
ಕಾಶಿ ಅಭಿವೃದ್ಧಿ ಇಡೀ ದೇಶಕ್ಕೇ ಮಾರ್ಗಸೂಚಿಯಾಗಬಹುದು: ನರೇಂದ್ರ ಮೋದಿ
ನವದೆಹಲಿ, ಡಿಸೆಂಬರ್ 17: ಕಾಶಿ ಅಭಿವೃದ್ಧಿ ಇಡೀ ದೇಶಕ್ಕೆ ಮಾರ್ಗಸೂಚಿಯಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿ ಮಾತನಾಡಿದರು. ಹಲವಾರು ರಾಜ್ಯಗಳ ಒಟ್ಟು 120 ಮೇಯರ್‌ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಯಾವ ವಾರ್ಡ್ ಸುಂದರವಾಗಿದೆ ಎಂಬುದನ್ನು ಗಮನಿಸುವ ಸ್ಪರ್ಧೆ ನಡೆಸುವಂತೆ ಸಲಹೆ ನೀಡಿದ ಪ್ರಧಾನಿ, ಅದಕ್ಕೆ ಸ್ವಚ್ಛತೆ ಹಾಗೂ ನಗರ ಸೌಂದರ್ಯವನ್ನು ಮಾನದಂಡ ಮಾಡಬೇಕು ಎಂದು ಸೂಚಿಸಿದರು. ಸಂಕಿರಣವನ್ನು 'ನೂತನ ನಗರ ಭಾರತ' ಎಂಬ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿತ್ತು.
ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಹೊಸ ಜಾತಿ ಸಮೀಕರಣ
''ನಗರ ಪ್ರದೇಶಗಳಲ್ಲಿ ವಾಸಿಸಲು ಅನುಕೂಲವಾಗುವಂತೆ ಮಾಡಲು ಇದು ಪ್ರಧಾನ ಮಂತ್ರಿಯವರ ನಿರಂತರ ಪ್ರಯತ್ನವಾಗಿದೆ. ಶಿಥಿಲಗೊಂಡ ನಗರ ಮೂಲಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಅನೇಕ ಯೋಜನೆಗಳು ಮತ್ತು ಉಪಕ್ರಮಗಳನ್ನು ಪ್ರಾರಂಭಿಸಿದೆ'' ಎಂದು ಸಮ್ಮೇಳನಕ್ಕೂ ಮುನ್ನ ಪ್ರಧಾನ ಮಂತ್ರಿಯವರ ಕಾರ್ಯಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ವಾರಾಣಸಿ (ಕಾಶಿ)ಯ ಅಭಿವೃದ್ಧಿ ಕಾರ್ಯಗಳು ಇಡೀ ದೇಶದ ಅಭಿವೃದ್ಧಿಗೆ ಮಾರ್ಗಸೂಚಿಯಾಗಬಹುದು ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ನುಡಿದರು. ''ಭಾರತದ ಬಹುಪಾಲು ನಗರಗಳು ಸಾಂಪ್ರದಾಯಿಕ ನಗರಗಳಾಗಿವೆ. ಸ್ಥಳೀಯ ಕೌಶಲ್ಯಗಳು ಮತ್ತು ಉತ್ಪನ್ನಗಳು ಆ ನಗರದ ಗುರುತಾಗಬಹುದು ಎಂಬುದನ್ನು ಅಂತಹ ಸ್ಥಳಗಳಿಂದ ನಾವು ಕಲಿಯಬಹುದು'' ಎಂದು ಮೋದಿ ಹೇಳಿದರು.
ಸ್ವಚ್ಛತಾ ಕಾರ್ಯಕ್ರಮವನ್ನು ವಾರ್ಷಿಕ ಉಪಕ್ರಮದಂತೆ ಕಾಣಬೇಡಿ ಎಂದು ಮೇಯರ್ಗಳಿಒಗೆ ವಿನಂತಿಸಿದ ಮೋದಿ, ಪ್ರತಿ ತಿಂಗಳು ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದರು.
ತಮ್ಮ ತಮ್ಮ ನಗರಗಳ ಉಜ್ವಲ ಭವಿಷ್ಯ ಮತ್ತು ಅಭಿವೃದ್ಧಿಯನ್ನು ಸಾಧಿಸಲು ಯಾವುದೇ ಅವಕಾಶಗಳನ್ನೂ ಬಿಡಬಾರದು ಎಂದು ಸಮಾವೇಶದಲ್ಲಿ ಹಾಜರಿದ್ದ ಎಲ್ಲಾ ಮೇಯರ್‌ಗಳಿಗೆ ಪ್ರಧಾನಿ ಮೋದಿ ಸೂಚಿಸಿದರು. ''ನಾವು ವಿಕಾಸವನ್ನು ನಂಬಬೇಕು. ಭಾರತಕ್ಕೆ ಇಂದು ಕ್ರಾಂತಿಯ ಅಗತ್ಯವಿಲ್ಲ.
