ಒಂಬತ್ತು ಲಕ್ಷ ಮನೆಗಳನ್ನು ನೀಡಿದ್ದಾರೆ. ಹದಿನಾಲ್ಕು ಲಕ್ಷ ಮನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಇದೀಗ 75 ಜಿಲ್ಲೆಗಳ ಫಲಾನುಭವಿಗಳು ಹೊಸ ಮನೆಗಳ ಕೀಲಿಕೈಗಳನ್ನು ಪಡೆದುಕೊಂಡಿದ್ದಾರೆ' ಎಂದು ವಿವರಣೆ ನೀಡಿದರು.
ಅ.5ರಿಂದ 7ರವರೆಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಚರಣೆ ಅಡಿಯಲ್ಲಿ ಲಕ್ನೋದಲ್ಲಿ ಮೂರು ಮೇಳಗಳನ್ನು ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ 'ಆಜಾದಿ ಕಾ ಅಮೃತ್ ಮಹೋತ್ಸವ' ಅಭಿಯಾನದ ಭಾಗವಾಗಿ ಉತ್ತರ ಪ್ರದೇಶದ ನಗರಾಭಿವೃದ್ಧಿ ಇಲಾಖೆ ಆಯೋಜಿಸಿರುವ ಮೂರು ದಿನಗಳ ನಗರ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಲಕ್ನೋನಲ್ಲಿದ್ದಾರೆ.
ಲಖಿಂಪುರ ಖೇರ್‌ನಲ್ಲಿ ಭಾನುವಾರ ರೈತರ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ವ್ಯಾಪಕ ವಿರೋಧದ ನಡುವೆ ಪ್ರಧಾನಿ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

'ಮಹಿಳೆಯರು ಆಸ್ತಿಯಲ್ಲಿ ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಇದಕ್ಕಾಗಿಯೇ ನಾವು ಸರ್ಕಾರಿ ಮನೆಗಳ ಮಾಲೀಕತ್ವವನ್ನು ಮಹಿಳೆಯರಿಗೆ ನೀಡಬೇಕೆಂದು ನಿರ್ಧರಿಸಿದೆವು. ಉತ್ತರ ಪ್ರದೇಶದಲ್ಲಿ ಮಹಿಳೆಯರು ಮನೆಗಳ ನೋಂದಣಿಯಲ್ಲಿ 2% ರಿಯಾಯಿತಿ ಪಡೆಯಬಹುದಾಗಿದೆ. ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಭಾರತದ ಯಶಸ್ಸನ್ನು ಜಗತ್ತು ನೋಡುತ್ತಿದೆ' ಎಂದರು.
'ನಾವು 1.13 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದೆವು. ಇದಕ್ಕೂ ಮೊದಲು ಇದರ ಸಂಖ್ಯೆ 13 ಅಥವಾ 8 ಲಕ್ಷವಾಗಿತ್ತು. ಈಗಾಗಲೇ 50 ಲಕ್ಷ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ' ಎಂದು ತಿಳಿಸಿದರು.
'ನಾನು ಲಕ್ನೋಗೆ ಬರುತ್ತಿದ್ದಂತೆ ಅವಧ್ ಪ್ರದೇಶದ ಸಿಹಿ ಭಾಷೆಯ ಸವಿ ಸವಿದೆ. ಈ ಮೇಳ 75 ವರ್ಷಗಳ ಸಾಧನೆಗಳನ್ನು ತೋರುತ್ತಿದೆ. ಈ ಮೇಳಕ್ಕೆ ಜನರು ಭೇಟಿ ನೀಡಬೇಕು' ಎಂದು ಹೇಳಿದರು.
ಲಕ್ನೋದಲ್ಲಿನ ಮೇಳದ ಕುರಿತು:
ನಗರಗಳ ನವಭಾರತ ಎಂಬ ಹೆಸರಿನ ಅಡಿ, ನಗರ ಅಭಿಯಾನಗಳ ಆಯೋಜನೆಗಳ ಕುರಿತು ಹೆಚ್ಚು ವಿವರಿಸುವ ಮೇಳ ಹಮ್ಮಿಕೊಳ್ಳಲಾಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ ಗೃಹಸಂಬಂಧಿ ಯೋಜನೆಗಳು ಹಾಗೀ ನಗರಾಭಿವೃದ್ಧಿ ಯೋಜನೆಗಳಿಂದಾದ ಬದಲಾವಣೆಗಳ ಕುರಿತು ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗಿದೆ.
ನಿರ್ಮಾಣ ತಂತ್ರಜ್ಞಾನದಲ್ಲಿ ನೂತನ 75 ತಂತ್ರಗಳನ್ನು ಪ್ರದರ್ಶಿಸುವ ಭಾರತೀಯ ಮನೆ ತಂತ್ರಜ್ಞಾನ ಮೇಳ ಎಂಬ ಹೆಸರಿನಲ್ಲಿ ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗಿದೆ. ಜಾಗತಿಕ ಮನೆ ತಂತ್ರಜ್ಞಾನ ಸವಾಲುಗಳು ಇಂಡಿಯಾ ಸಂಸ್ಥೆಯ ಅಡಿಯಲ್ಲಿ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಬಂದಿರುವ ನೂತನ ತಂತ್ರಜ್ಞಾನ, ಯಂತ್ರೋಪಕರಣಗಳು, ಹೊಸಬಗೆಯ ಪ್ರಕ್ರಿಯೆಗಳನ್ನು ಪ್ರದರ್ಶಿಸಲಾಗುತ್ತದೆ.












Click it and Unblock the Notifications