Air India Crashಗೆ ಒಂದು ವರ್ಷ: ಗುಜರಾತ್ ರೈತನಿಗೆ ಪ್ರತಿದಿನ ಬರುತ್ತೆ ಪಾಕ್ ಯುವಕನ ಕರೆ

ನಾಳೆ, ಅಂದರೆ 2026ರ ಜೂನ್ 12ಕ್ಕೆ ಭೀಕರ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿ ಭರ್ತಿ ಒಂದು ವರ್ಷ ತುಂಬಲಿದೆ. ಜೂನ್ 12, 2025ರಂದು ನಡೆದ ಈ ದುರಂತದಲ್ಲಿ ನೂರಾರು ಜೀವಗಳು ಗಾಳಿಯಲ್ಲಿ ಲೀನವಾಗಿದ್ದವು. ಈ ಘಟನೆಯ ಮಾಸದ ಗಾಯಗಳ ನಡುವೆಯೇ, ಗಡಿಗಳನ್ನು ಮೀರಿದ ಮಾನವೀಯತೆಯ ಅಪರೂಪದ ಬಾಂಧವ್ಯವೊಂದು ಲಂಡನ್‌ನಿಂದ ಪ್ರತಿದಿನ ಭಾರತಕ್ಕೆ ಹರಿದುಬರುತ್ತಿದೆ. ಈ ದುರಂತದಲ್ಲಿ ಮಗನನ್ನು ಕಳೆದುಕೊಂಡ ಗುಜರಾತ್‌ನ ಬಡ ರೈತ ಕುಟುಂಬಕ್ಕೆ ಪಾಕಿಸ್ತಾನದ ಸಹೋದ್ಯೋಗಿಯೊಬ್ಬರು ನಿರಂತರ ಸಾಂತ್ವನ ನೀಡುತ್ತಾ ಭರವಸೆಯ ಬೆಳಕಾಗಿದ್ದಾರೆ.

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಥಾವರ್ ಗ್ರಾಮದ ರೈತ ಸವಧನ್ಭಾಯ್ ಚೌಧರಿ ಅವರಿಗೆ ಕಳೆದ ಒಂದು ವರ್ಷದಿಂದ ಪ್ರತಿದಿನ ಲಂಡನ್‌ನಿಂದ ಒಂದು ಕರೆ ಬರುತ್ತದೆ. ಕರೆಯನ್ನು ಸ್ವೀಕರಿಸುತ್ತಿದ್ದಂತೆ ಕೇಳಿಬರುವ ಮೊದಲ ಧ್ವನಿ, "ಕೈಸೆ ಹೋ ಆಪ್? ಟೀಕ್ ಹೋ?" (ಹೇಗಿದ್ದೀರಿ? ಆರಾಮಾಗಿದ್ದೀರಾ?). ಈ ರೀತಿ ಪ್ರೀತಿಯಿಂದ ಯೋಗಕ್ಷೇಮ ವಿಚಾರಿಸುವವರು ಬೇರೆ ಯಾರೂ ಅಲ್ಲ, ದುರಂತದಲ್ಲಿ ಮೃತಪಟ್ಟ ಸವಧನ್ಭಾಯ್ ಅವರ ಹಿರಿಯ ಮಗ ಕಮಲೇಶ್ ಅವರ ಪಾಕಿಸ್ತಾನ ಮೂಲದ ಸಹೋದ್ಯೋಗಿ ಉಮರ್ ಅಲಿ.

Air India Crash

ಲಂಡನ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಕಮಲೇಶ್ ಮತ್ತು ಉಮರ್ ಆತ್ಮೀಯ ಸ್ನೇಹಿತರಾಗಿದ್ದರು. ಕಮಲೇಶ್ ಮತ್ತು ಅವರ ಪತ್ನಿ ಧಾಪುಬೆನ್ ದುರಂತದಲ್ಲಿ ಸಾವನ್ನಪ್ಪಿದ ನಂತರ, ಉಮರ್ ಪ್ರತಿದಿನ ತಪ್ಪದೇ ಸವಧನ್ಭಾಯ್ ಅವರಿಗೆ ಕರೆ ಮಾಡಿ ಸಾಂತ್ವನ ಹೇಳುತ್ತಿದ್ದಾರೆ. ಈ ಕರೆಗಳು ಸವಧನ್ಭಾಯ್ ಕುಟುಂಬಕ್ಕೆ ಬದುಕುವ ಶಕ್ತಿಯನ್ನು ತುಂಬಿವೆ.

ಘಟನೆಯ ಹಿನ್ನೆಲೆ

2025ರ ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ (ಎಐ171) ಹಾರಾಟ ಆರಂಭಿಸಿದ ಕೇವಲ 32 ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಮೃತಪಟ್ಟರೆ, ನೆಲದ ಮೇಲಿದ್ದ 19 ಜನರು ಸೇರಿ ಒಟ್ಟು 260 ಮಂದಿ ಜೀವ ಕಳೆದುಕೊಂಡಿದ್ದರು. ಇದೇ ವಿಮಾನದಲ್ಲಿದ್ದ ಜಯಾಬೆನ್ ಅವರ ಇಬ್ಬರು ಮಕ್ಕಳಲ್ಲಿ ಅಜಯ್ ಸಾವನ್ನಪ್ಪಿದರೆ, ವಿಶ್ವಾಸ್ ಎಂಬಾತ ಮಾತ್ರ ಪವಾಡಸದೃಶವಾಗಿ ಬದುಕುಳಿದ ಏಕೈಕ ಪ್ರಯಾಣಿಕನಾಗಿದ್ದಾನೆ.

