ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಪಟ್ಟು
ಲಕ್ನೋ, ಅಕ್ಟೋಬರ್ 07: ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪಟ್ಟು ಹಿಡಿದಿದ್ದಾರೆ.
ಸುದ್ದಿಗಾರರೊಂದಿಗೆ ಪ್ರಿಯಾಂಕಾ ಗಾಂಧಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನ್ಯಾಯ ಪಡೆದುಕೊಳ್ಳುವುದು ಎಲ್ಲರ ಹಕ್ಕಾಗಿದೆ. ಆದರೆ, ಘಟನೆ ಸಂಬಂಧ ಇನ್ನೂ ನ್ಯಾಯ ದೊರೆತಿಲ್ಲ. ಪ್ರತಿಯೊಬ್ಬ ಪ್ರತ್ಯಕ್ಷದರ್ಶಿ ಕೂಡ ಅಜಯ್ ಮಿಶ್ರಾ ಅವರ ಮಗನನ್ನು ನೋಡಿದ್ದಾರೆ, ಗುರುತಿಸಿದ್ದಾರೆ ಅವರ ಪಾತ್ರವಿದೆ ಎಂದು ಹೇಳುತ್ತಿದ್ದಾರೆ. ಪಕ್ಷಪಾತವಿಲ್ಲದ ತನಿಖೆಗಾಗಿ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ನಾನು ಭೇಟಿಯಾದ ಎಲ್ಲಾ ಸಂತ್ರಸ್ತರ ಕುಟುಂಬಗಳೂ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ತಡೆಯಲು ಸರ್ಕಾರ ಪೊಲೀಸರನ್ನು ಬಳಕೆ ಮಾಡಿಕೊಂಡಿದೆ. ಆದರೆ, ಆರೋಪಿಗಳನ್ನು ಬಂಧಿಸಲು ಬಳಸಿಲ್ಲ ಎಂದು ಕಿಡಿಕಾರಿದ್ದಾರೆ.

ಗುರುವಾರ ಬೆಳಗ್ಗೆಯೇ ರಾಹುಲ್ ಗಾಂಧಿ ಅವರು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ಜತೆ ಲಕ್ನೋಗೆ ಆಗಮಿಸಿದರು.
'ಸ್ವಂತ ಕಾರಿನಲ್ಲಿ ಹೋಗಲು 20 ದಿನವಾದರೂ ಸರಿ, ಎಷ್ಟು ದಿನವಾದರೂ ಸರಿ.. ವಿಮಾನ ನಿಲ್ದಾಣದಲ್ಲಿಯೇ ಕಾಯುವೆ' ಎಂದು ಸವಾಲು ಹಾಕಿದರು. ಕೊನೆಗೆ ಸ್ವಂತ ವಾಹನದಲ್ಲಿ ಲಖೀಂಪುರಕ್ಕೆ ಭೇಟಿ ನೀಡಲು ರಾಹುಲ್ಗೆ ಪೊಲೀಸರು ಅನುಮತಿಸಿದರು.
ಈ ನಡುವೆ, ಸೀತಾಪುರದಲ್ಲಿ ಬಂಧನದಲ್ಲಿದ್ದ ರಾಹುಲ್ ಗಾಂಧಿ ಸೋದರಿ ಪ್ರಿಯಾಂಕಾ ಅವರನ್ನು ಪೊಲೀಸರು ಬಂಧಮುಕ್ತಗೊಳಿಸಲಾಗಿತ್ತು. ಮಾರ್ಗಮಧ್ಯೆ ರಾಹುಲ್ ಅವರು ಪ್ರಿಯಾಂಕಾ ಅವರನ್ನೂ ತಮ್ಮ ಜತೆಗೆ ಲಖೀಂಪುರಕ್ಕೆ ಕರೆದೊಯ್ದರು. ಬಳಿಕ ಪ್ರಿಯಾಂಕಾ ಹಾಗೂ ರಾಹುಲ್ ಅವರು ರಾತ್ರಿ ವೇಳೆ ಕೆಲವು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದರು.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಇತ್ತೀಚೆಗೆ ರೈತರ ಮೇಲೆ ನಡೆದ ಹಿಂಸಾಚಾರ ಪ್ರಕರಣದ ಸಂತ್ರಸ್ತ ಕುಟುಂಬಗಳನ್ನು ಬುಧವಾರ ರಾತ್ರಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ಸಂತೈಸಿದರು.
