ಎಐ ಕ್ಷೇತ್ರದಲ್ಲಿ TCS ಮಹತ್ವದ ಹೆಜ್ಜೆ: 50,000 ಉದ್ಯೋಗಿಗಳಿಗೆ ನೇರ ತರಬೇತಿ, ಆಂಥ್ರೋಪಿಕ್ ಜೊತೆ ಮೆಗಾ ಡೀಲ್
ಭಾರತದ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಬೃಹತ್ ಒಪ್ಪಂದವೊಂದಕ್ಕೆ ಟಿಸಿಎಸ್ ಸಹಿ ಹಾಕಿದೆ.
'ಕ್ಲೌಡ್ ಎಐ' ಎಂಬ ಅತ್ಯಾಧುನಿಕ ಹಾಗೂ ಜನಪ್ರಿಯ ಎಐ ವೇದಿಕೆಯನ್ನು ಸೃಷ್ಟಿಸಿರುವ ಅಮೆರಿಕದ ಮುಂಚೂಣಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಂಪನಿ 'ಆಂಥ್ರೋಪಿಕ್' ಜೊತೆಗೆ ಟಿಸಿಎಸ್ ಜಾಗತಿಕ ಮಟ್ಟದ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಈ ಬೃಹತ್ ಒಪ್ಪಂದದ ಹಿಂದಿನ ಉದ್ದೇಶವೇನು? ಇದರಿಂದ ಟಿಸಿಎಸ್ ಸಂಸ್ಥೆಗೆ ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಉದ್ಯೋಗಿಗಳಿಗೆ ಆಗುವ ಲಾಭವೇನು? ಎಂಬ ಕುತೂಹಲ ಐಟಿ ವಲಯದಲ್ಲಿ ಹೆಚ್ಚಾಗಿದೆ.

ಐಟಿ ವಲಯದಲ್ಲಿ ನಡೆಯುತ್ತಿರುವ ಈ 'ಸೈಲೆಂಟ್ ಕ್ರಾಂತಿ'ಯಿಂದಾಗಿ ಟಿಸಿಎಸ್ ಸಂಸ್ಥೆಯ ಎಐಗೆ ಸಂಬಂಧಿಸಿದ ವ್ಯವಹಾರದಲ್ಲಿ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಆಂಥ್ರೋಪಿಕ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದದ ಮೂಲಕ, ಪ್ರಪಂಚದಾದ್ಯಂತ ಇರುವ ತನ್ನ ಗ್ರಾಹಕ ಸಂಸ್ಥೆಗಳಿಗೆ ನೀಡುವ ಸೇವೆಗಳಲ್ಲಿ ಎಐ ತಂತ್ರಜ್ಞಾನವನ್ನು ಅತ್ಯಂತ ಸುಲಭವಾಗಿ ಹಾಗೂ ಬೃಹತ್ ಪ್ರಮಾಣದಲ್ಲಿ ಅಳವಡಿಸಲು ಟಿಸಿಎಸ್ ಸಜ್ಜಾಗಿದೆ.
50,000 ಉದ್ಯೋಗಿಗಳಿಗೆ ನೇರ ತರಬೇತಿ
ಈ ಮಹತ್ವದ ಪಾಲುದಾರಿಕೆಯ ಪ್ರಮುಖ ಭಾಗವಾಗಿ, ಟಿಸಿಎಸ್ ತನ್ನದೇ ಆದ ತಾಂತ್ರಿಕ ಸೇವಾ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ತನ್ನ ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 50,000 ಉದ್ಯೋಗಿಗಳಿಗೆ ಕ್ಲೌಡ್ ಎಐ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನೇರ ಅನುಮತಿಯನ್ನು ನೀಡಲಿದೆ. ವಿಶೇಷವಾಗಿ ಎಂಜಿನಿಯರಿಂಗ್, ಹಣಕಾಸು, ಕಾನೂನು, ಮಾರುಕಟ್ಟೆ ಮತ್ತು ಮಾರಾಟ ವಿಭಾಗಗಳ ಉದ್ಯೋಗಿಗಳಿಗೆ ಈ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ಸಿಗಲಿದೆ.
