ಮುಲಾಯಂ ಸಿಂಗ್ ಯಾದವ್ ಅಣ್ಣನ ಮಗಳು ಬಿಜೆಪಿ ಸೇರ್ಪಡೆ: ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ
ಲಕ್ನೋ, ಏಪ್ರಿಲ್ 8: ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ (ಎಸ್‌ಪಿ) ಒಡೆದು ಛಿದ್ರಗಳಾಗಿವೆ. 2016ರಲ್ಲಿ ಅಖಿಲೇಶ್ ಯಾದವ್ ಅವರು ಪಕ್ಷದ ನಾಯಕತ್ವ ವಹಿಸಿಕೊಂಡ ವೇಳೆ ಮುಲಾಯಂ ಸಿಂಗ್ ಅವರ ಕಿರಿಯ ಸಹೋದರ ಶಿವಪಾಲ್ ಸಿಂಗ್ ಯಾದವ್ ಅಸಮಾಧಾನಗೊಂಡು ಪಕ್ಷದಿಂದ ಹೊರನಡೆದಿದ್ದರು. ಈಗಲೂ ಒಂದೇ ಕುಟುಂಬದ ಗುಂಪುಗಳ ನಡುವಿನ ರಾಜಕೀಯ ಕದನ ನಡೆಯುತ್ತಲೇ ಇದೆ.
ಮುಲಾಯಂ ಸಿಂಗ್ ಯಾದವ್ ಕುಟುಂಬಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ಮುಲಾಯಂ ಅವರ ಸೋದರ ಸಂಬಂಧಿ ಸಂಧ್ಯಾ ಯಾದವ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಮುಂಬರುವ ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಮುಲಾಯಂ ಅವರ ತವರು ಜಿಲ್ಲೆ ಮೈನ್ಪುರಿಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.
ಮುಲಾಯಂ ಸಿಂಗ್ ಅವರ ಅಣ್ಣ ಅಭಯ್ ಸಿಂಗ್ ಯಾದವ್ ಅವರ ಮಗಳು ಮತ್ತು ಬದೌನ್‌ನ ಮಾಜಿ ಸಂಸದ ಧರ್ಮೇಂದ್ರ ಯಾದವ್ ಅವರ ಅಕ್ಕ. ಪ್ರಸ್ತುತ ಅವರು ಮೈನ್ಪುರಿ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆಯು ಏಪ್ರಿಲ್ 15 ರಿಂದ ಏಪ್ರಿಲ್ 29ರವರೆಗೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಸಂಧ್ಯಾ ಯಾದವ್ ಮತ್ತು ಅವರ ಪತಿ ಅನುಜೇಶ್ ಪ್ರತಾಪ್ ಸಿಂಗ್ ಅವರು ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಯಾದವ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. 2017ರಲ್ಲಿ ಮೈನ್ಪುರಿ ಜಿಲ್ಲಾ ಪಂಚಾಯತಿಯಲ್ಲಿ ಸಂಧ್ಯಾ ಯಾದವ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಬಳಿಕ ಹಿಂಪಡೆಯಲಾಗಿತ್ತು. ಈ ಗೊತ್ತುವಳಿಯನ್ನು ಎಸ್‌ಪಿ ಸದಸ್ಯರು ಬೆಂಬಲಿಸಿದ್ದರು.
ಅನುಜೇಶ್ ಪ್ರತಾಪ್ ಸಿಂಗ್ ಅವರನ್ನು 2019ರಲ್ಲಿ ಎಸ್‌ಪಿಯಿಂದ ವಜಾಗೊಳಿಸಲಾಗಿತ್ತು. ಬಳಿಕ ಅವರು ಬಿಜೆಪಿ ಸೇರಿಕೊಂಡಿದ್ದರು. ಎಸ್‌ಪಿಯಲ್ಲಿ ಬಂಡಾಯವೆದ್ದಿದ್ದ ಅವರ ಪತ್ನಿ ಸಂಧ್ಯಾ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ. ಈಗಾಗಲೇ ಒಡೆದು ಚೂರಾಗಿರುವ ಮುಲಾಯಂ ಸಿಂಗ್ ಕುಟುಂಬ ಮತ್ತು ಎಸ್‌ಪಿಯ ಮತ್ತಷ್ಟು ಮಂದಿ ಮುಂಬರುವ 2022ರ ವಿಧಾನಸಭೆ ಚುನಾವಣೆಯ ವೇಳೆಗೆ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications