Gen Z ಪೀಳಿಗೆಯವರಲ್ಲಿ ಅಸಹನೆ ಹೆಚ್ಚಾಗಲು ಪೋಷಕರು ಕಾರಣವೇ?: ವೈರಲ್ ವಿಡಿಯೋದಲ್ಲಿದೆ ಅಚ್ಚರಿಯ ಸತ್ಯ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪಾಡ್‌ಕಾಸ್ಟ್ ವಿಡಿಯೋಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿವೆ. ಅದರಲ್ಲೂ ಯುವಜನತೆಯ ಮನಸ್ಥಿತಿ, ವೃತ್ತಿಜೀವನ ಮತ್ತು ಜೀವನಶೈಲಿಗೆ ಸಂಬಂಧಿಸಿದ ವಿಡಿಯೋಗಳಾದರೇ ಬಹು ಬೇಗನೇ ವೈರಲ್ ಆಗುತ್ತಿವೆ. ಇದೀಗ ಜೆನ್-ಝೀ (Gen Z) ಅಂದರೆ ಪ್ರಸ್ತುತ ಯುವ ಪೀಳಿಗೆಯಲ್ಲಿ ಕಂಡುಬರುತ್ತಿರುವ 'ಅಸಹನೆ' ಬಗ್ಗೆ ಚರ್ಚಿಸುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಯುವಜನರಲ್ಲಿ ತಾಳ್ಮೆ ಕಡಿಮೆಯಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅವರ ಪೋಷಕರು ಎಂಬ ವಾದವನ್ನು ಈ ವಿಡಿಯೋದಲ್ಲಿ ಮಂಡಿಸಲಾಗಿದೆ.
ಪಾಡ್‌ಕಾಸ್ಟ್‌ನ ಒಂದು ಸಣ್ಣ ತುಣುಕು ವೈರಲ್ ಆಗಿದ್ದು, ಅದರಲ್ಲಿ ಇಬ್ಬರು ವ್ಯಕ್ತಿಗಳು ಜನ್-ಝೀ ಪೀಳಿಗೆಯ ನಡವಳಿಕೆಗಳ ಬಗ್ಗೆ ಮಾತನಾಡಿದ್ದಾರೆ. ವಿಡಿಯೋದಲ್ಲಿರುವ ಮೊದಲನೆಯ ವ್ಯಕ್ತಿ, "ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಯಾವುದೇ ಅನಾನುಕೂಲತೆಯನ್ನು ಸಹಿಸಿಕೊಳ್ಳಲು ಇಷ್ಟಪಡುವುದಿಲ್ಲ. ಸ್ವಲ್ಪ ಕಷ್ಟ ಅಥವಾ ಅನಾನುಕೂಲ ಎದುರಾದರೂ ಅವರು ಬಹಳ ಬೇಗನೆ ಬೇರೆಡೆಗೆ ಸ್ವಿಚ್ ಆಗುತ್ತಾರೆ. ಸ್ವಲ್ಪ ಅನಾನುಕೂಲತೆ ಕಂಡುಬಂದರೆ, ನಾವು ಅದನ್ನು ಸಹಿಸಿಕೊಳ್ಳಲು ಸಿದ್ಧರಿರುವುದಿಲ್ಲ. ಇದು ಒಂದು ಸಮಸ್ಯೆಯೆ?" ಎಂದು ಪ್ರಶ್ನಿಸುತ್ತಾರೆ.

ಇದಕ್ಕೆ ಉತ್ತರಿಸುವ ಮತ್ತೊಬ್ಬರು, "ಇದು ಬಹಳ ದೊಡ್ಡ ಸಮಸ್ಯೆ. ಈ ಸಮಸ್ಯೆಯ ಮೂಲ ಕಾರಣವೇ ಪೋಷಕರು," ಎನ್ನುತ್ತಾರೆ. ಇದನ್ನು ವಿವರಿಸುವಂತೆ ಕೇಳಿದಾಗ, "ನಮಗೆ ಸಿಗದಿದ್ದನ್ನು ನಮ್ಮ ಮಕ್ಕಳಿಗೆ ಕೊಡುತ್ತೇವೆ, ಅವರು ಯಾವುದೇ ಕಷ್ಟ ಪಡಬಾರದು ಎಂಬ ನೆಪದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಅತಿಯಾಗಿ ರಕ್ಷಿಸಿದ್ದಾರೆ (Over-protection). ಇದೇ ಈ ಸಮಸ್ಯೆಗೆ ಮೂಲ ಕಾರಣ," ಎಂದು ಹೇಳಿದ್ದಾರೆ.
ಈ ಮಾತುಗಳು ಪ್ರಸ್ತುತ ಸಮಾಜದ ನಿಜವಾದ ಚಿತ್ರಣವಲ್ಲವೇ?. ಹಿಂದಿನ ತಲೆಮಾರಿನ ಜನರು ಕಷ್ಟಪಟ್ಟು ಮೇಲೆ ಬಂದಿರುತ್ತಾರೆ. ತಮಗೆ ಎದುರಾದ ಆರ್ಥಿಕ ಸಂಕಷ್ಟಗಳು, ಸೌಲಭ್ಯಗಳ ಕೊರತೆ ತಮ್ಮ ಮಕ್ಕಳಿಗೆ ಎದುರಾಗಬಾರದು ಎಂಬುದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ. ಹೀಗಾಗಿ, ಅವರು ತಮ್ಮ ಮಕ್ಕಳಿಗೆ ಕೇಳಿದ್ದನ್ನೆಲ್ಲಾ ಕೊಡಿಸಿ, ಅವರನ್ನು ಒಂದು 'ಕಂಫರ್ಟ್ ಝೋನ್'ನಲ್ಲಿ ಬೆಳೆಸುತ್ತಾರೆ. ಇದರಿಂದಾಗಿ ಮಕ್ಕಳಿಗೆ ಕಷ್ಟ, ಸೋಲು, ನಿರಾಕರಣೆ ಅಥವಾ ಯಾವುದೇ ಸಣ್ಣ ಅನಾನುಕೂಲತೆಯನ್ನು ಎದುರಿಸುವ ಶಕ್ತಿಯೇ ಇಲ್ಲದಂತಾಗುತ್ತದೆ.
ಪೋಷಕರು ಮಕ್ಕಳ ಮೇಲೆ ಪ್ರೀತಿ ತೋರುವುದು, ಅವರಿಗೆ ಉತ್ತಮ ಭವಿಷ್ಯ ರೂಪಿಸುವ ಸಲುವಾಗಿ ಕಷ್ಟ ಪಡುವುದು ಖಂಡಿತಾ ತಪ್ಪಲ್ಲ. ಆದರೆ, ಅತ್ಯಂತ ಸೂಕ್ಷ್ಮ ಮತ್ತು ಕಷ್ಟಗಳೇ ಅರಿಯದಂತೆ ಬೆಳೆಸುವುದು ಮಕ್ಕಳ ಭವಿಷ್ಯದ ವ್ಯಕ್ತಿತ್ವ ವಿಕಸನಕ್ಕೆ ಮಾರಕವಾಗಬಹುದು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸ್ವತಃ ಎದುರಿಸಲು ಬಿಡುವುದು, ಸೋಲುಗಳನ್ನು ಒಪ್ಪಿಕೊಳ್ಳಲು ಕಲಿಸುವುದು ಇಂದಿಗೆ ತುಂಬ ಅಗತ್ಯವಿದೆ.












Click it and Unblock the Notifications