ಇದರ ಪರಿಣಾಮವಾಗಿ ಟಿಸಿಎಸ್ ಉದ್ಯೋಗಿಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ನೇರವಾದ, ಪ್ರಾಯೋಗಿಕ ಅನುಭವವನ್ನು ಪಡೆಯಲಿದ್ದಾರೆ. ಇಷ್ಟೇ ಅಲ್ಲದೆ, ತಮ್ಮ ಅಂತರಾಷ್ಟ್ರೀಯ ಗ್ರಾಹಕರಿಗೆ ಅತ್ಯಾಧುನಿಕ ಎಐ ಆಧಾರಿತ 'ಟ್ರಾನ್ಸ್‌ಫಾರ್ಮೇಷನ್' ಯೋಜನೆಗಳನ್ನು ಅತ್ಯಂತ ನವೀನ ರೀತಿಯಲ್ಲಿ ವಿನ್ಯಾಸಗೊಳಿಸಿಕೊಡಲು ಈ ತರಬೇತಿ ನೆರವಾಗಲಿದೆ. ಎಐ ಯೋಜನೆಗಳನ್ನು ಕೇವಲ ಪ್ರಾಯೋಗಿಕ ಅಥವಾ ಪರೀಕ್ಷಾ ಹಂತಕ್ಕೆ ಸೀಮಿತಗೊಳಿಸದೆ, ಅವುಗಳನ್ನು ಸಂಪೂರ್ಣವಾಗಿ ವಾಣಿಜ್ಯ ಬಳಕೆಗೆ ಅಳವಡಿಸುವುದು ಈ ಒಪ್ಪಂದದ ಪ್ರಮುಖ ಗುರಿಯಾಗಿದೆ.
ಟಿಸಿಎಸ್ ಐಓಎನ್ ಮೂಲಕ ಹೊಸ ಹೆಜ್ಜೆ
ಉದ್ಯೋಗಿಗಳಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲೂ ಟಿಸಿಎಸ್ ಮುಂದಾಗಿದೆ. ಟಿಸಿಎಸ್ ಸಂಸ್ಥೆಯ ವಿಶ್ವವಿಖ್ಯಾತ ಶಿಕ್ಷಣ ಹಾಗೂ ಪರೀಕ್ಷಾ ವೇದಿಕೆಯಾದ 'ಟಿಸಿಎಸ್ ಐಓಎನ್' ಇನ್ನು ಮುಂದೆ ಕ್ಲೌಡ್ ಎಐ ಮಾಡೆಲ್‌ಗಳ ಕುರಿತಾದ ವಿಶೇಷ ತರಬೇತಿ ಮತ್ತು ಪ್ರಮಾಣೀಕರಣ ಕೋರ್ಸ್‌ಗಳನ್ನು ಆರಂಭಿಸಲಿದೆ. ಈ ಕೋರ್ಸ್‌ಗಳು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಲಭ್ಯವಾಗಲಿವೆ.
ಈ ವಿನೂತನ ಉಪಕ್ರಮದ ಮೂಲಕ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ ಹೊಸ ತಲೆಮಾರಿನ ನುರಿತ ಉದ್ಯೋಗಿಪಡೆಯನ್ನು ಭಾರತದಲ್ಲೇ ಸೃಷ್ಟಿಸುವ ಗುರಿಯನ್ನು ಟಾಟಾ ಸಮೂಹ ಹೊಂದಿದೆ. ಭವಿಷ್ಯದಲ್ಲಿ ಜಾಗತಿಕ ಐಟಿ ಕಂಪನಿಗಳಲ್ಲಿ ಇಂತಹ ಪ್ರತಿಭಾವಂತ ಯುವಕರಿಗೆ ಉನ್ನತ ಮಟ್ಟದ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.












Click it and Unblock the Notifications