ನಾವು ನಮ್ಮ ಪಾರಂಪರಿಕ ಕಟ್ಟಡಗಳನ್ನು ಕೆಡವಿ ಪುನರ್ನಿರ್ಮಾಣ ಮಾಡುವ ಅಗತ್ಯವಿಲ್ಲ, ಬದಲಿಗೆ ನಾವು ಅವುಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ'' ಎಂದು ಮೋದಿ ಹೇಳಿದರು. ತಮ್ಮ ವ್ಯಾಪ್ತಿಯ ನಗರಗಳನ್ನು ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಮೇಯರ್‌ಗಳಿಗೆ ಪ್ರಧಾನಮಂತ್ರಿಯವರು ಒತ್ತಾಯಿಸಿದರು.
ವಾರಾಣಸಿ ಭೇಟಿ ವೇಳೆ ತಮ್ಮನ್ನು ಭೇಟಿ ಮಾಡಲು ಬಂದಿದ್ದ ದಿವ್ಯಾಂಗ ಮಹಿಳೆಯೋರ್ವರ ಕಾಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪೂರ್ಣವಾಗಿ ಬಗ್ಗಿ ನಮಸ್ಕರಿಸಿದ ಘಟನೆ ನಡೆದಿದೆ. ಡಿ.13ರಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಪ್ರಧಾನಿ ಮೋದಿ ವಾರಾಣಸಿಗೆ ಆಗಮಿಸಿದ್ದರು.
ಉದ್ಘಾಟನೆ ಬಳಿಕ ಮೋದಿ ಅವರನ್ನು ಭೇಟಿ ಮಾಡಲು ಶಿಖಾ ರಸ್ತೋಗಿ ಎಂಬ ವಿಕಲ ಚೇತನ ಮಹಿಳೆ ಬಂದಿದ್ದರು.ಈ ವೇಳೆ ಅವರು ಪ್ರಧಾನಿ ಮೋದಿಯವರನ್ನು ಕಂಡ ತಕ್ಷಣ ನಮಸ್ಕರಿಸಲು ಮುಂದಾಗಿದ್ದಾರೆ. ಆದರೆ ಅವರನ್ನು ತಡೆದ ಮೋದಿಯವರೇ ಆಕೆಯ ಕಾಲಿಗೆ ನಮಸ್ಕರಿಸಿದ್ದಾರೆ. ಈ ಫೋಟೋವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮೋದಿಯವರ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವದ ಅತ್ಯಂತ ಶಕ್ತಿಶಾಲಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿರುವ ಭಾರತದ ಪ್ರಧಾನಿ, ಅಂಗವಿಕಲ ಮಹಿಳೆಯ ಪಾದಗಳನ್ನು ಸ್ಪರ್ಶಿಸಿದ ದೃಶ್ಯವು ಅಲ್ಲಿದ್ದ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಪ್ರಧಾನ ಮಂತ್ರಿಯವರೇ ತನ್ನ ಕಾಲಿಗೆ ನಮಸ್ಕರಿಸಿದ್ದು ನೋಡಿ ಆ ಮಹಿಳೆಯೇ ದಂಗಾಗಿದ್ದರು.
ಶಿಖಾ ಹುಟ್ಟಿನಿಂದಲೇ ಅಂಗವಿಕಲರಾಗಿ ಜನಿಸಿದವರು. ಬಳಿಕ ಮಾತನಾಡಿದ ಶಿಖಾ ಸಹೋದರ ವಿಶಾಲ್ ರಸ್ತೋಗಿ, ನನ್ನ ಸಹೋದರಿಯ ಬಗ್ಗೆ ನನಗೆ ಹೆಮ್ಮೆ ಇದೆ. ಯಾರೂ ಕೂಡ ತಮ್ಮ ಮನೆಯಲ್ಲಿ ಇರುವ ವಿಕಲ ಚೇತನರನ್ನು ದುರ್ಬಲರು ಎಂದು ಪರಿಗಣಿಸಬೇಡಿ ಎಂದು ನಾನು ಮನವಿ ಮಾಡಲು ಬಯಸುತ್ತೇನೆ ಎಂದರು.
ಇದಾದ ಬಳಿಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಮುಂದೆ ಬಂದು ಮಹಿಳೆಗೆ ಶುಭಾಶಯ ಕೋರಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಭದ್ರತಾ ಸಿಬ್ಬಂದಿ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಧಾನಿ ಮಹಿಳೆಯ ಪಾದಗಳನ್ನು ಸ್ಪರ್ಶಿಸಿದ ಚಿತ್ರವು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ.
ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಕೂಡ ಟ್ವಿಟ್ಟರ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಇದನ್ನು ಎಲ್ಲಾ ಮಹಿಳಾ ಶಕ್ತಿಗೆ ಪ್ರಧಾನಿ ಸೂಚಿಸಿದ ಗೌರವ ಎಂದು ಕರೆದಿದ್ದಾರೆ. ಇದು ಎಲ್ಲಾ ಮಹಿಳಾ ಶಕ್ತಿಗೆ ಪ್ರಧಾನಿ ನೀಡಿದ ದೊಡ್ಡ ಗೌರವವಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.