ಪ್ರಸ್ತುತ ಬ್ರಿಟನ್‌ನಲ್ಲಿ ತಮ್ಮ ಪತ್ನಿ ಮತ್ತು ಮಗನೊಂದಿಗೆ ನೆಲೆಸಿರುವ ವಿಶ್ವಾಸ್ , ವಿಮಾನ ದುರಂತದಲ್ಲಿ ತಮ್ಮ ಸಹೋದರ ಅಜಯ್‌ನನ್ನು ಕಳೆದುಕೊಂಡು ತೀವ್ರ ಮಾನಸಿಕ ಆಘಾತದಿಂದ ಬಳಲುತ್ತಿದ್ದಾರೆ. ತಾವು ಬದುಕುಳಿದರೂ ಸಹೋದರನ ಸಾವಿನಿಂದಾಗಿ ಜೀವನದ ಎಲ್ಲಾ ಸಂತೋಷವೂ ದೂರವಾಗಿದೆ ಎಂದು ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ

ಈ ದುರಂತಕ್ಕೆ ಒಂದು ವರ್ಷ ಕಳೆದಿದ್ದರೂ, ಇದರ ಸುತ್ತಲಿನ ತನಿಖೆಯ ವಿವಾದಗಳು ಮಾತ್ರ ಇನ್ನೂ ಬಿಸಿಯಾಗಿವೆ. ಭಾರತದ ವಿಮಾನ ಅಪಘಾತ ತನಿಖಾ ಸಂಸ್ಥೆ ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯು ತೀವ್ರ ಚರ್ಚೆಗೆ ಕಾರಣವಾಗಿದೆ. ವಿಮಾನ ಟೇಕ್-ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಇಂಧನ ಪೂರೈಕೆಯನ್ನು ನಿಲ್ಲಿಸುವ ಸ್ವಿಚ್‌ಗಳನ್ನು ಆಫ್ ಮಾಡಲಾಗಿತ್ತು ಎಂದು ಬ್ಲ್ಯಾಕ್ ಬಾಕ್ಸ್ ಡೇಟಾ ತಿಳಿಸಿದೆ.

ಕಾಕ್‌ಪಿಟ್ ಧ್ವನಿ ಮುದ್ರಣದಲ್ಲಿ ಒಬ್ಬ ಪೈಲಟ್ "ಏಕೆ ಆಫ್ ಮಾಡಿದೆ?" ಎಂದು ಕೇಳಿರುವುದು ಪತ್ತೆಯಾಗಿದೆ. ಇದು ಅನುಭವಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಆತ್ಮಹತ್ಯೆಯ ಪ್ರಯತ್ನ ಇರಬಹುದು ಎಂಬ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಆದರೆ ಈ ಪೈಲಟ್ ಆತ್ಮಹತ್ಯೆಯ ಸಿದ್ಧಾಂತವನ್ನು ಭಾರತೀಯ ಪೈಲಟ್‌ಗಳ ಒಕ್ಕೂಟ ಮತ್ತು ಮೃತರ ಕುಟುಂಬಸ್ಥರು ತೀವ್ರವಾಗಿ ವಿರೋಧಿಸಿದ್ದಾರೆ. ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಅನ್ನು ರಕ್ಷಿಸಲು ಸತ್ತ ಪೈಲಟ್‌ಗಳ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಒಕ್ಕೂಟ ಆರೋಪಿಸಿದೆ. ಅಪಘಾತಕ್ಕೀಡಾದ ವಿಮಾನವು ಈ ಹಿಂದೆ ಹಲವು ಬಾರಿ ವಿದ್ಯುತ್ ದೋಷಗಳನ್ನು ಎದುರಿಸಿತ್ತು ಎಂಬುದನ್ನು ತಜ್ಞರು ಎತ್ತಿ ತೋರಿಸಿದ್ದಾರೆ. ಹೀಗಾಗಿ ಇದು ತಾಂತ್ರಿಕ ವೈಫಲ್ಯದಿಂದ ಸಂಭವಿಸಿದ ಅಪಘಾತ ಇರಬಹುದು ಎಂದು ವಾದಿಸಲಾಗುತ್ತಿದೆ. ತನಿಖೆಯ ನೈಜತೆಯ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ.

ಒಟ್ಟಾರೆಯಾಗಿ, ಏರ್ ಇಂಡಿಯಾ ದುರಂತದ ಅಧಿಕೃತ ಅಂತಿಮ ವರದಿ ಇನ್ನಷ್ಟೇ ಹೊರಬರಬೇಕಿದೆ. ಕಾರ್ಪೊರೇಟ್ ಹಿತಾಸಕ್ತಿಗಳು, ತಾಂತ್ರಿಕ ವೈಫಲ್ಯಗಳು ಮತ್ತು ಪೈಲಟ್‌ಗಳ ಮೇಲಿನ ಆರೋಪ ಪ್ರತ್ಯಾರೋಪಗಳ ತನಿಖೆಯ ವಿವಾದಗಳು ಒಂದೆಡೆಯಾದರೆ, ಉಮರ್ ಅಲಿ ಅವರಂತಹ ವ್ಯಕ್ತಿಗಳು ತೋರುತ್ತಿರುವ ನಿಷ್ಕಲ್ಮಷ ಮಾನವೀಯತೆ ಮತ್ತೊಂದೆಡೆ ಎದ್ದು ಕಾಣುತ್ತಿದೆ. ವಿಮಾನ ದುರಂತದ ಈ ಕರಾಳ ವರ್ಷದ ನೆನಪಿನಲ್ಲಿ, ರಾಜಕೀಯ ಮತ್ತು ಗಡಿಗಳನ್ನು ಮೀರಿದ ಮಾನವೀಯ ಬಾಂಧವ್ಯವೇ ನೊಂದ ಕುಟುಂಬಗಳಿಗೆ ಏಕೈಕ ಆಸರೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+