ಪ್ರಿಯಾಂಕಾ ಎದುರೇ ಮೋದಿ ವಿರುದ್ಧ ಅಸಭ್ಯ ಪದ ಬಳಸಿದ ಮಕ್ಕಳು
ಅಮೇಥಿ, ಮೇ 1: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರ ಸುತ್ತಲೂ ನೆರೆದಿದ್ದ ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಪ್ರಿಯಾಂಕಾ ಜತೆಗಿದ್ದ ಕಾಂಗ್ರೆಸ್ ಮುಖಂಡರು 'ಚೌಕಿದಾರ್' ಎಂದು ಕೂಗಿದಾಗ ಮಕ್ಕಳು 'ಚೋರ್ ಹೈ' ಎಂದು ಕೂಗುತ್ತಾರೆ. ಅದಕ್ಕೆ ಪ್ರಿಯಾಂಕಾ ಕೂಡ ನಗುತ್ತಾ ಉತ್ತೇಜನ ನೀಡುತ್ತಿರುವುದು ಕಾಣಿಸಿದೆ. ಆದರೆ, ಮಕ್ಕಳು ಮೋದಿ ಅವರ ವಿರುದ್ಧ ಅಸಭ್ಯ ಪದ ಬಳಕೆ ಮಾಡುವುದು ಸಹ ವಿಡಿಯೋದರಲ್ಲಿ ಗೋಚರಿಸಿದೆ. ಹಾಗೆ ಪದ ಬಳಕೆ ಮಾಡಿದ ಕೂಡಲೇ ಪ್ರಿಯಾಂಕಾ ಮತ್ತು ಅವರ ಜತೆಗಿದ್ದವರು ಅವರನ್ನು ತಡೆದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪ್ರಿಯಾಂಕಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನರೇಂದ್ರ ಮೋದಿ ಅವರ ವಿರುದ್ಧ ರಾಜಕೀಯ ಹೇಳಿಕೆಗಳನ್ನು ನೀಡುವುದು ಸಹಜ. ಆದರೆ, ಇದಕ್ಕೆ ಮಕ್ಕಳನ್ನು ಬಳಸಿಕೊಂಡಿದ್ದಾರೆ ಹಾಗೂ ಅವರಿಂದ ಅಸಭ್ಯ ಪದಗಳನ್ನು ಹೇಳಿಸಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಆರೋಪಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರ ಜತೆಗೆ ಗಾಂಧಿ ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಆದರೆ ವಿಡಿಯೋವನ್ನು ತುಂಡರಿಸಿದ್ದು, ಮಕ್ಕಳಿಗೆ ಈ ರೀತಿ ಹೇಳಬಾರದು ಎಂದು ಬುದ್ದಿ ಹೇಳುವ ದೃಶ್ಯ ಸ್ಮೃತಿ ಹಂಚಿಕೊಂಡಿರುವ ವಿಡಿಯೋದಲ್ಲಿ ಇಲ್ಲ.
|
ಮೂಗಿನ ಕಾರಣಕ್ಕೆ ಪ್ರಸಿದ್ಧರಾದವರು
ಮೂಲದಿಂದಲೂ ನಯವಂತಿಕೆ ಇಲ್ಲದವರು. ಮೂಗಿನ ಕಾರಣಕ್ಕಾಗಿಯೇ ಪ್ರಸಿದ್ಧಿಗೆ ಬಂದ ಜನರು ಪ್ರಧಾನಿಯೊಬ್ಬರ ವಿರುದ್ಧ ಕೊಳಕು ನಿಂದನೆಯ ಭಾಷೆಗೆ ಉತ್ತೇಜನ ನೀಡುವುದನ್ನು ಊಹಿಸಿಕೊಳ್ಳಿ ಎಂದು ಸ್ಮೃತಿ ಹೇಳಿದ್ದಾರೆ.
