ಮಾಯಾವತಿ ಮಾಜಿ ಕಾರ್ಯದರ್ಶಿ ಮೇಲೆ 100 ಕೋಟಿ ತೆರಿಗೆ ವಂಚನೆ ಆರೋಪ
ಲಖನೌ (ಉತ್ತರಪ್ರದೇಶ), ಮಾರ್ಚ್ 12: 100 ಕೋಟಿ ರುಪಾಯಿಯಷ್ಟು ತೆರಿಗೆ ವಂಚನೆ ಮಾಡಿದ ಗುಮಾನಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರ ಮಾಜಿ ಕಾರ್ಯದರ್ಶಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ದೆಹಲಿ ಹಾಗೂ ಲಖನೌದ 12 ಸ್ಥಳಗಳಲ್ಲಿ ದಾಳಿ ನಡೆದಿದೆ.
"ಅಪಾರ ಪ್ರಮಾಣದಲ್ಲಿ ಸಂಪತ್ತು ಹೊಂದಿರುವ ನೇತ್ರಮ್ ನೂರಾರು ಕೋಟಿ ರುಪಾಯಿ ತೆರಿಗೆ ವಂಚನೆ ಮಾಡಿದ್ದಾರೆ. ತೆರಿಗೆ ವಂಚನೆ ಮಾಡಿದ ಆರೋಪವನ್ನು ಬಯಲಿಗೆಳೆಯುವ ಉದ್ದೇಶದಿಂದ ಈ ದಾಳಿ ನಡೆದಿದೆ. ಬೆಳಗ್ಗೆ ಆರಂಭವಾದ ಈ ದಾಳಿ ಸಂಜೆಯ ನಂತರವೂ ಮುಂದುವರಿಯಬಹುದು" ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಮಾಧ್ಯಮ ಸಂಸ್ಥೆಗೆ ತಿಳಿಸಿವೆ.
ನೇತ್ರಮ್ ಅವರು ನಿವೃತ್ತ ಐಎಎಸ್ ಅಧಿಕಾರಿ. ಉತ್ತರಪ್ರದೇಶದಲ್ಲಿ ಮಾಯಾವತಿ 2007ರಿಂದ 12ರ ಮಧ್ಯೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರಿಗೆ ಆಪ್ತರಾಗಿದ್ದರು. ಐದು ವರ್ಷಗಳ ಕಾಲ ಮುಖ್ಯಮಂತ್ರಿ ಪ್ರಿನ್ಸಿಪಲ್ ಸೆಕ್ರೆಟರಿ ಆಗಿದ್ದರು. ದಲಿತ ಸಮುದಾಯಕ್ಕೆ ಸೇರಿದ ಅವರು, ಕೃಷಿ ಇಲಾಖೆ, ಅಬಕಾರಿ, ಕಬ್ಬು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳಲ್ಲಿ ಮುಖ್ಯ ಹುದ್ದೆಗಳಲ್ಲಿ ಇದ್ದರು.

ಆ ನಂತರ 2012ರಲ್ಲಿ ಅಖಿಲೇಶ್ ಯಾದವ್ ಉತ್ತರಪ್ರದೇಶದ ಮುಖ್ಯಮಂತ್ರಿಯಾದ ನಂತರ ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ಹುದ್ದೆಗೆ ನೇಮಕವಾದರು. 2014ರಲ್ಲಿ ಅವರು ಸೇವೆಯಿಂದ ನಿವೃತ್ತರಾದರು. ಕಳೆದ ಜನವರಿ ಆರಂಭದಲ್ಲಿ ಉತ್ತರಪ್ರದೇಶದಲ್ಲಿ ಸ್ಥಾಪಿಸಲಾದ ಆನೆ ಪುತ್ಥಳಿ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು. ಈ ಸಂಬಂಧ ಲಖನೌದಲ್ಲಿ ಆರು ಸ್ಥಳಗಳಲ್ಲಿ ದಾಳಿ ಕೂಡ ನಡೆದಿತ್ತು.
ಇದೀಗ ನೇತ್ರಮ್ ಮೇಲಿನ ಈ ದಾಳಿಯು ಅಕ್ರಮ ಗಣಿ ಹಗರಣದ ಆರೋಪದಲ್ಲಿ ಅಖಿಲೇಶ್ ಯಾದವ್ ಪಾತ್ರದ ಬಗ್ಗೆ ಸಿಬಿಐ ತನಿಖೆ ಆರಂಭಿಸಿದ ಕೆಲ ವಾರಗಳಲ್ಲೇ ಆಗಿದೆ. ಇದೀಗ ಲೋಕಸಭೆ ಚುನಾವಣೆಗೆ ಅಖಿಲೇಶ್ ಹಾಗೂ ಮಾಯಾವತಿ ಅವರ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಈಗ, ಬಿಜೆಪಿ ಬೇಕೆಂತಲೇ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ಚಿಲ್ಲರೆ ರಾಜಕಾರಣ ಹಾಗೂ ರಾಜಕೀಯ ಪಿತೂರಿ ಬಿಜೆಪಿಗೆ ಹೊಸತಲ್ಲ. ದೇಶದ ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಯಾವತಿ ಕಿಡಿ ಕಾರಿದ್ದಾರೆ.












Click it and Unblock the Notifications