ದೇಶವು ಬಿಪಿನ್ ರಾವತ್ ಅಗಲಿಕೆ ನೋವಿನಲ್ಲಿದ್ದರೂ, ನಿಂತಲ್ಲೇ ನಿಲ್ಲುವುದಿಲ್ಲ: ಮೋದಿ
ಲಕ್ನೋ, ಡಿಸೆಂಬರ್ 11: "ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದ 13 ಜನರನ್ನು ಕಳೆದುಕೊಂಡಿರುವ ಭಾರತವು ಅತೀವ ನೋವು ಮತ್ತು ದುಃಖದಲ್ಲಿದೆ, ಆದರೆ ನಮ್ಮ ಅಭಿವೃದ್ಧಿಯ ವೇಗ ಮಾತ್ರ ಯಾವುದೇ ಕಾರಣಕ್ಕೂ ಕಡಿಮೆ ಆಗುವುದಿಲ್ಲ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಸರಯೂ ನಹಲ್ ರಾಷ್ಟ್ರೀಯ ಯೋಜನೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಭಾರತ ಎಂದಿಗೂ ನಿಲ್ಲುವುದಿಲ್ಲ. ದೇಶವು ಯಾವಾಗಲೂ ಸ್ಥಿರವಾಗಿ ಒಂದು ಕಡೆಗೆ ನಿಲ್ಲುವುದಿಲ್ಲ. ನಮ್ಮ ದೇಶದ ಒಳ ಮತ್ತು ಹೊರಗಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದರು.
ದೇಶದ ನದಿಗಳ ನೀರನ್ನು ಬಳಸಿಕೊಳ್ಳುವುದು, ರೈತರ ಹೊಲಗಳಿಗೆ ಸಮರ್ಪಕ ನೀರು ಪೂರೈಸುವುದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. 'ಆಲೋಚನೆ ಪ್ರಾಮಾಣಿಕವಾದಾಗ ಕೆಲಸವೂ ಗಟ್ಟಿಯಾಗುತ್ತದೆ ಎಂಬುದಕ್ಕೆ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆ ಪೂರ್ಣಗೊಂಡಿರುವುದೇ ಸಾಕ್ಷಿ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

5 ದಶಕಗಳ ಕೆಲಸ, 5 ವರ್ಷದಲ್ಲೇ ಆಗಿದೆ
ಉತ್ತರ ಪ್ರದೇಶ ಚುನಾವಣೆ ಹೊಸ್ತಿಲಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಉಲ್ಲೇಖಿಸಿದ್ದಾರೆ. ಸರಯು ಕಾಲುವೆ ಯೋಜನೆಯಲ್ಲಿ ನಾವು 5 ದಶಕಗಳಲ್ಲಿ ಮಾಡಿದ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು ಕಳೆದ 5 ವರ್ಷಗಳಲ್ಲಿ ಮಾಡಿದ್ದೇವೆ. "ಇದು ಡಬಲ್ ಎಂಜಿನ್ ಸರ್ಕಾರ, ಇದು ಡಬಲ್ ಎಂಜಿನ್ ಸರ್ಕಾರದ ಕೆಲಸದ ವೇಗ," ಎಂದು ಪ್ರಧಾನಿ ಮೋದಿ ಹೇಳಿದರು.

ಜನರಲ್ ಬಿಪಿನ್ ರಾವತ್ ಅವರನ್ನು ಸ್ಮರಿಸಿದ ಮೋದಿ
ಸರಯು ನಹರ್ ರಾಷ್ಟ್ರೀಯ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜನರಲ್ ಬಿಪಿನ್ ರಾವತ್ ರನ್ನು ಸ್ಮರಿಸಿಕೊಂಡರು. ಮುಂದಿನ ದಿನಗಳಲ್ಲಿ ಬಿಪಿನ್ ರಾವತ್ ಅವರು ಬಿಟ್ಟು ಹೋಗಿರುವ ಅತ್ಯಾಧುನಿಕತೆ ಮತ್ತು ಆವಿಷ್ಕಾರಗಳಿಂದ ಮತ್ತಷ್ಟು ಮುಂದೆ ಹೋಗುವುದನ್ನು ನೋಡುತ್ತಾರೆ ಎಂದರು.
ಇದೇ ವೇಳೆ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಜೀವ ಉಳಿಸಲು ವೈದ್ಯರು ಶ್ರಮಿಸುತ್ತಿದ್ದಾರೆ. "ಅವರ ಜೀವ ಉಳಿಯಲಿ ಎಂದು ನಾನು ತಾಯಿ ಪಟೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ಇಡೀ ರಾಷ್ಟ್ರವೇ ಅವರ ಕುಟುಂಬದೊಂದಿಗೆ ನಿಂತಿದೆ. ಆ ವೀರ ಸೈನಿಕರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ದೇಶವೂ ನಿಂತಿದೆ," ಎಂದು ಪ್ರಧಾನಿ ಮೋದಿ ಹೇಳಿದರು.

18ರಲ್ಲಿ 17 ಯೋಜನೆಗಳು ಪೂರ್ಣ
"ಉತ್ತರ ಪ್ರದೇಶದ 18 ಯೋಜನೆಗಳಲ್ಲಿ 17 ಯೋಜನೆಗಳು ಪೂರ್ಣಗೊಂಡಿವೆ. ಇದರೊಂದಿಗೆ ರಾಜ್ಯದ 9 ಜಿಲ್ಲೆಗಳ ಸುಮಾರು 15 ಲಕ್ಷ ಹೆಕ್ಟೇರ್ ಭೂಮಿ ಈಗ ನೀರಾವರಿಗೆ ಉತ್ತಮ ಮಾರ್ಗವನ್ನು ಕಂಡುಕೊಂಡಿಂತೆ ಆಗಿದೆ, ಇದರಿಂದಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುತ್ತಿದೆ," ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

29 ಲಕ್ಷ ರೈತರಿಗೆ ನೀರಾವರಿ ಸೌಲಭ್ಯದ ಪ್ರಯೋಜನ
ಸರಯು ನಹರ್ ರಾಷ್ಟ್ರೀಯ ಯೋಜನೆಯ ಉದ್ಘಾಟಿಸಿದ ಪ್ರಧಾನಿ ಮೋದಿ, ದೇಶದ ನದಿ ನೀರನ್ನು ಬಳಸಿಕೊಂಡು ಹೊಲಗಳಿಗೆ ಪೂರೈಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಯೋಜನೆಯು 14 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದರ ಮೂಲಕ ಈ ಪ್ರದೇಶದ ಸುಮಾರು 29 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ. ಒಟ್ಟು 9,800 ಕೋಟಿ ರೂಪಾಯಿ ವೆಚ್ಚದಲ್ಲಿ ಈ ನಿರ್ಮಿಸಲಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 4,600 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಒದಗಿಸಲಾಗಿದೆ ಎಂದು ಪ್ರಧಾನಮಂತ್ರಿ ಸಚಿವಾಲಯ ತಿಳಿಸಿದೆ.












Click it and Unblock the Notifications