ಯುಪಿ: ಯೋಗಿ ರ್‍ಯಾಲಿ ಮೈದಾನದಲ್ಲಿ ಬಿಡಾಡಿ ದನಗಳನ್ನು ಬಿಟ್ಟ ರೈತರು
ಲಕ್ನೋ ಫೆಬ್ರವರಿ 22: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರ್‍ಯಾಲಿಯ ಸ್ಥಳವಾದ ತೆರೆದ ಮೈದಾನದಲ್ಲಿ ಮಂಗಳವಾರ ಬಿಡಾಡಿ ದನಗಳನ್ನು ಬಿಡುವ ಮೂಲಕ ತಮಗಿರುವ ತೊಂದರೆಗಳನ್ನು ಎತ್ತಿ ಹಿಡಿಯಲು ರೈತರು ಪ್ರಯತ್ನಿಸಿದ್ದಾರೆ. ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. ರೈತ ಮುಖಂಡ ರಮಣದೀಪ್ ಸಿಂಗ್ ಮಾನ್ ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ನೂರಾರು ಜಾನುವಾರುಗಳು ತೆರೆದ ಮೈದಾನದಲ್ಲಿ ಇರುವುದನ್ನು ತೋರಿಸುತ್ತದೆ. ಬಿಡಾಡಿ ದನಗಳ ಹಾವಳಿ ಉತ್ತರ ಪ್ರದೇಶ ಚುನಾವಣೆಯ ಪ್ರಮುಖ ಚುನಾವಣಾ ಕಣವಾಗಿದೆ.
"ಬಾರಾಬಂಕಿಯಲ್ಲಿ ಸಿಎಂ ಆದಿತ್ಯನಾಥ್ ಅವರ ಕಾರ್ಯಕ್ರಮಕ್ಕೂ ಮುನ್ನ ರೈತರು ನೂರಾರು ಜಾನುವಾರುಗಳನ್ನು ಹೊಲದಿಂದ ಓಡಿಸಿ ರ್‍ಯಾಲಿ ನಡೆಯುವ ಸ್ಥಳದ ಬಳಿ ಬಿಟ್ಟರು. ಈ ಬಿಡಾಡಿ ದನಗಳನ್ನು ನಿರ್ವಹಿಸಲು ರೈತರಿಗೆ ದಾರಿ ಕಾಣಲಿಲ್ಲ" ಎಂದು ರಮಣದೀಪ್ ಸಿಂಗ್ ಮಾನ್ ವೀಡಿಯೊವನ್ನು ಪೋಸ್ಟ್ ಮಾಡುವಾಗ ಟ್ವೀಟ್ ಮಾಡಿದ್ದಾರೆ. "ಐದು ವರ್ಷಗಳಿಂದ ಯುಪಿ ಸರ್ಕಾರವು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರ್ಯಕ್ರಮಕ್ಕೆ ಮೊದಲು ಬಿಜೆಪಿ ಯಾವ ಪರಿಹಾರವನ್ನು ತರುತ್ತದೆ ಎಂಬುದನ್ನು ರೈತರು ನೋಡಬೇಕೆಂದು ಬಯಸಿದ್ದರು" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಯುಪಿ: ಫೆ. 23 ರಂದು 4 ನೇ ಹಂತದ ಮತದಾನ- ಅಂಕಿ ಅಂಶ
ಇನ್ನೂ ರ್‍ಯಾಲಿಯಲ್ಲಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡರೆ ಯುಪಿಯಲ್ಲಿ ಬಿಡಾಡಿ ದನಗಳ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಯನ್ನು ಸಭೆಯಲ್ಲಿ ನೆನಪಿಸಿದರು. ಕಳೆದ ವಾರ ರ್ಯಾಲಿಯಲ್ಲಿ "ಮಾರ್ಚ್ 10 ರ ನಂತರ ಬೀದಿ ಪ್ರಾಣಿಗಳಿಂದ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಹೊಸ ವ್ಯವಸ್ಥೆಯನ್ನು ಮಾಡಲಾಗುವುದು. ಹಾಲು ನೀಡದ ಪ್ರಾಣಿಗಳ ಸಗಣಿಯಿಂದ ಆದಾಯವನ್ನು ಗಳಿಸುವ ವ್ಯವಸ್ಥೆಯನ್ನು ಮಾಡಲಾಗುವುದು" ಎಂದು ಪ್ರಧಾನಿ ಮೋದಿ ಹೇಳಿದ್ದರು.

ಉತ್ತರ ಪ್ರದೇಶದಲ್ಲಿ ಬಿಡಾಡಿ ದನಗಳು ಹೊಲಗಳಿಗೆ ನುಗ್ಗುವುದು ಮತ್ತು ಬೆಳೆಗಳನ್ನು ಗುರಿಯಾಗಿಸುವುದು ವಿಶೇಷವಾಗಿ ಬುಂದೇಲ್‌ಖಂಡ್ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಇದರಿಂದ ಈ ಭಾಗದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ಜಾನುವಾರುಗಳನ್ನು ಓಡಿಸಲು ರಾತ್ರಿಯಿಡೀ ಜಾಗರಣೆ ಮಾಡಬೇಕಾಗಿದೆ.
ಚುನಾವಣೆಯಲ್ಲಿ ಗೆದ್ದರೆ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಬಿಡಾಡಿ ಹೋರಿಗಳಿಂದ ಗಾಯಗೊಂಡು ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದಾಗಿ ಘೋಷಿಸಿದೆ. ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಡಾಡಿ ದನಗಳು ಅಥವಾ ಇತರ ಪ್ರಾಣಿಗಳಿಂದ ಹಾನಿಗೊಳಗಾದ ಕೃಷಿ ಭೂಮಿಗೆ ಪ್ರತಿ ಎಕರೆಗೆ 3,000 ರೂ.ಗಳ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದೆ.

ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಚುನಾವಣೆಗೆ ಬುಧವಾರ (ಫೆಬ್ರವರಿ 23) ಮತದಾನ ನಡೆಯುತ್ತಿದೆ. ನಾಲ್ಕನೇ ಹಂತದಲ್ಲಿ ಒಂಬತ್ತು ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ 59 ವಿಧಾನಸಭಾ ಸ್ಥಾನಗಳಿಗೆ 624 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಲ್ಕನೇ ಹಂತದ ಮತದಾನವೂ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಸಂಜೆ 6 ರವರೆಗೆ ನಡೆಯಲಿದೆ.
ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಒಟ್ಟು ಏಳು ಹಂತದಲ್ಲಿ ನಡೆಯಲಿದ್ದು ಈಗಾಗಲೇ ಮೂರು ಹಂತದ ಚುನಾವಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೂ ನಾಲ್ಕು ಹಂತದ ಮತದಾನ ನಡೆಯಬೇಕಿದೆ. ಈ ಹಂತದ ಪ್ರಮುಖ ಅಭ್ಯರ್ಥಿಗಳಲ್ಲಿ ಉತ್ತರ ಪ್ರದೇಶದ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಅವರು ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಎರಡು ಬಾರಿ ಕಾರ್ಪೊರೇಟರ್ ಸುರೇಂದ್ರ ಸಿಂಗ್ ಗಾಂಧಿ ಅವರನ್ನು ಎದುರಿಸುತ್ತಿದ್ದಾರೆ.












Click it and Unblock the Notifications