ಲಖಿಂಪುರ ಖೇರಿ ಹಿಂಸಾಚಾರ: 'ರೈತರನ್ನು ಕೊಲ್ಲಲು ಮಾಡಿದ ಯೋಜಿತ ಷಡ್ಯಂತ್ರ' ಎಂದ ಎಸ್‌ಐಟಿ
ಲಕ್ನೋ, ಡಿಸೆಂಬರ್ 14: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರವು, "ರೈತರನ್ನು ಕೊಲ್ಲುವ ಉದ್ದೇಶದಿಂದ ಮಾಡಲಾದ ಯೋಜಿತ ಷಡ್ಯಂತ್ರ," ಎಂದು ವಿಶೇಷ ತನಿಖಾ ತಂಡವು (ಎಸ್‌ಐಟಿ) ತಿಳಿಸಿದೆ. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು ಸದ್ಯ ಜೈಲಿನಲ್ಲಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕಾರು ಹರಿದು ಸಂಭವಿಸಿದ ರೈತರ ಸಾವು ಯೋಜಿತ ಕೃತ್ಯವಾಗಿದೆ. ಉಡಾಫೆಯಿಂದಾಗಿ ನಡೆದ ಸಾವು ಪ್ರಕರಣ ಇದಲ್ಲ, ಇದು ಪೂರ್ಣವಾಗಿ ಯೋಜಿತ ಕೃತ್ಯ ಎಂದು ಎಸ್‌ಐಟಿ ಹೇಳುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕೊಂಚ ಹಿನ್ನೆಲೆ ಆಗುವ ಸಾಧ್ಯತೆಯನ್ನು ಉಂಟು ಮಾಡಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರಿಗೆ ಸೇರಿದ ಕಾರು ರೈತರ ಮೇಲೆ ಹರಿದು ಹೋಗಿದ್ದು, ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಈ ಘಟನೆಯ ಬಳಿಕ ನಡೆದ ಹಿಂಸಾಚಾರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಕೂಡಾ ಸಾವನ್ನಪ್ಪಿದ್ದು ಲಿಖಿಂಪುರ ಘಟನೆಯಲ್ಲಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಓರ್ವ ಪತ್ರಕರ್ತ ಆಗಿದ್ದಾನೆ. ಕೇಂದ್ರ ಸಚಿವ ಅಜಯ್ ಮಿಶ್ರಾರಿಗೆ ಸೇರಿದ ಈ ಕಾರಿನಲ್ಲಿ ಸಚಿವ ಪುತ್ರ ಆಶಿಶ್ ಮಿಶ್ರಾ ಕೂಡಾ ಇದ್ದರು ಎಂಬ ಆರೋಪದ ಹಿನ್ನೆಲೆ ಈಗಾಗಲೇ ಆಶಿಶ್ ಮಿಶ್ರಾರನ್ನು ಬಂಧನ ಮಾಡಲಾಗಿದೆ.

ಈ ಬಗ್ಗೆ ಕೋರ್ಟ್‌ಗೆ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡಿರುವ ವಿಶೇಷ ತನಿಖಾ ತಂಡ ಈಗಾಗಲೇ ವೇಗವಾಗಿ ವಾಹನ ಓಡಿಸಿದ ಆರೋಪದ ಮೇಲೆ ಆಶಿಶ್ ಮಿಶ್ರಾ ಹಾಗೂ ಇತರೆ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆಯು ನಡೆಯುತ್ತಿದೆ ಎಂದು ತಿಳಿಸಿದ ತನಿಖಾ ತಂಡವು ಇನ್ನು ಹೆಚ್ಚಾಗಿ ಕೊಲೆ ಯತ್ನ ಹಾಗೂ ಸ್ವಯಂಪ್ರೇರಣೆಯಿಂದ ಇತರರಿಗೆ ನೋವುಂಟು ಮಾಡುವ ಆರೋಪದಡಿ ಪ್ರಕರಣವನ್ನು ಕೂಡಾ ದಾಖಲು ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಇನ್ನು ಆಶಿಶ್ ಮಿಶ್ರಾ ಹಾಗೂ ಇತರರು ಈಗಾಗಲೇ ಕೊಲೆ ಹಾಗೂ ಯೋಚಿತ ಕೃತ್ಯದ ಆರೋಪದಲ್ಲಿ ಬಂಧಿತರಾಗಿದ್ದಾರೆ.
ಯೋಜಿತ ಕೃತ್ಯದಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ?
ಲಖಿಂಪುರದಲ್ಲಿ ರೈತರ ಈ ಹತ್ಯೆಯು ಈಗಾಗಲೇ ರೈತ ವರ್ಗದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಆಡಳಿತವಿರುವ ಕೇಂದ್ರ ಸರ್ಕಾರದ ಸಚಿವರ ಪುತ್ರನು ಈ ಕೃತ್ಯದಲ್ಲಿ ಪ್ರಮುಖ ಆರೋಪಿ ಆಗಿದ್ದಾನೆ. ಈ ನಡುವೆ ತನಿಖಾ ತಂಡವು ಇದು ಯೋಜಿತ ಕೃತ್ಯ ಎಂದು ಹೇಳಿದೆ. ಬಿಜೆಪಿ ನಾಯಕನ ಪುತ್ರ ಮಾಡಿಸಿದ ಯೋಜಿತ ಕೃತ್ಯ ಎಂಬುವುದು ಸಾಬೀತಾದರೆ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಈ ಘಟನೆಯು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಕೂಡಾ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳು ಈ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ, ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಲೇ ಇದೆ. ಇನ್ನು ಈ ವೈರಲ್ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ಕೂಡಾ ಕಾಣಿಸಿಕೊಂಡಿದ್ದು, ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಕಳೆದ ತಿಂಗಳಷ್ಟೇ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರೂಪಿಸಿದೆ. ಉತ್ತರ ಪ್ರದೇಶಕ್ಕೆ ಸೇರದ ಅಧಿಕಾರಿಗಳನ್ನು ಈ ತಂಡಕ್ಕೆ ಸುಪ್ರೀಂ ಸೇರಿಸಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತಿರುಚುವ ಸಾಧ್ಯತೆ ಹಿನ್ನೆಲೆಯಿಂದಾಗಿ ಈ ಪ್ರಕರಣದ ತನಿಖೆಯನ್ನು ವಿಶೇಷ ಅಧಿಕಾರಿಗಳಿಗೆ ನೀಡಲಾಗಿದೆ.












Click it and Unblock the Notifications