|
ಪೂರ್ಣ ವಿಡಿಯೋದಲ್ಲಿ ಹೀಗಿದೆ
ಮಕ್ಕಳು ಉದ್ವೇಗದಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೀಳು ಅಭಿರುಚಿಯ ಘೋಷಣೆ ಮಾಡಿದಾಗ ಪ್ರಿಯಾಂಕಾ ಗಾಂಧಿ ಅವರನ್ನು ತಡೆದರು. ಅಂತಹ ಘೋಷಣೆ ಕೂಗುವುದು ಸರಿಯಲ್ಲ. ಒಳ್ಳೆಯ ಮಕ್ಕಳಾಗಬೇಕು ಎಂದು ಬುದ್ದಿಮಾತು ಹೇಳಿದರು ಎಂದು ಕಾಂಗ್ರೆಸ್ ಮುಖಂಡ ಸರಳ್ ಪಟೇಲ್ ಪೂರ್ಣ ವಿಡಿಯೋ ಪೋಸ್ಟ್ ಮಾಡಿ ಹೇಳಿದ್ದಾರೆ.
|
ನೀವೂ ಒಬ್ಬ ತಾಯಿ
ಮೋದಿ ಅವರನ್ನು ಅತ್ಯಂತ ತೀವ್ರವಾಗಿ ದ್ವೇಷಿಸುವ ನೀವು ಆ ಚಿಕ್ಕ ಮಕ್ಕಳು ಕೊಳಕು ಭಾಷೆಯಿಂದ ಬೈಯುವಾಗ ನೀವು ಮುಸಿಮುಸಿ ನಗುತ್ತಾ ಹಿಗ್ಗುತ್ತಿದ್ದಿರಿ. ನೀವೊಬ್ಬ ಸ್ವತಃ ತಾಯಿಯಾಗಿ ನಿಮ್ಮ ನಡೆ ಬಗ್ಗೆ ಒಂದು ನಿಮಿಷವಾದರೂ ನಿಮಗೆ ನಾಚಿಕೆಯಾಗಲಿಲ್ಲವೇ? ಎಂದು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಕಿಡಿಕಾರಿದ್ದಾರೆ.
|
ನಾಚಿಕೆಯಾಗುವುದಿಲ್ಲವೇ?
ನಮಗೆ ಇಂತಹ ವ್ಯಕ್ತಿಗಳು ಅಧಿಕಾರದಲ್ಲಿ ನೋಡುವುದು ಹೇಗೆ? ಮಕ್ಕಳನ್ನು ಬಳಸಿಕೊಂಡಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ರೀಟಾ ಗುಪ್ತಾ ಎಂಬುವವರು ಪ್ರಿಯಾಂಕಾ ವಿರುದ್ಧ ಹರಿಹಾಯ್ದಿದ್ದಾರೆ.
|
ಅವರಿಗೆ ಹೇಳಿಕೊಟ್ಟಿದ್ದಾರೆ
ಈ ಮಕ್ಕಳಿಗೆ ಅವರದ್ದೇ ಅಭಿಪ್ರಾಯಗಳಿವೆ ಎಂದು ಅನಿಸುತ್ತದೆಯೇ? ಯಾರೋ ಒಬ್ಬರು ಅದನ್ನು ಬರೆದು ಹಾಗೆಗೆ ಹೇಳುವಂತೆ ಅವರನ್ನು ಸಿದ್ಧಪಡಿಸಿದ್ದಾರೆ. ಆ ಮಾತನ್ನು ಆ ಮಕ್ಕಳು ಯೋಚಿಸಿರಲೂ ಸಾಧ್ಯವಿಲ್ಲ. ಜವಾಬ್ದಾರಿಯುತ ಪ್ರಜೆ ಪ್ರಿಯಾಂಕಾ ಗಾಂಧಿ ಆ ಕೊಳಕನ್ನು ನಗುತ್ತಾ ಪ್ರೋತ್ಸಾಹಿಸಿದ್ದಾರೆ ಎಂದು ನರೇಶ್ ಚಂದ್ರ ಝಾ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications