ನೇಲ್ ಕಟ್ಟರ್ ಹಿಂಭಾಗದಲ್ಲಿರುವ ರಂಧ್ರದ ಕೆಲಸವೇನು? ಯಾವ ಪ್ರಯೋಜನಕ್ಕಾಗಿ ಅದನ್ನು ಇಟ್ಟಿರುತ್ತಾರೆ?
ನೈಲ್ ಕಟರ್ ಅಥವಾ ನೈಲ್ ಕ್ಲಿಪ್ಪರ್ ಅನ್ನು ಕೈ ಮತ್ತು ಕಾಲ್ಬೆರಳುಗಳ ಉಗುರುಗಳನ್ನು ಕತ್ತರಿಸಲು ಉಪಯೋಗಿಸಲಾಗುತ್ತದೆ. ಉಗುರು ಕತ್ತರಿಸಿದ ನಂತರ ಉಗುರಿಗೊಂದು ಚಂದದ ಶೇಪ್ ನೀಡಲು ಕೂಡಾ ಇದು ಬಳಕೆಯಾಗುತ್ತದೆ. ಒಂದೇ ಪದದಲ್ಲಿ ಹೇಳುವುದಾದರೆ ಇದೊಂದು ಅತ್ಯಗತ್ಯ ವೈಯಕ್ತಿಕ ನೈರ್ಮಲ್ಯದ ಸಾಧನವಾಗಿದೆ. ಇದು ಉಗುರುಗಳ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಸೇರಿಕೊಳ್ಳದಂತೆ ತಡೆದು ಸೋಂಕುಗಳಿಂದ ರಕ್ಷಿಸುತ್ತದೆ.
ನಮ್ಮ ದೈನಂದಿನ ಜೀವನದಲ್ಲಿ ವೈಯಕ್ತಿಕ ನೈರ್ಮಲ್ಯಕ್ಕಾಗಿ ಬಳಸುವ ವಸ್ತುಗಳಲ್ಲಿ ಉಗುರು ಕಟ್ಟರ್ ಒಂದು. ಇದು ಇಲ್ಲದ ಮನೆಯೇ ಇಲ್ಲ ಎಂದರೂ ತಪ್ಪಲ್ಲ. ನಾವೆಲ್ಲರೂ ನಮ್ಮ ಉಗುರುಗಳನ್ನು ಕತ್ತರಿಸಲು ಇದನ್ನು ನಿಯಮಿತವಾಗಿ ಬಳಸುತ್ತೇವೆ. ಆದರೆ ಈ ಸಣ್ಣ ಉಗುರು ಕಟ್ಟರ್‌ನ ವಿನ್ಯಾಸವನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ಅದರ ಹಿಂಭಾಗದಲ್ಲಿ ಒಂದು ಸಣ್ಣ ರಂಧ್ರವಿದೆ. ಇದು ಸಣ್ಣ ವಿಷಯದಂತೆ ತೋರುತ್ತದೆಯಾದರೂ, ಇದರ ಪ್ರಯೋಜನ ಬಹಳ ದೊಡ್ಡದಿದೆ. ವಾಸ್ತವವಾಗಿ ಈ ರಂಧ್ರವನ್ನು ಯಾವ ಉದ್ದೇಶಕ್ಕಾಗಿ ನೀಡಲಾಗಿದೆ ಎನ್ನುವುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಇದನ್ನು ಕೀಚೈನ್ ಅನ್ನು ನೇತುಹಾಕಲು ಮಾತ್ರ ನೀಡಲಾಗಿದೆ ಎಂದು ಹೇಳಿದರೆ ನಿಮ್ಮ ಊಹೆ ಖಂಡಿತಾ ತಪ್ಪು. ಇನ್ನೂ ಅನೇಕ ಕಾರಣಗಳಿಗಾಗಿ ಈ ರಂಧ್ರವನ್ನು ನೀಡಲಾಗಿದೆ.

1.ಕೀಚೈನ್ ಲಾಕಿಂಗ್ ಸಿಸ್ಟಮ್: ಮೊದಲನೆಯದಾಗಿ, ಎಲ್ಲರಿಗೂ ತಿಳಿದಿರುವಂತೆ, ಈ ರಂಧ್ರವು ನೇಲ್ ಕಟ್ಟರ್ ಅನ್ನು ಕೀಚೈನ್ ಆಗಿ ಬಳಸಲು ಉಪಯುಕ್ತವಾಗಿದೆ. ಪ್ರಯಾಣ ಮಾಡುವಾಗ ಅಥವಾ ಹೊರಗೆ ಹೋಗುವಾಗ ನಿಮ್ಮ ಬೈಕ್ ಕೀಗಳು ಅಥವಾ ಮನೆಯ ಕೀಲಿಗಳಿಗೆ ಇದನ್ನು ಜೋಡಿಸುವ ಮೂಲಕ, ನೀವು ಅದನ್ನು ಎಲ್ಲಿಯೂ ಕಳೆದುಕೊಳ್ಳದೆ ಸುಲಭವಾಗಿ ಜೊತೆಯಲ್ಲಿಯೇ ಇಟ್ಟುಕೊಳ್ಳಬಹುದು.