ಪಾಲಿಯಾ ಗ್ರಾಮದ ಲವ್ಪ್ರೀತ್ ಸಿಂಗ್ ಎಂಬ ಮೃತ ರೈತನ ಮನೆಗೆ ಆಗಮಿಸಿದ ಉಭಯ ನಾಯಕರು ಸಂತಾಪ ಸೂಚಿಸಿದರು ಹಾಗೂ ಉಭಯ ನಾಯಕರು ಕುಟುಂಬಸ್ಥರನ್ನು ಬಿಗಿದಪ್ಪಿ ಸಾಂತ್ವನ ಹೇಳಿದರು ಹಾಗೂ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ಈ ವೇಳೆ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, ಕಾಂಗ್ರೆಸ್ ನೇತಾರ ದೀಪೇಂದರ್ ಹೂಡಾ ಹಾಜರಿದ್ದರು.
ಮೊದಲು ಇವರ ಭೇಟಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿತ್ತಾದರೂ ನಂತರ ಒತ್ತಡಕ್ಕೆ ಮಣಿದು ಅನುಮತಿ ನೀಡಿತು. ಆದರೆ ಲಕ್ನೋ ಏರ್ಪೋರ್ಟ್ನಲ್ಲಿ ಸರ್ಕಾರ ವಿಧಿಸಿದ ಷರತ್ತು ವಿವಾದಕ್ಕೆ ಕಾರಣವಾಯಿತು.
ವಿಮಾನ ನಿಲ್ದಾಣದಲ್ಲಿದ್ದ ಪೊಲೀಸರು ರಾಹುಲ್ ಅವರಿಗೆ 'ಪೊಲೀಸ್ ವಾಹನದಲ್ಲಿ ಲಖೀಂಪುರಕ್ಕೆ ಭೇಟಿ ಕೊಡಬೇಕು. ಖಾಸಗಿ ವಾಹನ ಬಳಸಬೇಡಿ' ಎಂದರು. ಇದರಿಂದ ಕೋಪಗೊಂಡ ರಾಹುಲ್, 'ನನ್ನ ಪ್ರಯಾಣವನ್ನು ನಿರ್ಧರಿಸಲು ನೀವು ಯಾರು? ನಾನು ನನ್ನ ಕಾರಿನಲ್ಲಿಯೇ ಹೋಗಲು ಬಯಸುತ್ತೇನೆ' ಎಂದು ಹೇಳಿ ಧರಣಿ ಕುಳಿತರು.ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ವಾಸ್ತವಸ್ಥಿತಿ ವರದಿ ಸಲ್ಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗುರುವಾರ ಸೂಚನೆ ನೀಡಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಪ್ರಕರಣವನ್ನು ಸುಪ್ರೀಂಕೋರ್ಟ್ ನಿನ್ನೆ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಇದರಂತೆ ಇಂದು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾ.ಸೂರ್ಯಕಾಂತ್ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಪ್ರಕರಣವನ್ನು ವಿಚಾರಣೆ ನಡೆಸಿತ್ತು.
ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ನಡೆದ ಪ್ರಕರಣದ ಬಗ್ಗೆ ಸುಮೊಟೊ ದಾಖಲಿಸಿಕೊಳ್ಳಬೇಕು ಎಂದು ಇಬ್ಬರು ವಕೀಲರು ಸಿಜೆಐ ಎನ್. ವಿ.ರಮಣ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಒಬ್ಬರಾದ ಶಿವಕುಮಾರ್ ತ್ರಿಪಾಠಿ ಅವರಿಗೆ ವಾದ ಮಂಡಿಸಲು ಸುಪ್ರೀಂಕೋರ್ಟ್ ಇಂದು ಅವಕಾಶ ಮಾಡಿಕೊಟ್ಟಿತ್ತು.
ತಮ್ಮ ವಾದವನ್ನು ನ್ಯಾಯಾಲಯದ ಎದುರು ಮಂಡಿಸಿದ ತ್ರಿಪಾಠಿ, ಲಖಿಂಪುರ ಖೇರಿಯ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಪ್ರಜಾಪ್ರಭುತ್ವದ ಹಕ್ಕು ರಕ್ಷಣೆ ಮಾಡಲಿಲ್ಲ. ಆರೋಪಿಗಳ ವಿರುದ್ಧ ಕೂಡಲೇ ಎಫ್ಐಆರ್ ದಾಖಲು ಮಾಡಬೇಕು ಎಂದು ಹೇಳಿದ್ದರು.
ಅದಕ್ಕೆ ಪ್ರತಿಯಾಗಿ ಸುಪ್ರೀಂಕೋರ್ಟ್ ಪೀಠ, ಈಗಾಗಲೇ ಎಫ್ಐಆರ್ ದಾಖಲಾಗಿದ್ದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿತು.












Click it and Unblock the Notifications