2.ಉಗುರುಗಳನ್ನು ಕತ್ತರಿಸುವಾಗ ಉತ್ತಮ ಹಿಡಿತ: ಅನೇಕ ಜನರು ಉಗುರುಗಳನ್ನು ಕತ್ತರಿಸುವಾಗ ಉಗುರು ಕ್ಲಿಪ್ಪರ್ ಕೈಯಿಂದ ಜಾರಿ ಬೀಳುತ್ತಿರುತ್ತದೆ. ಕಾಲ್ಬೆರಳ ಉಗುರುಗಳನ್ನು ಕತ್ತರಿಸುವಾಗ ಸರಿಯಾಗಿ ಹಿಡತಕ್ಕೆ ಬಾರದೆ ನೈಲ್ ಕಟರ್ ಬೀಳುವುದೇ ಹೆಚ್ಚು. ಯಾಕೆಂದರೆ ಕಾಲಿನ ಬೆರಳುಗಳ ಉಗುರು ಕತ್ತರಿಸುವಾಗ ಬಾಗಿ ಕತ್ತರಿಸಬೇಕಾಗುತ್ತದೆ. ಇದು ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗಬಹುದು. ಹಿಂಭಾಗದಲ್ಲಿರುವ ರಂಧ್ರದಲ್ಲಿ ಸಣ್ಣ ದಾರ ಅಥವಾ ಕೀ ರಿಂಗ್ ಅನ್ನು ಇರಿಸುವ ಮೂಲಕ, ನಮ್ಮ ಉಗುರುಗಳನ್ನು ಕತ್ತರಿಸುವಾಗ ನಮ್ಮ ಬೆರಳುಗಳು ಹೆಚ್ಚುವರಿ ಹಿಡಿತವನ್ನು ಪಡೆಯುತ್ತವೆ. ಇದು ಉಗುರು ಕಟ್ಟರ್ ನಮ್ಮ ಕೈಯಿಂದ ಜಾರಿಕೊಳ್ಳದಂತೆ ನೋಡಿಕೊಳ್ಳುತ್ತದೆ. ನಮ್ಮ ಕೆಲಸ ಸುಲಭವಗಿ ಸರಾಗವಾಗಿ ನಡೆಯುತ್ತದೆ.
3.ಕ್ಷೌರಿಕ್ರ ನೆರವಿಗೆ: ಹಿಂದಿನ ಕಾಲದಲ್ಲಿ ಕ್ಷೌರಿಕರು ಅಥವಾ ಬ್ಯೂಟಿ ಪಾರ್ಲರ್ ವ್ಯವಸ್ಥಾಪಕರು ಈ ಸಣ್ಣದಾದ ನೈಲ್ ಕಟರ್ ಪದೇ ಪದೇ ಕಳೆದುಹೋಗದಂತೆ ತಡೆಯಲು ಈ ರಂಧ್ರದ ಮೂಲಕ ಉದ್ದವಾದ ದಾರ ಅಥವಾ ಲ್ಯಾನ್ಯಾರ್ಡ್ ಕಟ್ಟುತ್ತಿದ್ದರು. ನಂತರ ಇದನ್ನು ಗೋಡೆಯ ಮೇಲೆ ನೇತುಹಾಕುತ್ತಿದ್ದರು. ಗ್ರಾಹಕರು ಕೆಲಸ ಮುಗಿಸಿದ ನಂತರ ಅದನ್ನು ಮತ್ತೆ ಅದೇ ಸ್ಥಳದಲ್ಲಿ ನೈಲ್ ಕಟರ್ ಅನ್ನು ನೇತುಹಾಕಲು ಸಹಾಯ ಮಾಡುತ್ತಿತ್ತು.
4.ಉತ್ಪಾದನಾ ಪ್ರಕ್ರಿಯೆಯಲ್ಲಿ ಸಹಾಯ: ಕಾರ್ಖಾನೆಗಳಲ್ಲಿ ನೈಲ್ ಕಟ್ಟರ್‌ಗಳು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲ್ಪಟ್ಟಾಗ, ನೂರಾರು ನೈಲ್ ಕಟ್ಟರ್‌ಗಳನ್ನು ಏಕಕಾಲದಲ್ಲಿ ದೊಡ್ಡ ತಂತಿಯ ಮೇಲೆ ಥ್ರೆಡ್ ಮಾಡಿ ಸ್ವಚ್ಛಗೊಳಿಸಬೇಕಾಗುತ್ತದೆ. ರಾಸಾಯನಿಕವಾಗಿ ಪಾಲಿಶ್ ಮಾಡಬೇಕು ಮತ್ತು ಬಿಸಿ ಮಾಡಬೇಕು. ಹಿಂಭಾಗದಲ್ಲಿರುವ ಈ ರಂಧ್ರವು ಎಂಜಿನಿಯರ್‌ಗಳಿಗೆ ಸತತವಾಗಿ ಸಾವಿರಾರು ತುಣುಕುಗಳನ್ನು ಜೋಡಿಸಲು ಮತ್ತು ಪಾಲಿಶ್ ಮಾಡಲು ಸಹಾಯ ಮಾಡುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications